Asianet Suvarna News Asianet Suvarna News

ಪ್ರವಾಸೋದ್ಯಮಕ್ಕೆ ಹೊಸತನ ಬೇಕು, ಬ್ಯಾನ್‌ ಮನಸ್ಥಿತಿ ಬಿಡಬೇಕು: ರವಿ ಹೆಗಡೆ

ಜಗತ್ತಿನ ಅನೇಕ ದೇಶಗಳ ಮುಖ್ಯ ಆದಾಯ ಮೂಲವೇ ಪ್ರವಾಸೋದ್ಯಮ. ಆದರೆ, ಪ್ರವಾಸೋದ್ಯಮದಲ್ಲಿ ನಾವು ಹಿಂದುಳಿದಿದ್ದೇವೆ. ಹೀಗಾಗಿ, ನಾವು ಈಗ ನಾವು ಹೊಸತನದೊಂದಿಗೆ ದಾಪುಗಾಲು ಇಡಬೇಕು.

Tourism needs innovation ban mentality should be left gvd
Author
First Published Jun 17, 2024, 9:42 AM IST

ಬೆಂಗಳೂರು (ಜೂ.17): ಸುಂದರ ಕಡಲ ಕಿನಾರೆ, ಕಣ್ಮನ ಸೆಳೆಯುವ ದಟ್ಟಾರಣ್ಯ, ವನ್ಯಜೀವಿಗಳು, ಹಚ್ಚ ಹಸರಿನ ಬೆಟ್ಟ ಗುಡ್ಡಗಳ ಸಾಲುಗಳು, ವಯ್ಯಾರ,ಅಬ್ಬರದೊಂದಿಗೆ ಹರಿಯುವ ನದಿಗಳು, ಧುಮ್ಮಿಕ್ಕುವ ಜಲಪಾತಗಳ ಸೊಬಗು ಹೊಂದಿದ್ದರೂ ಪ್ರವಾಸೋದ್ಯಮದಲ್ಲಿ ಕರ್ನಾಟಕ ಹಿಂದುಳಿದಿರುವುದು ಏಕೆ, ಇದಕ್ಕೆ ಪರಿಹಾರವೇನು ಎಂಬ ಬಗ್ಗೆ ‘ದಕ್ಷಿಣ ಭಾರತ ಉತ್ಸವ-2024’ದಲ್ಲಿ ಆಯೋಜಿಸಿದ್ದ ಸಂವಾದ ರಾಜ್ಯ ಪ್ರವಾಸೋದ್ಯಮಕ್ಕೆ ಹೊಸ ರೂಪ ನೀಡುವ ಪರಿಣಾಮಕಾರಿ ಚರ್ಚೆಗೆ ಸಾಕ್ಷಿಯಾಯಿತು.

ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು ನೀಡಲು ಕೈಗೊಳ್ಳಬೇಕಾದ ಕ್ರಮಗಳು ಏನು, ಎಲ್ಲಿ ಸಮಸ್ಯೆಯಾಗುತ್ತಿದೆ ಮತ್ತು ಪರಿಹಾರ ಕ್ರಮಗಳೇನು ಎಂಬ ಪ್ರಶ್ನೆಗಳಿಗೆ ಉತ್ತರಿಸಿದ ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಪ್ರಧಾನ ಸಂಪಾದಕ ರವಿ ಹೆಗಡೆ ಅವರು, ಜಗತ್ತಿನ ಅನೇಕ ದೇಶಗಳ ಮುಖ್ಯ ಆದಾಯ ಮೂಲವೇ ಪ್ರವಾಸೋದ್ಯಮ. ಆದರೆ, ಪ್ರವಾಸೋದ್ಯಮದಲ್ಲಿ ನಾವು ಹಿಂದುಳಿದಿದ್ದೇವೆ. ಹೀಗಾಗಿ, ನಾವು ಈಗ ನಾವು ಹೊಸತನದೊಂದಿಗೆ ದಾಪುಗಾಲು ಇಡಬೇಕು. ಈಗಾಗಲೇ ಹಳತಾಗಿರುವ ವಿಚಾರಗಳನ್ನೇ ತೋರಿಸಿದರೆ ಜನರು ಒಪ್ಪದಿರಬಹುದು. ಪ್ರವಾಸೋದ್ಯಮ ಜಗತ್ತಿನಲ್ಲಿ ಟ್ರೆಂಡಿಂಗ್ ಏನಿದೆ ಎಂಬುದನ್ನು ಅರಿಯಬೇಕು. ಅದಕ್ಕೆ ತಕ್ಕಂತೆ ಹೊಸತನ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಒಂದು ವರ್ಷದಲ್ಲಿ ಎಲ್ಲಾ ರೀತಿ ಬೆಲೆ ಏರಿಕೆ ಭಾಗ್ಯ: ವಿಜಯೇಂದ್ರ, ಎಚ್‌ಡಿಕೆ ಆಕ್ರೋಶ

ಕಹಿ ಘಟನೆಗಳ ನೆಪದಲ್ಲಿ ಪ್ರವಾಸೋದ್ಯಮ ವಿರೋಧಿಯಾಗಿ ಸಂಪೂರ್ಣ ‘ಬ್ಯಾನ್’ ನಿಲುವು ಹಿಂಪಡೆಯಬೇಕು. ಸುರಕ್ಷತೆಯೊಂದಿಗೆ ಮುಂದೆ ಸಾಗುವ ಧನಾತ್ಮಕ ಚಿಂತನೆಗಳನ್ನು ಮಾಡಬೇಕು. ‘ವಿಶೇಷ ಪ್ರವಾಸೋದ್ಯಮ ವಲಯ’ಗಳನ್ನು ಸ್ಥಾಪಿಸುವ ಮೂಲಕ ಕರ್ನಾಟಕದ ಅದ್ಭುತಗಳನ್ನು ಒಂದೆಡೆ ತೋರಿಸಬಹುದು ಎಂದರು. ಪ್ರವಾಸೋದ್ಯಮ ಬೆಳವಣಿಗೆಯ ಅನುಕೂಲಗಳು ಮತ್ತು ಸವಾಲುಗಳ ಕುರಿತು ಪ್ರತಿಕ್ರಿಯಿಸಿದ ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ ಚಂದ್ರ ಲಹೋಟಿ, ಪ್ರವಾಸೋದ್ಯಮ ಉತ್ತೇಜನಕ್ಕೆ ತೆರಿಗೆ ವಿನಾಯಿತಿ, ಬ್ಯಾಂಕ್ ಸಾಲದಲ್ಲಿ ಸರಳೀಕರಣ ಮತ್ತು ಕೆಲವು ವಿನಾಯಿತಿ, ಕಾರ್ಮಿಕ ಕಾನೂನುಗಳ ಸರಳೀಕರಣ, ಸರಳ ತೆರಿಗೆ ವ್ಯವಸ್ಥೆಯನ್ನು ಒಳಗೊಂಡ ಉದ್ಯಮ ಸ್ನೇಹಿ ನೀತಿ ಜಾರಿಗೆ ತರಬೇಕು. 

ಅದನ್ನು ಉದ್ಯಮದಾರರು ಮತ್ತು ಸಾರ್ವಜನಿಕರು, ತಜ್ಞರ ಸಲಹೆ ಸೂಚನೆ ಪಡೆಯಬೇಕು ಎಂದು ಸಲಹೆ ನೀಡಿದರು. ಕರಾವಳಿ ಪ್ರವಾಸೋದ್ಯಮ ತಜ್ಞ ಮಂಗಲ ಶೆಟ್ಟಿ, ಪ್ರವಾಸೋದ್ಯಮಕ್ಕೆ ಕೇರಳ 2,500 ಕೋಟಿ ರು.ಗಿಂತ ಹೆಚ್ಚು ಹಣ ಮೀಸಲಿಡುತ್ತದೆ. ಈ ವಿಚಾರದಲ್ಲಿ ಕರ್ನಾಟಕ ತುಂಬಾ ಹಿಂದಿದೆ. ಕರ್ನಾಟಕ ಹೆಚ್ಚಿನ ಹೂಡಿಕೆ ಮಾಡಿ, ಹೆಚ್ಚು ಫಲ ಪಡೆಯುವ ವ್ಯಾಪಕ ಅವಕಾಶಗಳು ಇವೆ. ದೀರ್ಘಾವಧಿ ಯೋಜನೆಗಳನ್ನು ರೂಪಿಸಬೇಕು,ರಾಜ್ಯದ ಪ್ರವಾಸೋದ್ಯಮ ವಲಯಕ್ಕೆ 10 ಸಾವಿರ ಕೋಟಿ ರು. ಅಗತ್ಯವಿದೆ. ಪಿಪಿಪಿ ಮಾದರಿ ಜಾರಿಗೆ ತರಬೇಕು ಎಂದು ಹೇಳಿದರು.

ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಪ್ರವಾಸಿ ತಾಣಗಳ ಸೌಂದರ್ಯ, ಪಾವಿತ್ರ್ಯತೆ ಕಾಪಾಡಿಕೊಳ್ಳಲು ಸಿನಿಮಾ ಕ್ಯಾಮೆರಾವನ್ನೂ ಒಳಬಿಡದ ರೀತಿಯ ಜಟಿಲ ಕಾನೂನು ಸಡಿಲಿಸುವ ಅಗತ್ಯತೆ ಇದೆ. ನಯಾಗರಾದಲ್ಲಿ ಪ್ರವಾಸಿಗರಿಗಾಗಿ ನೀರಿನ ಹರಿವು ನಿಯಂತ್ರಣ, ಜಲಪಾತದ ನೀರು ಬೀಳುವಲ್ಲಿ ‘ಮೇಯ್ಡ್‌ ಆಫ್‌ ದ ಮಿಸ್ಟ್‌’ ಕರೆದೊಯ್ಯುವ ರೀತಿಯನ್ನು ನಮ್ಮ ಪ್ರವಾಸೋದ್ಯಮ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.

ಕೇಂದ್ರ ಸರ್ಕಾರ ತಕ್ಷಣ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಸಬೇಕು: ಸಿಎಂ ಸಿದ್ದರಾಮಯ್ಯ ಒತ್ತಾಯ

ಸಿನಿಮಾದಲ್ಲಿ ತಾಜ್‌ಮಹಲ್‌ ತೋರಿಸಬೇಕೆಂದರೆ ಸುಮಾರು ಒಂದು ಕಿ.ಮೀ ದೂರದಿಂದ ಶೂಟಿಂಗ್‌ ಮಾಡಬೇಕು. ಹಂಪಿಯಲ್ಲಿ ಸರ್ಕಾರಿ ಡಾಕ್ಯೂಮೆಂಟರಿ ಹೊರತುಪಡಿಸಿ ಇಂದಿಗೂ ಸಿನಿಮಾ ಚಿತ್ರೀಕರಣ ನಿಷಿದ್ಧ. ಪ್ರಾಕೃತಿಕ, ವಿಶ್ವವಿಖ್ಯಾತ, ಸೂಕ್ಷ್ಮ ತಾಣಗಳಲ್ಲಿ ಸಿನಿಮಾ ತಂಡದಿಂದ ಧಕ್ಕೆ ಆಗುತ್ತದೆ ಎಂಬ ಕಾರಣ ಮುಂದಿಟ್ಟುಕೊಂಡು ಸಿನಿಮಾ ತಂಡಗಳನ್ನು ಅಸ್ಪ್ರಶ್ಯ ಧೋರಣೆಯಲ್ಲಿ ನೋಡುವುದು. ನಿರ್ಬಂಧ ವಿಧಿಸುವುದು ಸರಿಯಲ್ಲ ಎಂದು ಅವರು ಹೇಳಿದರು.

Latest Videos
Follow Us:
Download App:
  • android
  • ios