ಓಲಾ, ಉಬರ್ ಕಂಪನಿಗಳ ವಿರುದ್ದ ಸಾರ್ವಜನಿಕರಿಂದ ಹೆಚ್ಚುವರಿ ದರ ವಸೂಲಿ ಮಾಡುತ್ತಿರುವ ಬಗ್ಗೆ ದಿನನಿತ್ಯ  ದೂರು ನೀಡುತ್ತಿರುವ ಹಿನ್ನೆಲೆ,ಇಂದು ಓಲಾ, ಉಬರ್ ಕಂಪನಿಗಳ‌ ಪ್ರತಿನಿಧಿಗಳ ಜೊತೆ  ಮಹತ್ವದ ಸಭೆ ನಡೆಯಲಿದೆ

ಬೆಂಗಳೂರು (ಅ.11) : ಓಲಾ, ಉಬರ್ ಕಂಪನಿಗಳ ವಿರುದ್ದ ಸಾರ್ವಜನಿಕರಿಂದ ಹೆಚ್ಚುವರಿ ದರ ವಸೂಲಿ ಮಾಡುತ್ತಿರುವ ಬಗ್ಗೆ ದಿನನಿತ್ಯ ದೂರುಗಳು ಬರುತ್ತಿರುವ ಹಿನ್ನೆಲೆ ಇಂದು ಓಲಾ, ಉಬರ್ ಕಂಪನಿಗಳ‌ ಪ್ರತಿನಿಧಿಗಳ ಜೊತೆ ಮಹತ್ವದ ಸಭೆ ನಡೆಯಲಿದೆ. ಮಹತ್ವದ ಸಭೆಯಲ್ಲಿ ದರ ವಸೂಲಿಗೆ ಸರ್ಕಾರ ಇಂದೇ ಬ್ರೇಕ್ ಹಾಕುವ ಸಾಧ್ಯತೆ.

ಮಧ್ಯಾಹ್ನ 2 ಗಂಟೆಗೆ ಶಾಂತಿನಗರದ ಪ್ರಧಾನ ಕಛೇರಿಯಲ್ಲಿ ಸಾರಿಗೆ ಆಯುಕ್ತ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಸಭೆಯಲ್ಲಿ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಹೇಮಂತ್ ಹಾಗೂ ಜಂಟಿ ಆಯುಕ್ತ ಹಾಲಸ್ವಾಮಿ ಭಾಗಿಯಾಗಲಿದ್ದಾರೆ.

ಇಂದೇ ಓಲಾ, ಉಬರ್ ಆಟೋಗಳ ಭವಿಷ್ಯ ನಿರ್ಧಾರ?

ಓಲಾ, ಉಬರ್ ಕಂಪನಿಗಳು ಸಾರ್ವಜನಿಕರಿಂದ ಹೆಚ್ಚುವರಿ ದರ ವಸೂಲಿ ಮಾಡುತ್ತಿರುವುದರಿಂದ ಸಾರ್ವಜನಿಕರು ಸಾರಿಗೆ ಇಲಾಖೆಗೆ ದೂರು ಸಲ್ಲಿಸಿದ್ದರು. ಸಾರಿಗೆ ಇಲಾಖೆ ಆಯುಕ್ತರು ಕಂಪನಿಗಳಿಗೆ ನೋಟಿಸ್ ನೀಡಿದ್ದರು. ನೋಟಿಸ್ ನೀಡಿ ಮೂರು ದಿನಗಳಾದರೂ ಕಂಪನಿಗಳು ಪ್ರತಿಕ್ರಿಯಿಸಿರಲಿಲ್ಲ. ಹೀಗಾಗಿ ಆರ್‌ಟಿಓ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದು ಆಟೋಗಳನ್ನು ವಶಕ್ಕೆ ಪಡೆದು ಕಂಪನಿಗಳಿಗೆ ಬಿಸಿ ಮುಟ್ಟಿಸಿದ್ದರು. ಹೀಗಾಗಿ ಇಂದು ಮಹತ್ವದ ಸಭೆ ಹಾಜರಾಗಲು ಕಂಪನಿಗಳು ಒಪ್ಪಿಕೊಂಡಿವೆ.

ಸಾರಿಗೆ ಇಲಾಖೆಯ ನಿಯಮಗಳು, ನಿರ್ಧಾರಗಳಿಗೆ ಒಪ್ಪಿಕೊಂಡ್ರೆ ಓಲಾ, ಊಬರ್ ಕಂಪನಿಗಳನ್ನ ನಡೆಸಲು ಅನುಮತಿ ನೀಡಬಹುದು. ಸಾರಿಗೆ ಅಧಿಕಾರಿಗಳ ಆದೇಶ, ನಿಯಮಗಳನ್ನ ಮೀರಿ ದರ ವಸೂಲಿ ಮುಂದುವರಿಸಿದರೆ ಸರ್ಕಾರ ಓಲಾ, ಉಬರ್ ಕಂಪನಿಗಳನ್ನ ಬ್ಯಾನ್ ಮಾಡುವ ಸಾಧ್ಯತೆ ಇದೆ. ಹಿಂದೆಯೂ ಸಾರಿಗೆ ಇಲಾಖೆ ನೋಟಿಸ್ ನೀಡಿತ್ತು.ಆಗ ನಮ್ಮ ಮೇಲೆ ಕ್ರಮ ಕೈಗೊಳ್ಳದಂತೆ ಕೋರ್ಟ್‌ನಿಂದ ಸ್ಟೇ ತಂದಿದ್ದ ಕಂಪನಿಗಳು. ಹೀಗಾಗಿ ಈ ಮಹತ್ವದ ಸಭೆಯಲ್ಲಿ. ಕಾನೂನು ಕೋಶದ ಅಭಿಪ್ರಾಯದ ಮೇಲೆ ಕ್ರಮ ಕೈಗೊಳ್ಳುವ ಕುರಿತು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.

ಸಭೆಯಲ್ಲಿ ಈ ವಿಚಾರಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ

  • ನಿಗದಿತ ದರ 0-2 ಕೀ. ಮೀ ಗೆ, 30 ರೂ ದರ ನಿಗದಿಯಿದೆ.
  • ಕಂಪನಿಗಳಿಗೆ 10 ರೂ. ಹೆಚ್ಚು ಮಾಡಲು ಅವಕಾಶ ನೀಡಬಹುದು
  • ಕನಿಷ್ಟ ದರದ 30 ರೂಪಾಯಿಗೆ 10 ರೂ. ಹೆಚ್ಚಳ ಮಾಡಿದ್ರೆ ಆ್ಯಪ್ ಆಧಾರಿತ ಕಂಪನಿಗಳಿಗೆ ಲಾಭವೇ ಹೊರತು, ನಷ್ಟವಿಲ್ಲ ಎಂದು ತಿಳಿಸಬಹುದು
  •  ಆನ್ಲೈನ್ ಸಾರಿಗೆ ನೆಟ್ವರ್ಕ್ ಕಂಪನಿಗಳಾಗಿರುವ ಓಲಾ, ಉಬರ್ ಗೆ ಇಂತಿಷ್ಟೆ ಪ್ರಯಾಣದ ದರ ನಿಗಧಿ ಮಾಡಬೇಕೆಂದು ಸೂಚನೆ ನೀಡಬಹುದು
  • ಕರ್ನಾಟಕ ರಾಜ್ಯ ಬೇಡಿಕೆ ಆಧರಿತ ಸಾರಿಗೆ ತಂತ್ರಜ್ಞಾನ ನಿಯಮ –2016ರ ಅಡಿಯಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸಲು ಕಂಪನಿಗಳಿಗೆ ಪರವಾನಗಿ ನೀಡಲಾಗಿದೆ
  •  ಸಾರಿಗೆ ಇಲಾಖೆಯ ಆದೇಶ, ನಿಯಮಗಳನ್ನ ಪಾಲಿಸದಿದ್ರೆ, 2016ರ ಅಡಿಯಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸಲು ಕಂಪನಿಗಳಿಗೆ ಕೊಟ್ಟ ಪರವಾನಗಿ ರದ್ದು ಮಾಡಲಾಗುವುದೆಂದು ಎಚ್ಚರಿಕೆ ನೀಡುವ ಸಾಧ್ಯತೆ
  • ರ್ಯಾಪಿಡೋ ಬೈಕ್ ಸೇವೆಗೂ ವಾನ್೯ ಮಾಡುವ ಸಾಧ್ಯತೆ
  • Rapido bike ಆ್ಯಪ್ ಮೂಲಕ ಟ್ಯಾಕ್ಸಿ, ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನಗಳ ಸೇವೆ ಒದಗಿಸುತ್ತಿರುವ ರೊಪೆನ್ ಟ್ರಾನ್ಸ್‌ಪೋರ್ಟೇಷನ್ ಪ್ರೈವೆಟ್ ಲಿಮಿಟೆಡ್‌ ಗೂ ಸಾರಿಗೆ ಇಲಾಖೆ ನೋಟಿಸ್ ನೀಡಿದೆ
  •  ಇದರಂತೆ ಕರ್ನಾಟಕ ರಾಜ್ಯ ಬೇಡಿಕೆ ಆಧರಿತ ಸಾರಿಗೆ ತಂತ್ರಜ್ಞಾನ ನಿಯಮ ಮತ್ತು ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ–2021ರ ಅಡಿಯಲ್ಲಿ ಪರವಾನಗಿ ಪಡೆದು ಕಾರ್ಯನಿರ್ವಹಿಸಬೇಕು ಎಂದು ಆದೇಶ ನೀಡುವ ಸಾಧ್ಯತೆ