ಖಲಿಫತ್ ಉಗ್ರ ಸಂಘಟನೆಯಲ್ಲಿ ಮುಜಾಯುದ್ದೀನ್ ಗುರುತಿಸಿಕೊಂಡಿದ್ದು, ಸಂಘಟನೆ ಮುಖಂಡರಿಗೆ ತುಮಕೂರಿನಲ್ಲಿ ಸಭೆಗೆ ಅವಕಾಶ ‌ಮಾಡಿಕೊಟ್ಟಿದ್ದ. ಈ ಪ್ರಕರಣದಲ್ಲಿ ಎನ್‌ಐಎ ಬಂಧಿಸಿ ತಿಹಾರ್ ಜೈಲಿಗೆ ಕಳಿಸಿತ್ತು.

ತುಮಕೂರು (ನ.14): ದೇಶದ ರಾಜಧಾನಿ ದೆಹಲಿಯಲ್ಲಿ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಗರದ ಪಿಎಚ್ ಕಾಲೋನಿ ನಿವಾಸಿ ಮುಜಾಯುದ್ದೀನ್‌ನನ್ನು ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಯಿತು. ಎಎಸ್ಪಿ ಪುರುಷೋತ್ತಮ್ ಸ್ವತಃ ವಿಚಾರಣೆ ನಡೆಸಿದರು. ಬಳಿಕ ಬಾಂಬ್‌ ಸ್ಫೋಟದಲ್ಲಿ ಮುಜಾಯುದ್ದೀನ್‌ಗೆ ಯಾವುದೇ ಸಂಪರ್ಕ ಇಲ್ಲ ಎಂಬುದು ಖಚಿತವಾದ ಬಳಿಕ ಆತನನ್ನು ಬಿಟ್ಟು ಕಳುಹಿಸಿದರು.

ಖಲಿಫತ್ ಉಗ್ರ ಸಂಘಟನೆಯಲ್ಲಿ ಮುಜಾಯುದ್ದೀನ್ ಗುರುತಿಸಿಕೊಂಡಿದ್ದು, ಸಂಘಟನೆ ಮುಖಂಡರಿಗೆ ತುಮಕೂರಿನಲ್ಲಿ ಸಭೆಗೆ ಅವಕಾಶ ‌ಮಾಡಿಕೊಟ್ಟಿದ್ದ. ಈ ಪ್ರಕರಣದಲ್ಲಿ ಎನ್‌ಐಎ ಬಂಧಿಸಿ ತಿಹಾರ್ ಜೈಲಿಗೆ ಕಳಿಸಿತ್ತು. 6 ವರ್ಷ ಶಿಕ್ಷೆ ಅನುಭವಿಸಿ ದೆಹಲಿಯ ತಿಹಾರ್ ಜೈಲಿನಿಂದ ಹೊರ ಬಂದಿದ್ದ. ಈ ಹಿನ್ನಲೆಯಲ್ಲಿ ದೆಹಲಿ ಸ್ಫೋಟದ ಮರುದಿನ ಮುಜಾಯುದ್ದೀನ್‌ಗೆ ಖಾಕಿ ಡ್ರಿಲ್ ನಡೆಸಿತ್ತು. ಎರಡು ಗಂಟೆ ವಿಚಾರಣೆ ನಡೆಸಿ ಪೊಲೀಸರು ಬಿಟ್ಟು ಕಳುಹಿಸಿದರು.

ದೆಹಲಿ ಕೆಂಪುಕೋಟೆ ಬಳಿ ಸ್ಫೋಟ ಪ್ರಕರಣ ಖಂಡಿಸಿ ಪ್ರತಿಭಟನೆ

ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಭಯೋತ್ಪಾದಕ ದಾಳಿಯ ಹಿಂದಿರುವ ಇಸ್ಲಾಮಿಕ್ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ, ದಾಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಸಂಸತ್ ಭವನ, ಮುಂಬೈ ದಾಳಿ, ಉರಿ, ಪುಲ್ವಾಮಾ ಹಾಗೂ ಧರ್ಮದ ಗುರುತು ಖಾತ್ರಿ ಮಾಡಿಕೊಂಡು ಪಹಲ್ಗಾಮದಲ್ಲಿ ಅಮಾಯಕ ಹಿಂದೂ ಪ್ರವಾಸಿಗರ ಮೇಲಿನ ದಾಳಿಯಿಂದ ದೇಶದ ಜನರು ಆತಂಕಗೊಂಡಿದ್ದಾರೆ.

ಈ ದಾಳಿಗಳ ಆತಂಕ ಮಾಸುವ ಮುನ್ನವೇ ದೆಹಲಿಯ ಕೆಂಪುಕೋಟೆಯ ಬಳಿ ಭಯೋತ್ಪಾದಕ ಸಂಘಟನೆಯ ದುಷ್ಕರ್ಮಿಗಳು ಮತ್ತೊಂದು ದಾಳಿ ನಡೆಸಿದ್ದು ಕೇಂದ್ರ ಸರ್ಕಾರ ದುಷ್ಕರ್ಮಿಗಳ ವಿರುದ್ಧ ಅತ್ಯಂತ ಕಠಿಣ ನಿಲುವು ತೆಗೆದುಕೊಳ್ಳಬೇಕು. ಭಾರತದಲ್ಲಿ ಭಯೋತ್ಪಾದಕ ಕೃತ್ಯ ಎಸಗುವವರನ್ನು ಹುಡುಕಾಡಿ ಬೇಟೆಯಾಡಬೇಕು ಎಂದು ಆಗ್ರಹಿಸಿದರು. ದೆಹಲಿಯ ಕೆಂಪುಕೋಟೆ ಬಳಿಯ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಆತಂಕಕಾರಿ ಸಂಗತಿಯಾಗಿದೆ.

ಆರೋಗ್ಯ ಸೇವೆಯನ್ನು ನೀಡಬೇಕಾದವರೇ ದೇಶದ ಗಂಡಾಂತರ ತರುವ ಕೃತ್ಯ ನಡೆಸುತ್ತಿದ್ದಾರೆ. ಭಯೋತ್ಪಾದಕರು ಭಾರತದ ಪ್ರಮುಖ ದೇವಸ್ಥಾನಗಳು ಹಾಗೂ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬರುತ್ತಿದೆ. ಕೆಂಪುಕೋಟೆ ಬಳಿಯ ಕಾರು ಸ್ಫೋಟ ಪ್ರಕರಣ ಸೇರಿದಂತೆ ಭಯೋತ್ಪಾದಕ ಕೃತ್ಯದಲ್ಲಿ ಹಿಂದಿರುವ ಎಲ್ಲರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕು. ಧಾರ್ಮಿಕತೆಯ ಸೋಗಿನಲ್ಲಿ ದೇಶ ಒಡೆಯುವ ವಿಚಾರಗಳನ್ನು ಬಿತ್ತುತ್ತಿರುವ ಮದರಸಾ ವ್ಯವಸ್ಥೆಯನ್ನು ಭಾರತದಲ್ಲಿ ನಿಷೇಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.