Asianet Suvarna News Asianet Suvarna News

ಕರ್ನಾಟಕದ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರಲ್ಲಿ ನಿರ್ಮಾಣ

ಕೈಗಾರಿಕೆಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ತುಮಕೂರು ಮತ್ತು ಶಿರಾ ಮಧ್ಯದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವ ಚಿಂತನೆಯಿದೆ ಎಂದು ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ತಿಳಿಸಿದರು.

Tumakuru New Airport Will Need 10 Years Says Minister Murugesh Nirani gvd
Author
Bangalore, First Published Jun 24, 2022, 5:00 AM IST

ತುಮಕೂರು (ಜೂ.24): ಕೈಗಾರಿಕೆಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ತುಮಕೂರು ಮತ್ತು ಶಿರಾ ಮಧ್ಯದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವ ಚಿಂತನೆಯಿದೆ ಎಂದು ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ತಿಳಿಸಿದರು. ಕೈಗಾರಿಕಾ ಅದಾಲತ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ 10 ವರ್ಷದಲ್ಲಿ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಚಿಂತನೆ ಇದ್ದು, ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಇನ್ನೂ ಚರ್ಚೆ ಹಂತದಲ್ಲಿದೆ. 

ತುಮಕೂರು ಮತ್ತು ಶಿರಾ ನಡುವೆ 1 ಸಾವಿರ ಎಕರೆಯಲ್ಲಿ ಕೈಗಾರಿಕಾ ಕಾರಿಡಾರ್‌ನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರ .1 ಸಾವಿರ ಕೋಟಿ ಅನುದಾನ ನೀಡುತ್ತಿದೆ. ಹಾಗೆಯೇ ವಿಜಯಪುರ ಮತ್ತು ಕಲಬುರಗಿ ಮಧ್ಯೆ ಟೆಕ್ಸ್‌ಟೈಲ್‌ ಪಾರ್ಕ್, ಯಾದಗಿರಿ-ರಾಯಚೂರು ಮಧ್ಯೆ ಮೆಘಾ ಡ್ರಗ್‌ ಪಾರ್ಕ್ ಸ್ಥಾಪಿಸಲಾಗುವುದು. ಇದಕ್ಕೂ ಸಹ ಕೇಂದ್ರ ಸರ್ಕಾರ .1 ಸಾವಿರ ಕೋಟಿ ಅನುದಾನ ನೀಡುತ್ತಿದೆ ಎಂದು ಸಚಿವ ನಿರಾಣಿ ತಿಳಿಸಿದರು.

ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿಗೆ 2,689 ಕೋಟಿ ಹೂಡಿಕೆ: ಮುರುಗೇಶ್‌ ನಿರಾಣಿ

ನವೆಂಬರ್‌ನಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ: ರಾಜ್ಯದಲ್ಲಿ ಮತ್ತಷ್ಟು ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಸುವ ಸಲುವಾಗಿ ಮುಂಬರುವ ನವೆಂಬರ್‌ ತಿಂಗಳಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಸಚಿವ ಮುರುಗೇಶ್‌ ನಿರಾಣಿ ಹೇಳಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯಿಲ್ಲ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಸ್ಪಷ್ಟಪಡಿಸಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ನಾಮಪತ್ರ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ದೆಹಲಿಗೆ ಹೋಗಿದ್ದಾರೆ. ಹಾಗಾಗಿ ನಮ್ಮ ಮುಖ್ಯಮಂತ್ರಿಗಳು ಸಹ ಹೋಗಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಉತ್ತರಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮ ಆಡಳಿತ ನಡೆಸುವ ಜತೆಗೆ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಯಾವುದೇ ರೀತಿಯ ನಾಯಕತ್ವ ಬದಲಾವಣೆ ಇಲ್ಲ. ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿಗಳು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಮಹಾರಾಷ್ಟ್ರ ರಾಜ್ಯದ ರಾಜಕಾರಣದ ಬಗ್ಗೆ ನನಗೇನು ಹೆಚ್ಚು ಗೊತ್ತಿಲ್ಲ. ನಾನು ಸಹ ಮಾಧ್ಯಮಗಳಲ್ಲಿ ನೋಡಿದ್ದೇನೆ ಅಷ್ಟೆ. ಕಾಂಗ್ರೆಸ್‌ನವರ ಜತೆ ಹೊಂದಾಣಿಕೆಯಾಗದೆ ಬೇಸತ್ತು ಶಿವಸೇನೆ ಹಾಗೂ ಎನ್‌ಸಿಪಿ ಅವರು ಬಿಟ್ಟು ಬಂದಿದ್ದಾರೆ. ಸ್ಟೇರಿಂಗ್‌, ಬ್ರೇಕ್‌, ಎಕ್ಸಲೇಟರ್‌ ಬೇರೆ ಬೇರೆ ವ್ಯಕ್ತಿಗಳ ಜತೆ ಇದೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರದಲ್ಲಿ ಅಪಘಾತ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಅಸಮಾಧಾನಿತರು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ ಎಂದರು.

ಮಾರುಕಟ್ಟೆ ದರದಲ್ಲಿ ಜಮೀನು ಖರೀದಿಸಲು ಒತ್ತಾಯ, ರೈತರ ಮನವಿಗೆ ಸ್ಪಂದಿಸಿದ ಸಚಿವ ನಿರಾಣಿ

ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬರುವ ನಿರೀಕ್ಷೆ ಇದೆ. ಶಾಸಕರು ಹಾಲಿ ಸರ್ಕಾರದ ಬಗ್ಗೆ ಬೇಸತ್ತು, ಅಸಮಾಧಾನಗೊಂಡು ಅವರಾಗಿಯೇ ಬಿಜೆಪಿ ಕಡೆ ಬರುತ್ತಿದ್ದಾರೆ. ಹಾಗಾಗಿ ಅಲ್ಲೂ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಸೂಚನೆಗಳು ಕಂಡು ಬರುತ್ತಿದೆ ಎಂದರು. ನನಗೆ ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿಗಳು ಕೈಗಾರಿಕಾ ಇಲಾಖೆಯಂತಹ ಬಹಳ ದೊಡ್ಡ ಖಾತೆ ನೀಡಿದ್ದಾರೆ. ಅವರು ಕೊಟ್ಟಿರುವ ಜವಾಬ್ದಾರಿಯನ್ನು ಬಹಳ ಯಶಸ್ವಿಯಾಗಿ ನಿಭಾಯಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇದು ಬಿಟ್ಟು ಯಾವುದೇ ರೀತಿಯ ಬೇರೆ ಅಧಿಕಾರದ ಕಡೆ ಗಮನ ನನಗಿಲ್ಲ ಎಂದರು.

Follow Us:
Download App:
  • android
  • ios