ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ, ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ತುಮಕೂರಿನಲ್ಲಿ ಸ್ವಪಕ್ಷದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2004ರಲ್ಲಿ ತಾನು ಜೆಡಿಎಸ್‌ನಲ್ಲಿದ್ದಾಗ ಕಾಂಗ್ರೆಸ್‌ಗೆ 'ವೈಟ್ ವಾಶ್' ಮಾಡಿದ್ದೆ. ಅಂತಹ ಸಂದರ್ಭ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ತುಮಕೂರು, (ನ. 13): ಮುಂದಿನ ದಿನದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಖಾಲಿಯಾಗಬಹುದು ಅಂತಹ ಕಾಲ ಬರಬಹುದು ಎಂದು ಸಿಎಂ ಸಿದ್ದರಾಮಯ್ಯ ಆಪ್ತ, ಮಾಜಿ ಸಚಿವ ಕೆಎನ್ ರಾಜಣ್ಣ ಸ್ವಪಕ್ಷದ ವಿರುದ್ಧವೇ ಗುಡುಗಿದ್ದಾರೆ.
ನಿನ್ನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ದೊಡ್ಡೆರಿಯ ಜನಸಂಪರ್ಕ ಸಭೆಯ ವೇದಿಕೆಯಲ್ಲಿ ಭಾಷಣದ ವೇಳೆ ಈ ಹೇಳಿಕೆ ನೀಡಿದ ಮಾಜಿ ಸಚಿವ ಕೆ.ಎನ್ ರಾಜಣ್ಣ ಅವರು, ನಾನು 2004ರಲ್ಲಿ ಜೆಡಿಎಸ್‌ನಿಂದ ಶಾಸಕರಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ 'ವೈಟ್ ವಾಶ್' ಮಾಡಿದ್ದೆ. ಆ ಸಂದರ್ಭ ಮತ್ತೆ ಬರಬಹುದು. ಆದರೆ ಆ ಸಂದರ್ಭ ಬರುತ್ತೋ ಇಲ್ವೋ ಗೊತ್ತಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ.
2004ರಲ್ಲಿ ನಾನು ಜೆಡಿಎಸ್‌ನಿಂದ ದೊಡ್ಡೆರಿ ಶಾಸಕರಾಗಿ ಗೆದ್ದೆ. ಆಗ ಕಾಂಗ್ರೆಸ್ ಪಕ್ಷ ನನಗೆ ಗೌರವ ಕೊಡಲಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್‌ನ್ನು ಸಂಪೂರ್ಣವಾಗಿ ವೈಟ್ ವಾಶ್ ಮಾಡಿದ್ದೆವು. ಈಗ ಮತ್ತೆ ಆ ಸಂದರ್ಭ ಬರುತ್ತೋ ಇಲ್ವೋ ಗೊತ್ತಿಲ್ಲ. ನೋಡೋಣ, ಏನಾಗುತ್ತದೆ ಎಂದು ಫುಲ್ ರೆಬೆಲ್ ಮೂಡ್‌ನಲ್ಲಿ ಕಿಡಿಕಾರಿದರು.
ರಾಜಕೀಯದಲ್ಲಿ ಶಾಶ್ವತವಾಗಿ ಯಾರೂ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ
ರಾಜಕೀಯದಲ್ಲಿ ಶಾಶ್ವತವಾಗಿ ಯಾರೂ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ. ನಾವು ಜಾತಿ ರಹಿತವಾಗಿ, ಪಕ್ಷ ರಹಿತವಾಗಿ ಬಡವರಿಗಾಗಿ ಕೆಲಸ ಮಾಡಿದಾಗ ಅವರ ಆಶೀರ್ವಾದವೇ ನಮಗೆ ಆನೆ ಬಲ. ನಾನು ಮೋಟರ್ ಸೈಕಲ್ ರ್ಯಾಲಿ ನೋಡಿದ್ದೇನೆ. ಈಗ ಒಬ್ಬರೂ ಒಂದು ಬಾವುಟ ಹಿಡಿದಿಲ್ಲ ಯಾಕೆ? ಎಲ್ಲರೂ ನೂರಾರು ಬಾವುಟಗಳನ್ನು ಹಿಡಿಯೋರು. ಯಾರೂ ಹಿಡಿದಿಲ್ಲ ಅನ್ನೋದು ನನಗೆ ಆಶ್ಚರ್ಯ. ಅದಿರಲಿ, ಮುಂದೆ ಯಾವ ಬಾವುಟ ಹಿಡಿಬೇಕು, ಏನು ಮಾಡಬೇಕು ಅಂತ ನೀವೇ ತೀರ್ಮಾನ ಮಾಡಿ. ನಾನಂತೂ ಚುನಾವಣೆಗೆ ನಿಲ್ಲಲ್ಲಾ ಎಂದ ಮೇಲೆ ಆ ಪ್ರಶ್ನೆ ನನಗಿಲ್ಲ ಎಂದರು.
ಮಧುಗಿರಿ ಕ್ಷೇತ್ರದ ಬಗ್ಗೆ ರಾಜಣ್ಣ ಭಾವುಕ:
ನಾನು ಜನರನ್ನ ನಂಬಿ ರಾಜಕಾರಣ ಮಾಡಿದವನು. ನನ್ನದು ಸ್ವಂತ ತಾಲೂಕು ತುಮಕೂರು ಆದ್ರೂ ಮಧುಗಿರಿಯಲ್ಲಿ ಎಂಎಲ್‌ಎ ಆಗಿ ಹಲವು ಬಾರಿ ಗೆದ್ದಿದ್ದೇನೆ. ನನಗೂ ಮಧುಗಿರಿಗೂ ಏನು ಸಂಬಂಧ ಎಂದು ನಾನೇ ಕೆಲವು ಬಾರಿ ಕುಳಿತು ಯೋಚನೆ ಮಾಡುತ್ತೇನೆ. ಮಧುಗಿರಿಯಲ್ಲಿ ನಾನು ಇಷ್ಟು ಬಾರಿ ಎಮ್ ಎಲ್ ಎ ಆಗಿ ಬಿಟ್ಟಿದ್ದೇನೆ. ಏನು ಋಣನೋ, ಸಂಬಂಧ ಇದೆಯೋ ಗೊತ್ತಿಲ್ಲ. ನಾನು ಎಂಎಲ್‌ಎ ಆದರೆ ತುಮಕೂರು ಸಿಟಿಯಲ್ಲಿ ಅಥವಾ ಗ್ರಾಮಾಂತರದಲ್ಲಾಗಬೇಕು ತುಮಕೂರು ನನ್ನ ಸ್ವಂತ ತಾಲೂಕು. ಆದರೆ ಮಧುಗಿರಿ ಕ್ಷೇತ್ರದ ಜನರು ನನಗೆ ರಾಜಕೀಯ ಜನ್ಮ ನೀಡಿದರು ಎಂದು ಭಾವುಕರಾದರು.
ಕಾಂಗ್ರೆಸ್‌ನಲ್ಲಿ ಈಗಾಗಲೇ ಆಂತರಿಕ ಗೊಂದಲಗಳು ತೀವ್ರಗೊಂಡಿವೆ. ರಾಜಣ್ಣ ಅವರ ಈ ಹೇಳಿಕೆಯು ಜಿಲ್ಲಾ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿದೆ. ಮುಂದಿನ ದಿನಗಳಲ್ಲಿ ಇದು ರಾಜಕೀಯ ಬೆಳವಣಿಗೆಗೆ ತಿರುವು ನೀಡಬಹುದು ಕಾದು ನೋಡಬೇಕು.
