Asianet Suvarna News Asianet Suvarna News

ಕೊರೋನಾ ಹೆಚ್ಚಳ: ಕರ್ನಾಟಕದಲ್ಲಿ ಮತ್ತೆ ಕಠಿಣ ನಿಯಮ ಜಾರಿ, ಗಣೇಶೋತ್ಸವಕ್ಕೂ ನಿರ್ಬಂಧ?

ಪ್ರಾಥಮಿಕ ಸಂಪರ್ಕಿತರ ಕಡ್ಡಾಯ ಪರೀಕ್ಷೆಗೆ ಒಲವು, ಬಿಎ5 ಒಮಿಕ್ರೋನ್‌ ರೂಪಾಂತರಿಯಿಂದ ಸೋಂಕು ಹೆಚ್ಚಳ

Tough Rules Enforcement Again in Karnataka Due to Increase Coronavirus Cases grg
Author
Bengaluru, First Published Aug 11, 2022, 7:11 AM IST

ಬೆಂಗಳೂರು(ಆ.11):  ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಪ್ರಕರಣದಲ್ಲಿನ ಏರಿಕೆ ಮತ್ತು ಸೋಂಕಿತರ ಆಸ್ಪತ್ರೆ ದಾಖಲೀಕರಣದಲ್ಲಿನ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರ ಪತ್ರ ಬರೆದು ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ತುಸು ಕಠಿಣ ಕ್ರಮಗಳನ್ನು ಮತ್ತೆ ಜಾರಿಗೊಳಿಸಲು ಆರೋಗ್ಯ ಇಲಾಖೆ ಒಲವು ವ್ಯಕ್ತಪಡಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಆಯುಕ್ತ ಡಿ. ರಂದೀಪ್‌, ರಾಜ್ಯದಲ್ಲಿ ಕೋವಿಡ್‌ ಸೋಂಕಿತರ ದೈನಂದಿನ ಸಂಖ್ಯೆ ಎರಡೂವರೆ ಸಾವಿರ ತನಕ ತಲುಪಿದೆ. ಇದರೊಂದಿಗೆ ಆಸ್ಪತ್ರೆಯ ದಾಖಲೀಕರಣ ಕೂಡ ಹೆಚ್ಚಾಗುತ್ತಿದೆ. ಲಸಿಕೆಯ ಪ್ರಭಾವದಿಂದ ಪಾರಾಗುವ ಸಾಮರ್ಥ್ಯ ಹೊಂದಿರುವ ಬಿಎ 5 ತಳಿ ರಾಜ್ಯದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಮೂರು ಡೋಸ್‌ ಲಸಿಕೆ ಪಡೆದಿರುವವರಲ್ಲಿಯೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಪಾಲನೆಗೆ ಕ್ರಮ ಕೈಗೊಳ್ಳುವ ಚಿಂತನೆಯನ್ನು ಆರೋಗ್ಯ ಇಲಾಖೆ ನಡೆಸಿದೆ ಎಂದು ಹೇಳಿದ್ದಾರೆ.

ಯಾವ ಕಠಿಣ ಕ್ರಮಗಳು?:

ಸಾರ್ವಜನಿಕ ಜಾಗಗಳಲ್ಲಿ ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸುವಂತೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿತ್ತು. ಆದರೆ ರಾಜ್ಯ ಸರ್ಕಾರ ದಂಡ ವಿಧಿಸುವುದರಿಂದ ವಿನಾಯಿತಿ ನೀಡಿತ್ತು. ಆದರೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮಾಸ್‌್ಕ ಧರಿಸದವರಿಗೆ ದಂಡ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಡಿ. ರಂದೀಪ್‌ ಹೇಳಿದ್ದಾರೆ.

CORONA CRISIS: ಕರ್ನಾಟಕದಲ್ಲಿ ಕೋವಿಡ್‌ಗೆ ಒಂದೇ ದಿನ 5 ಬಲಿ: 145 ದಿನದ ಗರಿಷ್ಠ

ಅದೇ ರೀತಿ ಕೋವಿಡ್‌ ಸೋಂಕಿತರ ಪ್ರಾಥಮಿಕ ಸಂಪರ್ಕಿತರಲ್ಲಿ ಸೋಂಕಿನ ಗುಣಲಕ್ಷಣಗಳಿದ್ದರೆ ಮಾತ್ರ ಅವರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ಇನ್ನು ಮುಂದೆ ಪ್ರಾಥಮಿಕ ಸಂಪರ್ಕಿತರೆಲ್ಲರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸುವ ನಿಯಮ ಜಾರಿಗೊಳಿಸುವ ಚಿಂತನೆ ನಡೆಸಲಾಗಿದೆ. ಸೋಂಕು ಹರಡುವುದನ್ನು ತಡೆಯುವಲ್ಲಿ ಸಂಪರ್ಕಿತರ ಪರೀಕ್ಷೆ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಪರೀಕ್ಷೆಗೆ ಒಳಗಾಗಲು ಜನರು ಹಿಂದೇಟು ಹಾಕುತ್ತಿರುವುದರಿಂದ ಕಡ್ಡಾಯ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಡೆತ್‌ ಆಡಿಟಿಂಗ್‌:

ಸದ್ಯ ನಾವು 30,000 ದೈನಂದಿನ ಪರೀಕ್ಷೆ ನಡೆಸುತ್ತಿದ್ದೇವೆ. ಪತ್ತೆಯಾಗುತ್ತಿರುವ ಪ್ರಕರಣಗಳಿಗೆ ಹೋಲಿಸಿದರೆ ಸೂಕ್ತ ಪ್ರಮಾಣದಲ್ಲಿ ಟೆಸ್ಟಿಂಗ್‌ ನಡೆಯುತ್ತಿದೆ. ಅದೇ ರೀತಿ ಜಿನೋಮಿಕ್‌ ಸಿಕ್ವೆನ್ಸಿಂಗ್‌ ಕೂಡ ನಿರಂತರವಾಗಿ ನಡೆಯುತ್ತಿದ್ದು ಹೊಸ ತಳಿಯ ಪತ್ತೆಯಾಗಿಲ್ಲ. ರಾಜ್ಯದಲ್ಲಿ ಆಸ್ಪತ್ರೆಯ ದಾಖಲೀಕರಣ ಪ್ರಮಾಣದಲ್ಲಿ ಶೇ.5ರಷ್ಟುಏರಿಕೆ ಆಗಿದೆ. ಆದರೆ ಸಾವಿನ ಪ್ರಮಾಣದಲ್ಲಿ ಹೆಚ್ಚಳ ಆಗಿಲ್ಲ. ಇತ್ತೀಚೆಗೆ ಕೋವಿಡ್‌ನಿಂದ ಮರಣವನ್ನಪ್ಪಿದವರಲ್ಲಿ ಬಹುತೇಕರು ಸಹ ಅಸ್ವಸ್ಥತೆ ಹೊಂದಿದ್ದ ಹಿರಿಯ ನಾಗರಿಕರು. ಸಹ ಅಸ್ವಸ್ಥತೆ ಹೊಂದಿರದ 18 ವರ್ಷದ ಕೆಳಗಿನ ವ್ಯಕ್ತಿಯೊಬ್ಬರ ಸಾವು ಘಟಿಸಿದ್ದು, ಈ ಬಗ್ಗೆ ಡೆತ್‌ ಆಡಿಟಿಂಗ್‌ ಮಾಡುತ್ತಿದ್ದೇವೆ ಎಂದು ರಂದೀಪ್‌ ತಿಳಿಸಿದರು.

ಹವಾಮಾನ ಬದಲಾವಣೆಯಿಂದ ಅಸ್ವಸ್ಥತೆ:

ಬಿಎ 5 ರಿಂದ ಕೋವಿಡ್‌ ಬಂದವರಲ್ಲಿ ಗಂಟಲು ನೋವು, ಮೈಕೈ ನೋವು, ಶೀತ ಸಾಮಾನ್ಯ ರೋಗ ಲಕ್ಷಣವಾಗಿದೆ. ಎರಡ್ಮೂರು ದಿನದಲ್ಲಿ ಸೋಂಕು ಕಡಿಮೆ ಆಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಹವಾಮಾನ ಬದಲಾವಣೆ ಮತ್ತಿತ್ತರ ಕಾರಣಗಳಿಂದ ರಾಜ್ಯದಲ್ಲಿ ಇನ್‌ಫ್ಲುಯೆಂಜಾ, ಐಎಲ್‌ಐ, ಸಾರಿ, ಡೆಂಘೀ, ಶೀತ ಜ್ವರ, ವೈರಲ್‌ ಫಿವರ್‌, ಎಚ್‌1ಎನ್‌1 ಪ್ರಕರಣಗಳಲ್ಲಿ ಶೇ.15ರಿಂದ ಶೇ.20ರಷ್ಟುಹೆಚ್ಚಳ ಕಂಡುಬಂದಿದೆ. ಅನೇಕ ಖಾಸಗಿ ಆಸ್ಪತ್ರೆಗಳು ಕಾಯಿಲೆ ಪೀಡಿತರ ಮಾಹಿತಿ ದಾಖಲಿಸುತ್ತಿಲ್ಲ. ತಕ್ಷಣವೇ ರೋಗಿಗಳ ಮಾಹಿತಿ ನೀಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸುವುದಾಗಿ ರಂದೀಪ್‌ ಹೇಳಿದರು.

Booster Dose: 3ನೇ ಡೋಸ್‌ ಪಡೆದಿದ್ದು ಬರೀ 15% ಜನ!

ಗಣೇಶೋತ್ಸವಕ್ಕೆ ನಿರ್ಬಂಧ?

‘ಗಣೇಶೋತ್ಸವದ ಆಚರಣೆಗೆ ಮಾರ್ಗಸೂಚಿಯ ಬಗ್ಗೆ ಚರ್ಚೆ ನಡೆದಿಲ್ಲ. ಆದರೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುಸು ನಿರ್ಬಂಧಗಳಿದ್ದರೆ ಒಳ್ಳೆಯದು ಎಂಬುದು ನಮ್ಮ ಅಭಿಪ್ರಾಯ. ಆದರೆ ಈ ಬಗ್ಗೆ ಅಂತಿಮ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳಲಿದೆ. ಸಾರ್ವಜನಿಕರ ಸಭೆ ಸಮಾರಂಭಗಳಿಗೆ ನಿರ್ಬಂಧ ಅಥವಾ ಅನುಮತಿ ನೀಡುವ ಬಗ್ಗೆಯೂ ಸರ್ಕಾರದ ಉನ್ನತ ಮಟ್ಟದಲ್ಲಿ ನಿರ್ಧಾರವಾಗಲಿದೆ’ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್‌ ತಿಳಿಸಿದ್ದಾರೆ.

ಸುಧಾಕರ್‌ಗೆ ಅನಾರೋಗ್ಯ: ನಡೆಯದ ಕೋವಿಡ್‌ ಸಭೆ 

ಕೋವಿಡ್‌ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚಿಸಲು ಬುಧವಾರ ಪೂರ್ವಾಹ್ನ 11 ಕ್ಕೆ ಆರೋಗ್ಯಸೌಧದಲ್ಲಿ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸಭೆ ನಿಗದಿಯಾಗಿತ್ತು. ಆದರೆ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅನಾರೋಗ್ಯದ ಹಿನ್ನೆಲೆಯಲ್ಲಿ ಸಭೆ ಮುಂದೂಡಲಾಯಿತು.

Follow Us:
Download App:
  • android
  • ios