ತುಮಕೂರು[ಜ.22]: ‘ನಡೆದಾಡುವ ದೇವರು’ ಸಿದ್ಧಗಂಗಾ ಶ್ರೀಗಳ ಶಿವೈಕ್ಯರಾದಾಗ ಯಾವ ರೀತಿ ಭದ್ರತಾ ವ್ಯವಸ್ಥೆ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರ 10 ದಿನಗಳ ಹಿಂದೆಯೇ ಸಕಲ ರೀತಿಯಲ್ಲೂ ಸಜ್ಜಾಗಿತು

ಚೆನ್ನೈನ ರೆಲಾ ಆಸ್ಪತ್ರೆಯಿಂದ ಮಠಕ್ಕೆ ವಾಪಸಾಗಿ ಮತ್ತೆ ಜ.3ರಂದು ಸಿದ್ಧಗಂಗಾ ಶ್ರೀಗಳು ಮತ್ತೆ ಆಸ್ಪ ತ್ರೆಗೆ ದಾಖಲಾಗಿದಾಗಲೇ ಸರ್ಕಾರ ನಿರಂತರವಾಗಿ ಜಿಲ್ಲಾಡಳಿತದೊಂದಿಗೆ ಸಂಪರ್ಕ ಸಾಧಿಸಿತ್ತು.

ದೇಶದ ಮೂಲೆ ಮೂಲೆಗಳಿಂದ ಗಣ್ಯಾತಿಗಣ್ಯರು ಬರುವ ಹಿನ್ನೆಲೆಯಲ್ಲಿ ತುಮಕೂರು ನಗರದ ಹಾಗೂ ಹೊರವಲಯದಲ್ಲಿ 14 ಹೆಲಿಪ್ಯಾಡ್‌ಗಳನ್ನು ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಿತ್ತು. ಸುಮಾರು 13 ದಿವಸಗಳ ಕಾಲ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಶ್ರೀಗಳು ಚೇತರಿಸಿಕೊಳ್ಳದೇ ಮಠಕ್ಕೆ ವಾಪಸ್ ಆದಾಗ ಸರ್ಕಾರ ಮತ್ತಷ್ಟು ಅಲರ್ಟ್ ಆಗಿತು

ಸಿದ್ಧಗಂಗಾ ಶ್ರೀಗಳಿಗೆ ಲಕ್ಷಾಂತರ ಭಕ್ತರಿದ್ದು ಶಿವೈಕ್ಯರಾದ ದಿನ ಮೂಲೆ ಮೂಲೆಗಳಿಂದ ಭಕ್ತರು ಬರುವ ನಿರೀಕ್ಷೆ ಇದ್ದುದ್ದರಿಂದಲೇ ಭದ್ರತೆ ಸಕಲ ರೀತಿಯಲ್ಲೂ ಸಿದ್ಧವಾಗಿತ್ತು. ಖುದ್ದು ಮುಖ್ಯಮಂತ್ರಿಗಳೇ ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಿಗೆ ದೂರವಾಣಿ ಕರೆ ಮಾಡಿ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆಯು ತ್ತಿದ್ದರು.

ಒಂದು ವೇಳೆ ಶ್ರೀಗಳು ಆಸ್ಪತ್ರೆಯಲ್ಲೇ ಶಿವೈಕ್ಯರಾ ದರೆ ಮೊದಲು ಹಳೆ ಮಠಕ್ಕೆ ಕರೆದುಕೊಂಡು ಬರಬೇಕೆಂದು ಯೋಜಿಸಲಾಗಿತ್ತು. ಒಂದು ವೇಳೆ ಹಳೆ ಮಠ ದಲ್ಲಿ ಶಿವೈಕ್ಯರಾಗಿದ್ದರೆ ಅಲ್ಲಿಂದ ಪಾರ್ಥಿವ ಶರೀರವನ್ನು ಎಲ್ಲಿಗೆ ತರಬೇಕೆಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ವಿಐಪಿಗಳಿಗೆ ಎಲ್ಲಿ ದರ್ಶನ ವ್ಯವಸ್ಥೆ, ಭಕ್ತರಿಗೆ ಹೇಗೆ ವ್ಯವಸ್ಥೆ ಮಾಡಬೇಕು ಎಂಬ ಬಗ್ಗೆಯೂ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಶ್ರೀಗಳ ಕ್ರಿಯಾವಿಧಿ ಎಲ್ಲಿ ಮಾಡುವುದು ಎಂದು ನಿರ್ಧಾರ ಆಗಿತ್ತು. ಹೀಗೆ ಕಳೆದ ೧೦ ದಿವಸಗಳ ಹಿಂದೆಯೇ ಎಲ್ಲಾ ರೀತಿಯಲ್ಲೂ ಸಜ್ಜುಗೊಳಿಸಲಾಗಿತ್ತು. ಈ ಮೊದಲೇ ಭಕ್ತರಿಗೆ ಎಲ್ಲಿಂದ ಪ್ರವೇಶ ಕಲ್ಪಿ ಸಬೇಕು ಎಂದು ನಿರ್ಧಾರ ಆಗಿತ್ತು. ಅದರಂತೆ ಕ್ಯಾತ್ಸಂದ್ರ ಮಾರ್ಗದಿಂದ ವಿಐಪಿಗಳ ಪ್ರವೇಶ, ಮಠದ ಹಿಂಭಾಗದ ಗೇಟ್‌ನಿಂದ ಭಕ್ತರು ಮಠಕ್ಕೆ ಒಳಬರಲು ಅವಕಾಶ ಮಾಡಲಾಗಿತ್ತು. ಈಗಾಗಲೇ ನಿಗದಿ ಮಾಡಿರುವ ಪಾರ್ಕಿಂಗ್ ವ್ಯವಸ್ಥೆ ಕೂಡ ಹತ್ತು ದಿವಸದ ಹಿಂದೆಯೇ ಸಿದ್ಧವಾಗಿತ್ತು. ಎಪಿಎಂಸಿ ಆವರಣ, ಎಚ್‌ಎಂಟಿ ಹಾಗೂ ಮಠದ ಹೊರ ಭಾಗದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿತ್ತು.

ಒಂದು ವೇಳೆ ಝೆಡ್ ಪ್ಲಸ್ ಭದ್ರತೆಯುಳ್ಳ ಪ್ರಧಾನಿ, ರಾಷ್ಟ್ರಪತಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಬರುವ ವಿವಿಐಪಿಗಳಿಗಾಗಿ ತುಮಕೂರು ನಗರದಲ್ಲಿ 7 ಹಾಗೂ ಹೊರ ವಲಯದಲ್ಲಿ 7 ಹೆಲಿಪ್ಯಾಡ್ ನಿರ್ಮಿಸಲಾಗಿತ್ತು.

ಒಂದು ವೇಳೆ ಭಕ್ತರು ಮೆರವಣಿಗೆ ಮಾಡಲೇ ಬೇಕು ಎಂದು ಪಟ್ಟುಹಿಡಿದರೆ ಎಲ್ಲಿಂದ ಎಲ್ಲಿಯವರೆಗೆ ಮಾಡಬೇಕು ಹಾಗೂ ಜೂನಿಯರ್ ಕಾಲೇಜು ಮೈದಾನದಲ್ಲಿ ಪಾರ್ಥಿವ ಶರೀರ ಇಡುವುದರ ಬಗ್ಗೆಯೂ ಚರ್ಚೆ ನಡೆಸಲಾಗಿತ್ತು. ಕಳೆದ10೦ ದಿವಸಗಳ ಹಿಂದೆಯೇ ಎಲ್ಲಾ ರೀತಿಯಲ್ಲೂ ಸರ್ಕಾರ ಸಜ್ಜಾಗಿತ್ತು. ಮೊದಲೇ ಬ್ಯಾರಿಕೇಡ್‌ಗಳನ್ನು ಕಳುಹಿಸಲಾಗಿತ್ತು. ಕ್ರಿಯಾ ವಿಧಿಯ ಸಿದ್ಧತೆ ಪೂರ್ಣವಾಗಿತ್ತು. ಒಟ್ಟಾರೆಯಾಗಿ ಸರ್ಕಾರ ಕಳೆದ ಸಜ್ಜಾಗಿದ್ದರಿಂದ ಯಾವುದೇ ಗೊಂದಲಕ್ಕೆ ಅವಕಾಶವಾಗದೆ ಶ್ರೀಗಳ ಶಿವೈಕ್ಯದ ಸಿದ್ಧತೆ ನೆರವೇರುತ್ತಿದೆ.