ಬೆಂಗಳೂರು :  ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌) ರೂಪಿಸಿರುವ ಗ್ರಾಹಕರೇ ತಮಗೆ ಬೇಕಾದ ಚಾನೆಲ್‌ಗಳನ್ನು ಆಯ್ಕೆ ಮಾಡುವ ಕೇಬಲ್‌ ಮತ್ತು ಡಿಟಿಎಚ್‌ ನೀತಿ ಶುಕ್ರವಾರ (ಫೆ.1)ದಿಂದ ದೇಶಾದ್ಯಂತ ಜಾರಿಗೆ ಬರಲಿದೆ. ಗ್ರಾಹಕರು ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಲು ಫೆ.7ರವರೆಗೂ ಅವಕಾಶ ಕಲ್ಪಿಸಿರುವುದರಿಂದ ಸೇವೆಯಲ್ಲಿ ವ್ಯತ್ಯವಾಗುವುದಿಲ್ಲ.

ಈ ಏಳು ದಿನಗಳ ಕಾಲ 100 ಉಚಿತ ಚಾನೆಲ್‌ ಮತ್ತು ಪೇ ಚಾನೆಲ್‌ಗಳು ಪ್ರಸಾರವಾಗಲಿವೆ. ಗ್ರಾಹಕರು ಈ ನಿಗದಿತ ಅವಧಿಯಲ್ಲಿ ನೂರು ಉಚಿತ ಚಾನೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಪೇ ಚಾನೆಲ್‌ಗಳು ಬೇಕಿದ್ದರೆ ಅವುಗಳನ್ನು ಆಯ್ಕೆ ಮಾಡಬೇಕು. ಇಲ್ಲಿ ಪೇ ಚಾನೆಲ್‌ ಗ್ರಾಹಕರ ಆಯ್ಕೆಗೆ ಬಿಡಲಾಗಿದೆ. ಆದರೆ, ನೂರು ಉಚಿತ ಚಾನೆಲ್‌ಗಳನ್ನು ಕಡ್ಡಾಯವಾಗಿ ಆಯ್ಕೆ ಮಾಡಬೇಕು. ಗ್ರಾಹಕರು ಈ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳದಿದ್ದರೆ ಉಚಿತ ಚಾನೆಲ್‌ ಪ್ರಸಾರವೂ ಕಡಿತಗೊಳ್ಳಲಿದೆ.

ಆದಾಯ ಹಂಚಿಕೆ ಗೊಂದಲ:  ಆದಾಯ ಹಂಚಿಕೆ ವಿಚಾರದಲ್ಲಿ ಕೇಬಲ್‌ ಆಪರೇಟರ್‌ಗಳು ಹಾಗೂ ಮಲ್ಟಿಸಿಸ್ಟಂ ಆಪರೇಟರ್‌(ಎಂಎಸ್‌ಓ) ನಡುವೆ ಗೊಂದಲ ಮೂಡಿದೆ. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ‘ಟ್ರಾಯ್‌’, ಕೇಬಲ್‌ ಆಪರೇಟರ್‌ಗಳಿಗೆ ಶೇ.45ರಷ್ಟುಮತ್ತು ಎಂಎಸ್‌ಓ ಗಳಿಗೆ ಶೇ.55ರಷ್ಟುಆದಾಯದ ಪಾಲು ಪಡೆಯುವಂತೆ ಸೂಚಿಸಿದೆ.

‘ಆದರೆ, ಈ ಪ್ರಕಾರ ಆದಾಯ ಪಡೆದು ಕೇಬಲ್‌ ಸೇವೆ ನೀಡಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕೇಬಲ್‌ ಆಪರೇಟರ್‌ಗಳು ಹಾಗೂ ಈ ಉದ್ದಮ ನಂಬಿರುವ ಸಿಬ್ಬಂದಿ ಬೀದಿಗೆ ಬೀಳುತ್ತೇವೆ. ಟ್ರಾಯ್‌ ನಿಗದಿಪಡಿಸಿರುವ ಆದಾಯ ಹಂಚಿಕೆ ಸರಿಯಿಲ್ಲ. ಹಾಗಾಗಿ ಎಂಎಸ್‌ಓಗಳು ಮತ್ತು ಕೇಬಲ್‌ ಆಪರೇಟರ್‌ಗಳು ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕಿದೆ. ಈ ಸಂಬಂಧ ಎಂಎಸ್‌ಓಗಳಿಗೆ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ’ ಎಂದು ರಾಜ್ಯ ಕೇಬಲ್‌ ಆಪರೇಟರ್‌ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್‌ ರಾಜು ಹೇಳಿದರು.

‘ಟ್ರಾಯ್‌ ಗ್ರಾಹಕರು ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಲು ಏಳು ದಿನಗಳ ಕಾಲಾವಕಾಶ ನೀಡಿದೆ. ಆದಾಯ ಹಂಚಿಕೆ ವಿಚಾರದಲ್ಲಿ ಗೊಂದಲವಿರುವುದರಿಂದ ಕೇಬಲ್‌ ಆಪರೇಟರ್‌ಗಳು ಈ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದೇವೆ. ಹಾಗಂತ ಕೇಬಲ್‌ ಚಾನೆಲ್‌ ಪ್ರಸಾರ ನಿಲ್ಲಿಸುವುದಿಲ್ಲ. ಎಂಎಸ್‌ಓಗಳು ಯಾವ ತೀರ್ಮಾನ ತೆಗೆದುಕೊಳ್ಳುತ್ತೇವೆ ಎನ್ನುವುದನ್ನು ಫೆ.7ರವರೆಗೂ ನೋಡುತ್ತೇವೆ. ಆದಾಯ ಹಂಚಿಕೆ ಗೊಂದಲ ಬಗೆಹರಿಯದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು.

ಈ ನಡುವೆ ಕೆಲ ಕೇಬಲ್‌ ಚಾನೆಲ್‌ ಆಪರೇಟರ್‌ಗಳು ಗ್ರಾಹಕರಿಗೆ ಚಾನೆಲ್‌ಗಳ ಪಟ್ಟಿನೀಡಿ, ತಮ್ಮ ಆಯ್ಕೆಯ ಚಾನೆಲ್‌ಗಳನ್ನು ಸೂಚಿಸುವಂತೆ ತಿಳಿಹೇಳಲು ಆರಂಭಿಸಿದ್ದಾರೆ. ಇನ್ನೂ ಕೆಲವೆಡೆ ಗ್ರಾಹಕರು ಕೇಬಲ್‌ ಆಪರೇಟರ್‌ಗಳ ಆಗಮನಕ್ಕೆ ಎದುರು ನೋಡುತ್ತಿದ್ದಾರೆ.

- ಚಾನೆಲ್‌ ಆಯ್ಕೆ ಮಾಡುವ ಸಂಬಂಧ ಕೇಬಲ್‌ ಆಪರೇಟರ್‌ಗಳು ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಹೊಸ ನೀತಿ ಜಾರಿಯ ಬಗ್ಗೆ ಟಿವಿಗಳಲ್ಲಿ ಸ್ಕ್ರಾಲ್‌ ಆಗುವುದನ್ನು ನೋಡಿದ್ದೇವೆ. ಕೇಬಲ್‌ ಆಪರೇಟರ್‌ ಬಂದ ನಂತರ ವಿಚಾರಿಸುತ್ತೇವೆ.

- ಕವಿತಾ, ಹನುಮಂತನಗರ, ಬೆಂಗಳೂರು

ಚಾನೆಲ್‌ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ವಿಚಾರ ಗೊತ್ತಾಗಿದೆ. ಕೇಬಲ್‌ ಆಪರೇಟರ್‌ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರು ಸಿಕ್ಕ ನಂತರ ಕೇಳಿ ತಿಳಿದುಕೊಳ್ಳುತ್ತೇವೆ. ಸರ್ಕಾರವೇ ಹೊಸ ವ್ಯವಸ್ಥೆ ಜಾರಿ ಮಾಡಿದಾಗ ಅನುಸರಿಸಬೇಕು.

- ಶ್ರೀಪತಿ ರಾವ್‌, ಕೆಂಪೇಗೌಡನಗರ, ಬೆಂಗಳೂರು