Asianet Suvarna News Asianet Suvarna News

ತುಮಕೂರು-ದಾವಣಗೆರೆ, ಗದಗ-ವಾಡಿ ರೈಲ್ವೆ ಯೋಜನೆಗಳಿಗೆ ₹ 93.32 ಕೋಟಿ ಬಿಡುಗಡೆ: ಎಂ.ಬಿ. ಪಾಟೀಲ

ತುಮಕೂರು- ದಾವಣಗೆರೆ ರೈಲ್ವೆ ಯೋಜನೆಗೆ 50 ಕೋಟಿ ರೂ. ಮತ್ತು ಮತ್ತು ಗದಗ- ವಾಡಿ ರೈಲ್ವೆ ಯೋಜನೆಗೆ 43.32 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

Tumkur Davangere and Gadag Wadi railway projects Rs 93 crore released MB Patil info sat
Author
First Published Mar 4, 2024, 5:18 PM IST

ಬೆಂಗಳೂರು (ಮಾ.04): ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿರುವ ತುಮಕೂರು- ದಾವಣಗೆರೆ ರೈಲ್ವೆ ಯೋಜನೆಗೆ 50 ಕೋಟಿ ರೂ. ಮತ್ತು ಮತ್ತು ಗದಗ- ವಾಡಿ ರೈಲ್ವೆ ಯೋಜನೆಗೆ 43.32 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಒಟ್ಟು 93.32 ಕೋಟಿ ರೂ.ಗಳನ್ನು ಈ ಎರಡೂ ಯೋಜನೆಗಳಿಗೆ ಒದಗಿಸಿದ್ದೇವೆ ಎಂದು ಬೃಹತ್ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಸೋಮವಾರ ತಿಳಿಸಿದ್ದಾರೆ. 

ಇದಲ್ಲದೆ, ಮೈಸೂರು ಮತ್ತು ರಾಯಚೂರು ವಿಮಾನ ನಿಲ್ದಾಣಗಳ ಕಾಮಗಾರಿಗಳಿಗೆ ಒಟ್ಟಾಗಿ ₹57.63 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪೈಕಿ ₹14.62 ಕೋಟಿ ಮೊತ್ತವು ರಾಯಚೂರು ವಿಮಾನ ನಿಲ್ದಾಣದ ಕೆಲಸಗಳಿಗೆ ವಿನಿಯೋಗವಾಗಲಿದೆ. ಮೈಸೂರಿನಲ್ಲಿ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಮತ್ತು ಉನ್ನತೀಕರಣಕ್ಕೆ ಈ ಹಣ ಬಳಸಲಾಗುವುದು ಎಂದು  ಹೇಳಿದ್ದಾರೆ.

ಬಾಗಲಕೋಟೆ- ಕುಡಚಿ, ಗದಗ- ವಾಡಿ ರೈಲ್ವೆ ಮಾರ್ಗದ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ಎಂ.ಬಿ. ಪಾಟೀಲ

ರಾಜಧಾನಿಯ ಪಕ್ಕದಲ್ಲಿರುವ ತುಮಕೂರನ್ನು ಮಧ್ಯ ಕರ್ನಾಟಕದೊಂದಿಗೆ ಬೆಸೆಯಲಿರುವ ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯು ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ತ್ವದ್ದಾಗಿದೆ. ಇದರಿಂದಾಗಿ ಉತ್ತರ ಕರ್ನಾಟಕದ ಭಾಗಗಳಿಗೆ ತ್ವರಿತ ರೈಲು ಸಂಚಾರ ಸಾಧ್ಯವಾಗಲಿದೆ. ಹಾಗೆಯೇ ಗದಗ-ವಾಡಿ ರೈಲು ಮಾರ್ಗದ ಅಭಿವೃದ್ಧಿಯಿಂದ ಹುಬ್ಬಳ್ಳಿಯನ್ನು ಒಳಗೊಂಡು ಕಿತ್ತೂರು ಕರ್ನಾಟಕ ಮತ್ತು ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹಲವು ನಗರಗಳಿಗೆ ಸುಲಭವಾಗಿ ತಲುಪಬಹುದಾಗಿದೆ. ಇದರಿಂದ ಆ ಜಿಲ್ಲೆಗಳಲ್ಲಿ ಮೂಲಸೌಕರ್ಯ ವೃದ್ಧಿ ಸೇರಿದಂತೆ ಆರ್ಥಿಕ ಚಟುವಟಿಕೆಗಳಿಗೆ ಇಂಬು ದೊರೆಯಲಿದೆ ಎಂದು ವಿವರಿಸಿದ್ದಾರೆ.

ರೈಲ್ವೆ ಯೋಜನೆಗಳು ಮೂಲತಃ ಕೇಂದ್ರ ಸರಕಾರಕ್ಕೆ ಸೇರಿದ್ದರೂ ಕೆಲವು ಯೋಜನೆಗಳಿಗೆ ತಗುಲುವ ಒಟ್ಟು ವೆಚ್ಚದಲ್ಲಿ ಶೇಕಡ 50ರಷ್ಟನ್ನು ರಾಜ್ಯ ಸರಕಾರವೇ ಭರಿಸುತ್ತದೆ. ಭೂಸ್ವಾಧೀನ ಪ್ರಕ್ರಿಯೆಯು ಮೇಲ್ಕಂಡ ಎರಡೂ ಯೋಜನೆಗಳ ವ್ಯಾಪ್ತಿಯಲ್ಲಿ ಅಂತಿಮ ಹಂತದಲ್ಲಿದೆ. ಇದು ಮುಗಿದ ಕೂಡಲೇ ಯೋಜನೆಯ ಕಾಮಗಾರಿಗಳು ಕ್ಷಿಪ್ರ ಗತಿಯಲ್ಲಿ ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನ್ ಹಾಗೂ ನಾಸಿರ್‌ಸಾಬ್ ಜಿಂದಾಬಾದ್ ಕೂಗಿದವನು ಒಬ್ಬನೇ ವ್ಯಕ್ತಿ: ಎಫ್‌ಎಸ್‌ಎಲ್ ತಜ್ಞ ಫಣೀಂದ್ರ ಮಾಹಿತಿ

ಹಾಗೆಯೇ, ರಾಜ್ಯದ ಎಲ್ಲ ಭಾಗಗಳಲ್ಲೂ ಉದ್ದಿಮೆಗಳು ನೆಲೆಯೂರುತ್ತಿದ್ದು, ಕೃಷಿ ಆಧಾರಿತ ಕೈಗಾರಿಕೆಗಳು ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮಾರುಕಟ್ಟೆ ವಿಸ್ತರಣೆ, ಸುಲಭ ಸಾಗಾಟ, ಸುಗಮ ಮತ್ತು ತ್ವರಿತ ಪ್ರಯಾಣ ಇವುಗಳನ್ನು ಪರಿಗಣಿಸಿ, ಎಲ್ಲಾ ಕಡೆಗಳಲ್ಲೂ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ದೃಷ್ಟಿಯಿಂದ ಮೈಸೂರು ಮತ್ತು ರಾಯಚೂರು ವಿಮಾನ ನಿಲ್ದಾಣ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲೂ ಸುಸಜ್ಜಿತ ವಿಮಾನ ನಿಲ್ದಾಣ ಇರಬೇಕೆನ್ನುವುದು ಸರಕಾರದ ಆಶಯವಾಗಿದೆ ಎಂದು ಪಾಟೀಲ ವಿವರಿಸಿದ್ದಾರೆ.

Follow Us:
Download App:
  • android
  • ios