Shoe thrown at CJI Gavai: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ವಕೀಲನೋರ್ವ ಶೂ ಎಸೆದ ಘಟನೆಯನ್ನು ಮಾಜಿ ಸಚಿವ ಕೆ.ಎನ್. ರಾಜಣ್ಣ ತೀವ್ರವಾಗಿ ಖಂಡಿಸಿದ್ದಾರೆ. ಇದು ದಲಿತ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿಯನ್ನು ಗುರಿಯಾಗಿಸಿಕೊಂಡು ಸನಾತನವಾದಿಗಳು ನಡೆಸಿದ ಕೃತ್ಯ ಎಂದರು.

ತುಮಕೂರು (ಅ.8): ಮುಖ್ಯ ನ್ಯಾಯಮೂರ್ತಿಗೆ ಶೂ ಎಸೆಯುತ್ತಾರೆಂದರೆ ನಮ್ಮ ದೇಶ ಎತ್ತ ಸಾಗುತ್ತಿದೆ ಎಂಬುದರ ದಿಕ್ಸೂಚಿಯಾಗಿದೆ ಎಂದು ಮಾಜಿ ಸಚಿವ ಕೆಎನ್ ರಾಜಣ್ಣ ತೀವ್ರವಾಗಿ ಖಂಡಿಸಿದರು.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಗವಾಯಿ ಅವರ ಮೇಲೆ ವಕೀಲನೋರ್ವ ಶೂ ಎಸೆದ ಆರೋಪ ಪ್ರಕರಣ ಸಂಬಂಧ ಇಂದು ತುಮಕೂರಿನ ಮಧುಗಿರಿಯಲ್ಲಿ ಪ್ರತಿಕ್ರಿಯಿಸಿದರು.

ಈ ಘಟನೆಯನ್ನು ಇಡೀ ದೇಶವೇ ಖಂಡಿಸಬೇಕಾದ ಸಂದರ್ಭವಿದು. ನಾನು ಕೂಡ ಈ ಕೃತ್ಯವನ್ನು ಖಂಡಿಸುತ್ತೇನೆ. ಆ ವಕೀಲ ತಾನು ಮಾಡಿದ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸದೇ, 'ನಾನು ಜೈಲಿಗೆ ಹೋಗಲೂ ಸಿದ್ಧ' ಎಂದು ಕಠೋರವಾಗಿ ಹೇಳಿರುವುದು ವಿಕೃತ ಮನಸ್ಸಿನ ಸೂಚನೆಯಾಗಿದೆ ಎಂದರು, ಮುಂದುವರಿದು, ಪೊಲೀಸರು ಸುಮೋಟೊ ಕೇಸ್ ದಾಖಲಿಸಿ, ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಿಜೆಐ ರಾಜಕೀಯ ನೇಮಕಾತಿ ಅಲ್ಲ:

ಸಿಜೆಐ ಗವಾಯಿ ಅವರು ತಮ್ಮ ಉತ್ತಮ ನಡವಳಿಕೆ, ವಿದ್ವತ್ತು, ಮತ್ತು ಸಾಮರ್ಥ್ಯದಿಂದ ನ್ಯಾಯಾಲಯದ ಕೊಲಿಜಿಯಂನಿಂದ ಆಯ್ಕೆಯಾಗಿದ್ದಾರೆ. ಇದು ರಾಜಕೀಯ ನೇಮಕಾತಿಯಲ್ಲ, ಬದಲಿಗೆ ಅವರ ಗುಣಮಟ್ಟ ಮತ್ತು ವಿದ್ವತ್ತಿನ ಆಧಾರದ ಮೇಲೆ ಆಯ್ಕೆಯಾಗಿದೆ. ಆದರೆ, ಕೇವಲ ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಸನಾತನವಾದಿಗಳು ಶೂ ಎಸೆಯುವುದು, ಅಗೌರವ ತೋರುವುದು ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ಇದೊಂದು ಕರಾಳ ಘಟನೆ. ಆರೋಪಿ ವಕೀಲನ ವಯಸ್ಸು 70-71 ವರ್ಷವಾಗಿದ್ದು, 40 ವರ್ಷಗಳ ವಕೀಲ ವೃತ್ತಿಯ ಅನುಭವ ಹೊಂದಿದ್ದರೂ ಈ ರೀತಿಯ ಕೃತ್ಯ ಎಸಗಿರುವುದು ನಂಬುವುದಕ್ಕೇ ಆಗುತ್ತಿಲ್ಲ ಎಂದರು.

ದಲಿತರೆಲ್ಲ ಸನಾತನ ವಿರೋಧಿಗಳಲ್ಲ:

ಆತ ದೇವಸ್ಥಾನದಲ್ಲಿ ವಿಷ್ಣು ವಿಗ್ರಹ ಸ್ಥಾಪನೆಗೆ ಸಂಬಂಧಿಸಿದ ಪಿಐಎಲ್ ಹಾಕಿದ್ದ. ಆದರೆ, ಆ ಸ್ಥಳ ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದು ಸಿಜೆಐ ಗವಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ, ಆತ ದಲಿತರಾದ ಗವಾಯಿ ಸನಾತನ ಧರ್ಮಕ್ಕೆ ವಿರುದ್ಧವಾಗಿದ್ದಾರೆ ಎಂಬ ಕಲ್ಪನೆಯಿಂದ ಈ ಕೃತ್ಯಕ್ಕೆ ಮುಂದಾಗಿರಬಹುದು ಮತ್ತೆ ಈತನ ಹಿಂದೆ ಯಾರಿದ್ದಾರೆ ಇಲ್ಲಾ ಎಂದು ನಾನು ಹೇಳಲಿಕ್ಕೆ ಹೋಗೊದಿಲ್ಲ. ಆದ್ರೆ ಸನಾತನವಾದಿಗಳು ಸನಾತನ ಧರ್ಮದಿಂದ ಪ್ರೇರಣೆಯಾಗಿ ಈರೀತಿ ಮಾಡಿರಬಹುದು ಎಂದರು.

ಈ ಸನಾತನವಾದಿಗಳ ಧೈರ್ಯ ಮೆಚ್ಚಬೇಕು:

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಮುಂದೆ ಶೂ ಎಸೆಯುತ್ತಾರೆಂದರೆ ಸನಾತನವಾದಿಗಳ ಈ ಧೈರ್ಯವನ್ನು ಮೆಚ್ಚಬೇಕು. ಕೃತ್ಯವು ದೇಶದ ಭವಿಷ್ಯದ ಬಗ್ಗೆ ಆತಂಕಕಾರಿಯಾಗಿದೆ. ಆರೋಪಿಯನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಈ ಘಟನೆಯಿಂದ ಸನಾತನವಾದಿಗಳ ನಡವಳಿಕೆಯ ಬಗ್ಗೆ ದೇಶದಲ್ಲಿ ಚರ್ಚೆ ಆಗಬೇಕಿದೆ ಎಂದರು.