ಶಿಗ್ಗಾಂವ ತಾಲೂಕಿನ ಕುಣ್ಣೂರು ಗ್ರಾಮದ ಮದುವೆ ಮನೆಯೊಂದರಲ್ಲಿ ಸುಟ್ಟ ಗಾಯಗಳಿಂದಾಗಿ ಎರಡೂವರೆ ವರ್ಷದ ಬಾಲಕಿ ರುಕ್ಸಾನಾಬಾನು ಸಾವನ್ನಪ್ಪಿದ್ದಾಳೆ.

ಹುಬ್ಬಳ್ಳಿ (ಜೂ.20): ಶಿಗ್ಗಾಂವ ತಾಲೂಕಿನ ಕುಣ್ಣೂರು ಗ್ರಾಮದ ಮದುವೆ ಮನೆಯೊಂದರಲ್ಲಿ ನಡೆದ ದುರಂತದಲ್ಲಿ ಎರಡೂವರೆ ವರ್ಷದ ಬಾಲಕಿ ರುಕ್ಸಾನಾಬಾನು ದಾರುಣವಾಗಿ ಸಾವನ್ನಪ್ಪಿದ್ದಾಳೆ.

ಚನ್ನಾಪುರ ಗ್ರಾಮದ ಮಕ್ತುಮ್ ಸಾಬ್ ಸನದಿ ಅವರ ಪುತ್ರಿ ರುಕ್ಸಾನಾಬಾನು, ನಾಲ್ಕು ದಿನಗಳ ಹಿಂದೆ ಸುಡುವ ಸಾಂಬಾರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ಪೋಷಕರು ತಕ್ಷಣ ಬಾಲಕಿಯನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ.

ಬಾಲಕಿಯ ದೇಹದ ಬಹುತೇಕ ಭಾಗಗಳು ಸುಟ್ಟುಹೋಗಿತ್ತು. ಬಾಲಕಿ ಬದುಕುಳಿಯುವ ಭರವಸೆಯಲ್ಲಿದ್ದ ಪೋಷಕರು. ಆದರೆ ತೀವ್ರವಾದ ಗಾಯ, ನೋವುಗಳಿಂದ ಚಿಕಿತ್ಸೆಗೆ ಸ್ಪಂದಿಸದೇ ಮೃತಳಾಗಿದ್ದಾಳೆ.. ಈ ಘಟನೆ ಪೋಷಕರಿಗೆ ಆಘಾತವನ್ನುಂಟುಮಾಡಿದೆ.

ಪೋಷಕರೇ ಮದುವೆ ಮನೆಯಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ

ಈ ಘಟನೆ ಮದುವೆ ಮನೆಗಳಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ವಿದ್ಯುತ್, ನೀರು, ಬೆಂಕಿ ಮುಂತಾದ ಅಪಾಯಕಾರಿ ವಸ್ತುಗಳಿರುವ ಸ್ಥಳಗಳಿಂದ ಚಿಕ್ಕ ಮಕ್ಕಳನ್ನು ದೂರವಿಡಬೇಕು ಎಂದು ಪೊಲೀಸರು ಮತ್ತು ತಜ್ಞರು ಸಲಹೆ ನೀಡುತ್ತಲೇ ಬಂದಿದ್ದಾರೆ. ಆದರೂ ಪೋಷಕರ ನಿರ್ಲಕ್ಷ್ಯದಿಂದ ಇಂಥ ದುರಂತಗಳಿಗೆ ಮಕ್ಕಳು ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ನಿರ್ಲಕ್ಷ್ಯ ತೋರಿದರೆ ಇಂತಹ ದುರಂತಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಈ ಘಟನೆಯಿಂದ ಕುಟುಂಬಸ್ಥರ ದುಃಖ ಮುಗಿಲುಮುಟ್ಟಿದ್ದು, ಸಮಾಜಕ್ಕೆ ಮಕ್ಕಳ ಸುರಕ್ಷತೆಯ ಬಗ್ಗೆ ಎಚ್ಚರಿಕೆಯ ಸಂದೇಶ ನೀಡಿದೆ.

ಪೋಷಕರು ತಮ್ಮ ಮಕ್ಕಳನ್ನು ಸುರಕ್ಷತೆ ಬಗ್ಗೆ ಆದ್ಯತೆ ನೀಡಿ, ದುರಂತವನ್ನು ತಪ್ಪಿಸಿ!