ಬೆಂಗಳೂರು, (ಡಿ.13): ಸಾರಿಗೆ ನೌಕರರ ಜೊತೆಗಿನ ರಾಜ್ಯ ಸರ್ಕಾರದ ಸಂಧಾನ ಸಭೆ ಸಕ್ಸಸ್ ಆಗಿದ್ದು, ಮೂರು ದಿನಗಳಿಂದ ನಡೆಯುತ್ತಿದ್ದ ಸಾರಿಗೆ ಧರಣಿ ಸುಖಾಂತ್ಯವಾಗಿದೆ.

ಇಂದು (ಭಾನುವಾರ) ಸಾರಿಗೆ ನೌಕರರ ಮುಖಂಡರು ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ನೇತೃತ್ವದ ಸರಣಿ ಸಭೆ ನಡೆದಿದ್ದು, ಅಂತಿಮವಾಗಿ  ಯಶಸ್ವಿಯಾಗಿದೆ. ಸಾರಿಗೆ ನೌಕರರ ಬೇಡಿಕೆಗಳಲ್ಲಿ ಸರ್ಕಾರ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಟ್ಟು ಬಸ್ ಏರಲು ಮುಂದಾಗಿದ್ದಾರೆ. 

ಈಗಾಗಲೇ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ತೆರಳಬೇಕಿದ್ದ ಬಸ್‌ಗಳ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

ಈ ಕುರಿತು ಮಾತನಾಡಿದ KSRTC ಸಂಘದ ರಾಜ್ಯಾಧ್ಯಕ್ಷ ಚಂದ್ರು, ಸರ್ಕಾರ ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಸರ್ಕಾರಿ ನೌಕರರಾಗಿ ಪರಿಗಣನೆ ಬಗ್ಗೆ ಮುಂದಿನ ದಿನದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಕೊವಿಡ್​ ಸಂಕಷ್ಟದ ಹಿನ್ನೆಲೆಯಲ್ಲಿ ಮುಂದಿನ ದಿನದಲ್ಲಿ ಈ ಕುರಿತು ಸರ್ಕಾರ ನಿರ್ಧರಿಸುವ ಭರವಸೆ ನಮಗೆ ನೀಡಿದ್ದಾರೆ ಎಂದು ಚಂದ್ರು ಹೇಳಿದರು. 

ಸವದಿ ಹೇಳಿದ್ದೇನು..?
ಮತ್ತೊಂದೆಡೆ ವಿಕಾಸಸೌಧದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸುದ್ದಿಗೋಷ್ಠಿ ನಡೆಸಿ, ನಿಗಮದ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಮಾಡಲಾಗುವುದು. ಕೊವಿಡ್​ನಿಂದ ಮೃತ ನೌಕರರ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡಲಾಗುವುದು. ಜೊತೆಗೆ, ಅಂತರ್ ನಿಗಮ ವರ್ಗಾವಣೆ ಬಗ್ಗೆ ಸಮಿತಿ ರಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

'ಸರ್ಕಾರಿ ನೌಕರರನ್ನಾಗಿಸಲು ಸಾಧ್ಯವೇ ಇಲ್ಲ'
ಓಟಿ, ಭತ್ಯೆ ಮತ್ತೆ ಜನವರಿ ನಂತರ ಪ್ರಾರಂಭಿಸುತ್ತೇವೆ. ಜೊತೆಗೆ, ನೌಕರರಿಗೆ ಕಿರುಕುಳ ತಡೆಯಲು ಸಮಿತಿ ರಚಿಸುತ್ತೇವೆ. 2020ರ ಜನವರಿಯಿಂದ ವೇತನ ಪರಿಷ್ಕರಣೆ ಆಗದ ಹಿನ್ನೆಲೆಯಲ್ಲಿ 6ನೇ ವೇತನ ಆಯೋಗ ಜಾರಿ ಬಗ್ಗೆಯೂ ಮನವಿ ಮಾಡಿದ್ದಾರೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾದ ಬಳಿಕ ಪರಿಷ್ಕರಣೆ ಮಾಡುತ್ತೇವೆ ಎಂದು ಸವದಿ ಹೇಳಿದರು.

ಸಾರಿಗೆ ನೌಕರರು 10ರಿಂದ 12 ಬೇಡಿಕೆ ಮುಂದಿಟ್ಟಿದ್ದರು. ಆದರೆ, ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಾಧ್ಯವೇ ಇಲ್ಲ. ರಾಜ್ಯದಲ್ಲಿ 50 ನಿಗಮಗಳಿವೆ ಹಾಗಾಗಿ ಇದು ಸಾಧ್ಯವೇ ಇಲ್ಲ. ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಾಧ್ಯವೇ ಇಲ್ಲ ಎಂದು ಸವದಿ ಸ್ಪಷ್ಟಪಡಿಸಿದರು.

ಒಟ್ಟಿನಲ್ಲಿ ಸಾರಿಗೆ ನೌಕರರ ಬೇಡಿಕೆಗಳಲ್ಲಿ ಬಹುತೇ ಈಡೇರಿಸುವುದಕ್ಕೆ ಸರ್ಕಾರ ಒಪ್ಪಿಕೊಂಡಿದ್ದು, ಮೂರು ದಿನಗಳ ಬಳಿಕ ನೌಕರರು ಪ್ರತಿಭಟನೆ ಬಿಟ್ಟು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.