ಬಸ್ ಟಿಕೆಟ್ ದರ ಶೇ.20ರಷ್ಟು ಏರಿಕೆ..?

https://static.asianetnews.com/images/authors/b348a094-0bef-5801-a1f6-61e57071185f.jpg
First Published 19, Jul 2018, 7:44 AM IST
Transport Minister DC Thammanna Hints to Hike Bus Fares
Highlights

ಡೀಸೆಲ್ ದರ ಏರಿಕೆ ಬೆನ್ನಲ್ಲೇ ಸಾರಿಗೆ ಇಲಾಖೆಯು ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಸಂಬಂಧ ಸಿದ್ಧತೆ ಆರಂಭಿಸಿದೆ.

ಬೆಂಗಳೂರು : ಡೀಸೆಲ್ ದರ ಏರಿಕೆ ಬೆನ್ನಲ್ಲೇ ಸಾರಿಗೆ ಇಲಾಖೆಯು ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಸಂಬಂಧ ಸಿದ್ಧತೆ ಆರಂಭಿಸಿದೆ. ಎಲ್ಲ ಸಾರಿಗೆ ನಿಗಮಗಳಿಂದ ಶೇ.20 ರಷ್ಟು ಪ್ರಯಾಣ ದರ ಹೆಚ್ಚಳ ಮಾಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ದರ ಏರಿಕೆ ಅನಿವಾರ್ಯ ಎಂಬುದನ್ನು ಬಲವಾಗಿ ಪ್ರತಿಪಾದಿಸಿವೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಎಲ್ಲಾ ಸಾರಿಗೆ ನಿಗಮಗಳ ವತಿಯಿಂದ ಶೇ.20 ರಷ್ಟು ದರ ಹೆಚ್ಚಳಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದರು. ಡೀಸೆಲ್ ಮೇಲಿನ ತೆರಿಗೆ ಸತತ ಹೆಚ್ಚಳದಿಂದಾಗಿ ಸಾರಿಗೆ ನಿಗಮಗಳು ನಷ್ಟ ಅನುಭವಿಸುತ್ತಿವೆ. ಹೀಗಾಗಿ ನಷ್ಟ ಸರಿತೂಗಿಸಲು ಒಂದು ಸಾವಿರ ಕೋಟಿ ರು. ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು. 

ಸುದೀರ್ಘ ಅವಧಿಯಿಂದ ಸಾರಿಗೆ ನಿಗಮಗಳು ತೈಲ ಬೆಲೆ ಏರಿಕೆಯ ನಷ್ಟ ಹೊರುತ್ತಿದ್ದು, ಇದನ್ನು ಸರಿದೂಗಿಸಲು ಅನುದಾನ ನೀಡುವುದರ  ಜೊತೆಗೆ ಪ್ರಯಾಣ ದರ ಹೆಚ್ಚಳವನ್ನೂ ಮಾಡಿದರೆ ಮಾತ್ರ ನಿಗಮಗಳು ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ನಷ್ಟದ ಹೊರೆಯಿಂದ ತತ್ತರಿಸಿ ಸಾರಿಗೆ ನಿಗಮಗಳು ಉತ್ತಮ ಗುಣಮಟ್ಟದ ಸೇವೆ ನೀಡಲು ಕಷ್ಟವಾಗುತ್ತದೆ ಎಂಬ ಅಳಲನ್ನು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಆದರೆ, ಬಜೆಟ್‌ನಲ್ಲಿ ಹಲವು ತೆರಿಗೆಗಳನ್ನು ಹೆಚ್ಚಳಗೊಳಿಸಿ ಪ್ರತಿಪಕ್ಷ ಹಾಗೂ ಸಾರ್ವಜನಿಕರಿಂದ ಟೀಕೆ ಎದುರಿಸುತ್ತಿರುವ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಅವರು ಬಸ್ ಪ್ರಯಾಣ ದರ ಏರಿಕೆಗೆ ಒಪ್ಪಿಗೆ ನೀಡುವ ಅನುಮಾನವಿದೆ. ಸಾರಿಗೆ ನಿಗಮಗಳು ಶೇ.20 ರಷ್ಟು ಏರಿಕೆ ಕೇಳಿದ್ದರೂ ಮಾತುಕತೆ ವೇಳೆ ಆ ಪ್ರಮಾಣ ಕಡಮೆಗೊಳಿಸುವ ಸಾಧ್ಯತೆಯಿದೆ. ಇನ್ನಷ್ಟು ಕಾಲ ಪ್ರಯಾಣ ದರ ಏರಿಕೆಯನ್ನು ತಳ್ಳಿ ಹಾಕುವ ಸಂಭವವೇ ಹೆಚ್ಚು ಎನ್ನಲಾಗುತ್ತಿದೆ.

loader