ಬೆಂಗಳೂರು(ಜ.03): ಹೊಸ ವರ್ಷ ಆರಂಭದಲ್ಲೇ ನೈಋುತ್ಯ ರೈಲ್ವೆಯು ಬೆಂಗಳೂರು ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(ಕೆಐಎ) ತೆರಳುವ ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದೆ. ನಗರದಿಂದ ಕೆಐಎ ಹಾಲ್ಟ್‌ ರೈಲು ನಿಲ್ದಾಣದ ನಡುವೆ ಮೂರು ಜೊತೆ ಡೆಮು ರೈಲುಗಳ ಕಾರ್ಯಾಚರಣೆ ಆರಂಭಿಸುತ್ತಿದೆ.

ಸದರಿ ಮಾರ್ಗದಲ್ಲಿ ಮೊದಲ ರೈಲು ಜ.4ರಂದು ಮುಂಜಾನೆ 4.45ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್‌ಆರ್‌) ರೈಲು ನಿಲ್ದಾಣದಿಂದ ಕೆಐಎ ಹಾಲ್ಟ್‌ ರೈಲು ನಿಲ್ದಾಣದತ್ತ ತೆರಳಲಿದೆ. ತನ್ಮೂಲಕ ಪ್ರಯಾಣಿಕರು ಇನ್ನು ಮುಂದೆ ನಗರದ ಕೇಂದ್ರ ಭಾಗದಿಂದ ಕೆಐಎ ವಿಮಾನ ನಿಲ್ದಾಣಕ್ಕೆ ಒಂದೂವರೆ ತಾಸಿನಲ್ಲಿ ಪ್ರಯಾಣಿಸಬಹುದಾಗಿದೆ.

ಸಿಎಂ ತವರಲ್ಲಿ ಮಹತ್ವದ ಸಭೆ: ಬಿಎಸ್‌ವೈ, ಅರುಣ್ ಸಿಂಗ ನೇತೃತ್ವದಲ್ಲಿ ಕಾರ್ಯತಂತ್ರ...!

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣಕ್ಕೆ ಹೊಂದಿಕೊಂಡಂತೆ ಕೆಐಎ ಹಾಲ್ಟ್‌ ರೈಲು ನಿಲ್ದಾಣ ನಿರ್ಮಿಸಲಾಗಿದೆ. ಈ ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಬಿಎಂಟಿಸಿಯ ಫೀಡರ್‌ ಬಸ್‌ನಲ್ಲಿ 15 ನಿಮಿಷದಲ್ಲಿ ತಲುಪಬಹುದಾಗಿದೆ.

ವಾರದಲ್ಲಿ ಆರು ದಿನ ಸಂಚಾರ:

ಈ ಮೂರು ಜೊತೆ ಡೆಮು ರೈಲುಗಳು ವಾರದ ಭಾನುವಾರ ಹೊರತುಪಡಿಸಿ ಉಳಿದ ಆರು ದಿನ ಸದರಿ ಮಾರ್ಗದಲ್ಲಿ ಸಂಚರಿಸಲಿವೆ. ಕೆಎಸ್‌ಆರ್‌ ರೈಲು ನಿಲ್ದಾಣದಿಂದ ಕೆಐಎ ಹಾಲ್ಟ್‌ ನಿಲ್ದಾಣಕ್ಕೆ .15 ಪ್ರಯಾಣ ದರ ನಿಗದಿಗೊಳಿಸಲಾಗಿದೆ. ಈ ರೈಲು ಬೆಂಗಳೂರು ಕಂಟೋನ್ಮೆಂಟ್‌, ಚನ್ನಸಂದ್ರ, ಯಲಹಂಕ ಮಾರ್ಗದಲ್ಲಿ ಹಾಲ್ಟ್‌ ನಿಲ್ದಾಣಕ್ಕೆ ತೆರಳಿದೆ. ಯಶವಂತಪುರದಿಂದ ಹಾಲ್ಟ್‌ ನಿಲ್ದಾಣಕ್ಕೆ .10 ಪ್ರಯಾಣ ದರ ನಿಗದಿ ಮಾಡಿದ್ದು, ಈ ರೈಲು ಲೊಟ್ಟೆಗೊಲ್ಲಹಳ್ಳಿ, ಯಲಹಂಕ ಮಾರ್ಗದಲ್ಲಿ ಹಾಲ್ಟ್‌ ನಿಲ್ದಾಣಕ್ಕೆ ಸಂಚರಿಸಲಿದೆ. ಅಂತೆಯೆ ಯಲಹಂಕದಿಂದ ಹಾಲ್ಟ್‌ ನಿಲ್ದಾಣಕ್ಕೆ .10 ಪ್ರಯಾಣ ದರ ನಿಗದಿ ಮಾಡಲಾಗಿದೆ.

ಈ ಮೂರು ಜೊತೆ ಡೆಮು ರೈಲು ಹೊರತುಪಡಿಸಿ ಸದರಿ ಮಾರ್ಗದಲ್ಲಿ ಸಂಚರಿಸುವ ಬೆಂಗಳೂರು ಕಂಟೋನ್ಮೆಂಟ್‌- ಬಂಗಾರಪೇಟೆ, ಯಶವಂತಪುರ- ಬಂಗಾರಪೇಟೆ, ಬಂಗಾರಪೇಟೆ- ಯಶವಂತಪುರ, ಬಂಗಾರಪೇಟೆ- ಕೆಎಸ್‌ಆರ್‌ ರೈಲು ನಿಲ್ದಾಣ ಈ ನಾಲ್ಕು ಡೆಮು ರೈಲುಗಳನ್ನು ಕೆಐಎ ಹಾಲ್ಟ್‌ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಎಂಟು ಬೋಗಿಗಳ ರೈಲು

ಈ ಮಾರ್ಗದಲ್ಲಿ ಎರಡು ಮೋಟಾರು ಕಾರು ಬೋಗಿ ಸೇರಿದಂತೆ ಒಟ್ಟು ಎಂಟು ಬೋಗಿಗಳ ಡೆಮು ರೈಲುಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ರೈಲಿನ ಪ್ರತಿ ಬೋಗಿಯು 84 ಆಸನಗಳು ಸೇರಿ 325 ಪ್ರಯಾಣಿಕರ ಸಾಮರ್ಥ್ಯ ಹೊಂದಿರುತ್ತವೆ. ಮೋಟಾರು ಕಾರುಗಳ ಸಾಮರ್ಥ್ಯ 55 ಆಸನಗಳು ಸೇರಿ 226 ಮಂದಿ ಪ್ರಯಾಣಿಸಬಹುದಾಗಿದೆ.

ಮೂರು ಜೊತೆ ಡೆಮು ರೈಲು ಸಂಚಾರ ವಿವರ

ರೈಲು ಸಂಖ್ಯೆ ನಿರ್ಗಮನ ಆಗಮನ

6285 ಕೆಎಸ್‌ಆರ್‌(ಬೆಳಗ್ಗೆ 4.45) ಕೆಐಎ ಹಾಲ್ಟ್‌(ಬೆಳಗ್ಗೆ 5.50)

6287 ಯಲಹಂಕ(ಬೆ.7) ಕೆಐಎ ಹಾಲ್ಟ್‌(ಬೆ.7.20)

6283 ಕೆಎಸ್‌ಆರ್‌(ರಾತ್ರಿ 9) ಕೆಐಎ ಹಾಲ್ಟ್‌(ರಾತ್ರಿ 10.5)

6288 ಕೆಐಎ(ಬೆ.6.22) ಯಲಹಂಕ(ಬೆ.6.50)

6284 ಕೆಐಎ(ಬೆ.7.45) ಕಂಟೋನ್ಮೆಂಟ್‌(ಬೆ.8.50)

6286 ಕೆಐಎ ಹಾಲ್ಟ್‌(ರಾ.10.37) ಕೆಎಸ್‌ಆರ್‌(ರಾ.11.55)