ವಿಶೇಷ ವರದಿ

ಬೆಂಗಳೂರು(ಜೂ.18): ಕೊರೋನಾ ಲಾಕ್‌ಡೌನ್‌ ಎಫೆಕ್ಟ್ನಿಂದ ನೌಕರರ ವೇತನಕ್ಕೂ ರಾಜ್ಯ ಸರ್ಕಾರದ ಕದತಟ್ಟುವ ಹಂತಕ್ಕೆ ಕುಸಿದಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳು, ಇದೀಗ ಡೀಸೆಲ್‌ ದರದ ದಿನೇ ದಿನೇ ಏರಿಕೆಯಿಂದ ಪ್ರತಿ ದಿನ ಸುಮಾರು 70 ಲಕ್ಷ ರು. ಹೆಚ್ಚುವರಿ ಆರ್ಥಿಕ ಹೊರೆಯ ಭಾರ ಹೊರುವ ಸ್ಥಿತಿ ನಿರ್ಮಾಣವಾಗಿದೆ.

ಲಾಕ್‌ಡೌನ್‌ ಸಡಿಲಿಕೆ ಬಳಿಕ ಬಸ್‌ ಸೇವೆ ಪುನರಾರಂಭವಾದರೂ ಕೊರೋನಾ ಭೀತಿಯಿಂದ ಪ್ರಯಾಣಿಕರ ಸಂಖ್ಯೆ ಶೇ.10 ದಾಟಿಲ್ಲ. ಈ ನಡುವೆಯೂ ನಾಲ್ಕು ರಸ್ತೆ ಸಾರಿಗೆ ನಿಗಮಗಳು ಶೇ.70ರಷ್ಟುಬಸ್‌ ಕಾರ್ಯಾಚರಣೆ ಮಾಡುತ್ತಿವೆ. ಇಲ್ಲಿ ಸಾರಿಗೆ ಆದಾಯಕ್ಕಿಂತ ಕಾರ್ಯಾಚರಣೆ ವೆಚ್ಚವವೇ ದುಬಾರಿಯಾಗಿ ನಷ್ಟದ ಪ್ರಮಾಣ ಹೆಚ್ಚಾಗಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಪ್ರತಿ ದಿನ ಡೀಸೆಲ್‌ ದರ ಹೆಚ್ಚಳವಾಗುತ್ತಿರುವುದು ಸಾರಿಗೆ ನಿಗಮಗಳನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಪ್ರತಿ ದಿನ ಸರಾಸರಿ 15.44 ಲಕ್ಷ ಲೀಟರ್‌ ಡೀಸೆಲ್‌ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಲ್ಲಿ ಸಗಟು ದರದಲ್ಲಿ ಡೀಸೆಲ್‌ ಖರೀದಿಸಲಾಗುತ್ತಿದೆ. ಒಮ್ಮೆಗೆ ಲಕ್ಷಾಂತರ ಲೀಟರ್‌ ಖರೀದಿಸುವುದರಿಂದ ತೈಲ ಕಂಪನಿಗಳು ಡೀಸೆಲ್‌ ದರದಲ್ಲಿ ಕೊಂಚ ರಿಯಾಯಿತಿ ನೀಡುತ್ತಿವೆ. ಗಮನಾರ್ಹ ಸಂಗತಿ ಎಂದರೆ, ಪ್ರತಿ ನಿತ್ಯ ತೈಲ ದರ ಹೆಚ್ಚಳವಾಗುತ್ತಿರುವುದರಿಂದ ಸಗಟು ಡೀಸೆಲ್‌ ದರವೂ ಏರಿಕೆಯಾಗುತ್ತಿದೆ. ಹೀಗಾಗಿ ಮೊದಲೇ ಸಂಕಷ್ಟದಲ್ಲಿರುವ ಸಾರಿಗೆ ನಿಗಮಗಳಿಗೆ ಪ್ರತಿ ನಿತ್ಯ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಮಾಸಿಕ 20.78 ಕೋಟಿ ರು. ಹೆಚ್ಚುವರಿ:

ಜೂನ್‌ 1ರಂದು ಲೀಟರ್‌ ಡೀಸೆಲ್‌ ಸಗಟು ದರ ಸರಾಸರಿ 63.50 ರು. ಇತ್ತು. ಜೂ.16ರಂದು ಸಗಟು ಡೀಸೆಲ್‌ ದರ ಸರಾಸರಿ 68.20 ರು. ಮುಟ್ಟಿದೆ. ಅಂದರೆ, ಈ ಅವಧಿಯಲ್ಲಿ ಲೀಟರ್‌ಗೆ ಡೀಸೆಲ್‌ ದರ ಸುಮಾರು 4 ರು. ಹೆಚ್ಚಳವಾಗಿದೆ. ಅದರಲ್ಲೂ ಕಳೆದ ಹತ್ತು ದಿನಗಳಿಂದ ಡೀಸೆಲ್‌ ದರ ಸರಾಸರಿ 50 ಪೈಸೆ ಏರಿಕೆಯಾಗಿದೆ. ಇದೇ ಸ್ಥಿತಿ ಮುಂದುವರಿದರೆ ಪ್ರತಿ ದಿನ 69.26 ಲಕ್ಷ ರು. ಹಾಗೂ ಮಾಸಿಕ 20.78 ಕೋಟಿ ರು. ಆರ್ಥಿಕ ಹೊರೆ ಹೆಚ್ಚಾಗಲಿದೆ.

ನಿಗಮಗಳ ಭವಿಷ್ಯ ಕಠಿಣ:

ಒಂದೆಡೆ ಬೆಟ್ಟದ ಹಾಗೆ ಬೆಳೆದಿರುವ ಸಾಲ, ನಿರಂತರ ಆದಾಯ ನಷ್ಟವಾದರೆ ಮತ್ತೊಂದೆಡೆ ಕಾರ್ಯಾಚರಣೆ ವೆಚ್ಚ ಹೆಚ್ಚಳ, ಡೀಸೆಲ್‌ ದರ ಏರಿಕೆ ಹೊಡೆತದಿಂದ ಕಂಗೆಟ್ಟಿರುವ ಸಾರಿಗೆ ನಿಗಮಗಳು ಭವಿಷ್ಯದಲ್ಲಿ ಕಠಿಣ ಸವಾಲುಗಳನ್ನು ಎದುರಿಸಬೇಕಿದೆ. ನಾಲ್ಕು ನಿಗಮಗಳಿಂದ 1.20 ಲಕ್ಷ ನೌಕರರು ಇದ್ದು, ಅವರಿಗೆ ವೇತನ ನೀಡಲಾಗದಷ್ಟುಆರ್ಥಿಕವಾಗಿ ಕುಸಿದಿವೆ. ಸಂಕಷ್ಟದ ಪರಿಸ್ಥಿತಿಯಲ್ಲಿ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ಕಳೆದೆರಡು ತಿಂಗಳಿಂದ ನೌಕರರ ವೇತನ ಪಾವತಿಗೆ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಪ್ರಯಾಣಿಕರ ಸಂಖ್ಯೆ ಏರಿಕೆಯಾಗದಿದ್ದರೆ ಇನ್ನೂ ಕೆಲ ತಿಂಗಳು ನೌಕರರ ವೇತನಕ್ಕೆ ಸರ್ಕಾರದ ಕದ ತಟ್ಟುವುದು ಅನಿವಾರ್ಯ.