ರಾಜ್ಯದಲ್ಲಿನ ಗ್ರಾಪಂಗಳಲ್ಲಿನ ಸಿಬ್ಬಂದಿ, ಅಧಿಕಾರಿಗಳ ವರ್ಗಾವಣೆಯನ್ನು ಪಾರದರ್ಶಕವಾಗಿ ಮಾಡುವ ಸಲುವಾಗಿ ಕೌನ್ಸೆಲಿಂಗ್‌ ವ್ಯವಸ್ಥೆ ಅಳವಡಿಸುವ ಚಿಂತನೆ ನಡೆಸಲಾಗಿದೆ. ಮುಂದಿನ ವರ್ಷದಿಂದ ಪಿಡಿಒಗಳ ವರ್ಗಾವಣೆಗೆ ಕೌನ್ಸೆಲಿಂಗ್‌ ವ್ಯವಸ್ಥೆ ಅಳವಡಿಸಿಕೊಳ್ಳಲಾಗುವುದು: ಪ್ರಿಯಾಂಕ್‌ ಖರ್ಗೆ 

ವಿಧಾನ ಪರಿಷತ್‌(ಜು.14): ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸೇರಿದಂತೆ ಗ್ರಾಮಪಂಚಾಯತಿ ಸಿಬ್ಬಂದಿ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಮುಂದಿನ ವರ್ಷದಿಂದ ಕೌನ್ಸ್ಸೆಲಿಂಗ್‌ ಮೂಲಕ ವರ್ಗಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಘೋಷಿಸಿದರು.

ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ ಅವರು ಗ್ರಾಮ ಪಂಚಾಯತಿಗಳನ್ನು ಸದೃಢಗೊಳಿಸುವುದು ಸೇರಿದಂತೆ ಗ್ರಾಪಂಗಳಲ್ಲಿನ ಸಮಸ್ಯೆಗಳ ಕುರಿತು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ರಾಜ್ಯದಲ್ಲಿನ ಗ್ರಾಪಂಗಳಲ್ಲಿನ ಸಿಬ್ಬಂದಿ, ಅಧಿಕಾರಿಗಳ ವರ್ಗಾವಣೆಯನ್ನು ಪಾರದರ್ಶಕವಾಗಿ ಮಾಡುವ ಸಲುವಾಗಿ ಕೌನ್ಸೆಲಿಂಗ್‌ ವ್ಯವಸ್ಥೆ ಅಳವಡಿಸುವ ಚಿಂತನೆ ನಡೆಸಲಾಗಿದೆ. ಮುಂದಿನ ವರ್ಷದಿಂದ ಪಿಡಿಒಗಳ ವರ್ಗಾವಣೆಗೆ ಕೌನ್ಸೆಲಿಂಗ್‌ ವ್ಯವಸ್ಥೆ ಅಳವಡಿಸಿಕೊಳ್ಳಲಾಗುವುದು. ಅದರಲ್ಲಿ ಯಶ ಕಂಡರೆ ಉಳಿದ ಸಿಬ್ಬಂದಿ, ಅಧಿಕಾರಿಗಳಿಗೂ ಅದೇ ವ್ಯವಸ್ಥೆ ಅಳವಡಿಸಲಾಗುವುದು ಎಂದು ಹೇಳಿದರು.

8 ವರ್ಷ ಒಂದೇ ಠಾಣೆಯಲ್ಲಿದ್ದ 100 ಸಿಬ್ಬಂದಿ ಎತ್ತಂಗಡಿ; ಜ್ಯು.ಖರ್ಗೆ ಬೀಸಿದ ಚಾಟಿಗೆ ಕಲಬುರ್ಗಿ ಖಾಕಿ ಹೈಲರ್ಟ್!

ಗ್ರಾಪಂಗಳ ಆಡಳಿತ ಹಾಗೂ ಅವುಗಳ ಕಾರ್ಯವೈಖರಿ ಮೇಲೆ ನಿಗಾವಹಿಸಲು ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತಿದೆ. ಅದಕ್ಕಾಗಿ ಪಂಚತಂತ್ರ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇನ್ನೊಂದು ತಿಂಗಳಲ್ಲಿ ಪಂಚತಂತ್ರ 2.0 ತಂತ್ರಾಂಶವನ್ನು ಬಿಡುಗಡೆ ಮಾಡಲಾಗುವುದು. ಈ ತಂತ್ರಾಂಶದ ಮೂಲಕ ಗ್ರಾಪಂಗಳಲ್ಲಿ ವಸೂಲಿಯಾಗುತ್ತಿರುವ ತೆರಿಗೆ ಪ್ರಮಾಣ, ಸಿಬ್ಬಂದಿ, ಅಧಿಕಾರಿಗಳ ಹಾಜರಾತಿ, ವೇತನ, ಗ್ರಾಮ ಸಭೆ, ಪ್ರಗತಿ ಪರಿಶೀಲನಾ ಸಭೆ, ಅವುಗಳಲ್ಲಿ ತೆಗೆದುಕೊಂಡ ನಿರ್ಣಗಳ ಮಾಹಿತಿ ಕ್ಷಣಾರ್ಧದಲ್ಲಿ ದೊರೆಯಲಿದೆ ಎಂದು ವಿವರಿಸಿದರು.

ಪಂಚತಂತ್ರ 2.0 ತಂತ್ರಾಂಶ ಬಳಕೆ ಕುರಿತಂತೆ ಎಲ್ಲ ಗ್ರಾಪಂಗಳ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಅದರ ಜತೆಗೆ ಗ್ರಾಪಂಗಳಿಗೆ ಸಮರ್ಪಕ ಹಾರ್ಡ್‌ವೇರ್‌ ಮತ್ತು ಸಾಫ್‌್ಟವೇರ್‌ ಪೂರೈಸಲಾಗುವುದು. ಸಿಎಸ್‌ಆರ್‌ ನಿಧಿ ಮೂಲಕ ಖಾಸಗಿ ಸಂಸ್ಥೆಗಳು ಹಾರ್ಡ್‌ವೇರ್‌ ಪೂರೈಕೆಗೆ ಮುಂದೆ ಬಂದಿವೆ ಎಂದು ತಿಳಿಸಿದರು.

ಸದ್ಯ ಪ್ರಾಯೋಗಿಕವಾಗಿ ಗ್ರಾಪಂಗಳಲ್ಲಿ ನಡೆದಿರುವ 11 ಸಾವಿರ ಪ್ರಗತಿ ಪರಿಶೀಲನಾ ಸಭೆಗಳನ್ನು ಪಂಚತಂತ್ರ 2.0 ತಂತ್ರಾಂಶದ ಮೂಲಕ ನಿಗಾವಹಿಸಲಾಗಿದೆ. ಅದರಲ್ಲಿ ಕೋರಂ ಇಲ್ಲದೆ ಶೇ. 70 ಸಭೆಗಳು ರದ್ದಾಗಿರುವ ವರದಿಯಾಗುತ್ತಿದೆ. ಗ್ರಾಪಂಗಳ ಆಡಳಿತ ಇನ್ನಷ್ಟುಉತ್ತಮಗೊಳಿಸಲು ನೂತನ ತಂತ್ರಾಂಶ ಸಹಕಾರಿಯಾಗಲಿದೆ ಎಂದರು.

ಗ್ರಾಪಂ ವ್ಯಾಪ್ತಿಯಲ್ಲಿಯೇ ಜನನ ಮತ್ತು ಮರಣ ಪ್ರಮಾಣಪತ್ರ ನೀಡುವ ಸಲುವಾಗಿ ಪಿಡಿಒಗಳಿಗೆ ಉಪ ನೋಂದಣಾಧಿಕಾರಿಗಳ ಅಧಿಕಾರ ನೀಡಲಾಗಿದೆ. ಈ ಕುರಿತಂತೆ ಜುಲೈ 7ರಂದು ಅಧಿಸೂಚನೆಯನ್ನೂ ಪ್ರಕಟಿಸಲಾಗಿದೆ. ಜನನ ಮತ್ತು ಮರಣ ಪ್ರಮಾಣಪತ್ರ ನೀಡುವುದಕ್ಕೆ ಅರ್ಜಿ ಸಲ್ಲಿಸಿದ 30 ದಿನಗಳೊಳಗಾಗಿ ಪಿಡಿಒಗಳು ನಿರ್ಧಾರ ತೆಗೆದುಕೊಳ್ಳಬೇಕಿದೆ. ಆನಂತರ ಆ ಅರ್ಜಿ ಗ್ರಾಮ ಲೆಕ್ಕಿಗರಿಗೆ ಹೋಗಲಿದೆ ಎಂದು ಹೇಳಿದರು.

ಬಿಜೆಪಿಗೆ ವಿರೋಧ ಪಕ್ಷದ ನಾಯಕರು ಎಲ್ಲಿದ್ದಾರೆ ?: ಪ್ರಿಯಾಂಕ್ ಖರ್ಗೆ ಲೇವಡಿ

ಗ್ರಾಪಂಗಳು ಸರಿಯಾಗಿ ತೆರಿಗೆ ಸಂಗ್ರಹಿಸಿದರೆ 8 ಸಾವಿರ ಕೋಟಿ ರು.ವರೆಗೆ ತೆರಿಗೆ ಸಂಗ್ರಹಿಸಬಹುದು ಎಂಬ ಅಂದಾಜಿದೆ. ಅದಕ್ಕೆ ತಕ್ಕಂತೆ ತೆರಿಗೆ ಸಂಗ್ರಹಕ್ಕೆ ವೇಗ ನೀಡಲಾಗುವುದು. ಜತೆಗೆ ಗ್ರಾಪಂ ವ್ಯಾಪ್ತಿಯಲ್ಲಿನ ಮೊಬೈಲ್‌ ಟವರ್‌ಗಳಿಂದ ಸಮರ್ಪಕವಾಗಿ ಶುಲ್ಕ ವಸೂಲಿ ಮಾಡಲಾಗುವುದು. ಒಂದು ವೇಳೆ ಶುಲ್ಕ ಪಾವತಿಸದಿದ್ದರೆ ಮೊಬೈಲ್‌ ಟವರ್‌ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಂಚಾಯ್ತಿ ರಾಜ್‌ ಕಾಯ್ದೆಗೆ 30 ವರ್ಷದ ಸಂಭ್ರಮ

ವಿಧಾನಪರಿಷತ್‌: ಪ್ರಜಾಪ್ರಭುತ್ವವನ್ನು ಬೇರು ಮಟ್ಟದಲ್ಲಿ ಸದೃಢಗೊಳಿಸುವುದಕ್ಕೆ ಪೂರಕವಾಗಿರುವ ಪಂಚಾಯತ್‌ ರಾಜ್‌ ಕಾಯ್ದೆ ಜಾರಿಗೆ ಬಂದು 30 ವರ್ಷವಾಗುತ್ತಿದೆ. ಈ ಸಂಭ್ರಮವನ್ನು ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಿ ಘೋಷಿಸಲಾಗುವುದು. ಮುಂದಿನ 1 ವರ್ಷದಲ್ಲಿ ಗ್ರಾಪಂಗಳನ್ನು ಸಬಲೀಕರಣ ಮತ್ತು ಸರಳೀಕರಣ ಮಾಡುವ ಸಂಕಲ್ಪ ಹೊಂದಿದ್ದೇವೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.