ಅಂತರಾಷ್ಟ್ರೀಯ ಸ್ಯಾಕ್ಸೋಫೋನ್ ವಾದಕ ನಿಧನ: ಕನ್ನಡ ಪ್ರಾಧಿಕಾರ ಅಧ್ಯಕ್ಷ ಸಂತಾಪ
* ಅಂತರಾಷ್ಟ್ರೀಯ ಸ್ಯಾಕ್ಸೋಫೋನ್ ವಾದಕ ನಿಧನಕ್ಕೆ ಕನ್ನಡ ಪ್ರಾಧಿಕಾರ ಅಧ್ಯಕ್ಷ ಸಂತಾಪ
* ಖ್ಯಾತ ಸ್ಯಾಕ್ಸೋಫೋನ್ ವಾದಕ ಮಚ್ಚೇಂದ್ರನಾಥ್ ನಿಧನಕ್ಕೆ ಸಂತಾಪ ಸೂಚಿಸಿದ ಟಿ ಎಸ್ ನಾಗಾಭರಣ
* ಶೋಕ ಸಂದೇಶದ ಮೂಲಕ ಸಂತಾಪ
ಬೆಂಗಳೂರು, (ಜೂನ್.05): ಅಂತರಾಷ್ಟ್ರೀಯ ಸ್ಯಾಕ್ಸೋಫೋನ್ ವಾದಕ ಮಚ್ಚೇಂದ್ರನಾಥ್ ನಿಧನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ ಸಂತಾಪ ಸೂಚಿಸಿದ್ದಾರೆ.
ಸ್ಯಾಕ್ಸೋಫೋನ್ ಮೂಲಕ ಕೇಳುಗರ ಮಂತ್ರಮುಗ್ಧರನ್ನಾಗಿಸುತ್ತಿದ್ದ ಅಂತರಾಷ್ಟ್ರೀಯ ಖ್ಯಾತ ಸ್ಯಾಕ್ಸೋಫೋನ್ ವಾದಕ ಮಚ್ಚೇಂದ್ರನಾಥ್ ಜೋಗಿ ಅವರು ಕೊರೋನಾಗೆ ಬಲಿಯಾಗಿದ್ದು ನಿಜಕ್ಕೂ ದುರದೃಷ್ಟಕರ ಎಂದು ಟಿ ಎಸ್ ನಾಗಾಭರಣ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಆರ್ಯಭಟ, ಸಮಾಜ ರತ್ನ, ದೇವರ ದಾಸಿಮಯ್ಯ ರಾಷ್ಟೀಯ ರತ್ನ ಪ್ರಶಸ್ತಿ, ಸೇರಿದಂತೆ ಹತ್ತಾರು ಪ್ರಶಸ್ತಿ-ಪುರಸ್ಕಾರಗಳು ಸನ್ಮಾನಗಳು ದೊರೆತಿದ್ದು ಅವರ ಕಲಾಪ್ರತಿಭೆಗೆ ದೊರೆತ ಗೌರವವಾಗಿದೆ. ಇಂತಹ ದೈತ್ಯ ಪ್ರತಿಭೆ ಇಂದು ನಿಧನರಾಗಿದ್ದಾರೆ.
ಕಳೆದ 34 ವರ್ಷಗಳಿಂದ ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ಸ್ಯಾಕ್ಸೊಫೋನ್ ಕಲಾವಿದರಾಗಿದ್ದರು. ದೇಶ-ವಿದೇಶಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನೀಡಿ ಅಪಾರ ಅಭಿಮಾನಿ ವೃಂದವನ್ನು ಸಂಪಾದಿಸಿಕೊಂಡಿದ್ದರು.
ಸಂಗೀತ ಕಲಾವಿದೆಯಾಗಿದ್ದ ಇವರ ಪತ್ನಿ ಸುಶೀಲ ಅವರೂ ಸಹ ಕೇವಲ ನಾಲ್ಕು ದಿನಗಳ ಹಿಂದಷ್ಟೇ ಕೊರೋನಾಗೆ ಬಲಿಯಾಗಿದ್ದರು. ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡಿರುವ ಇವರ ಮಕ್ಕಳಿಗೆ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಪ್ರಾಪ್ತಿಯಾಗಲಿ. ದಂಪತಿಗಳಿಗೆ ಸದ್ಗತಿ ದೊರೆಯಲಿ. ಅವರಿಗೆ ಭಾವಪೂರ್ಣ ನಮನಗಳು ಎಂದು ಸಂತಾಪ ಸೂಚಿಸಿದ್ದಾರೆ.