3ನೇ ವಾರವೂ ಟೊಮೆಟೋ ದರ ₹100: ಇದೇ ಮೊದಲು!
ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಸತತ ಮೂರು ವಾರಗಳ ಬಳಿಕವೂ ಟೊಮೆಟೋ ದರ ನೂರು ರುಪಾಯಿ ಮೀರಿ ಮುಂದುವರಿದಿದೆ. ಹಿಂದೆ ಹತ್ತು-ಹದಿನೈದು ದಿನಗಳಲ್ಲಿ ಇಳಿಕೆಯಾಗುತ್ತಿದ್ದ ದರ ಈಗಿನ ಲಕ್ಷಣ ನೋಡಿದರೆ ಸದ್ಯಕ್ಕೆ ಇಳಿಕೆಯಾಗುವ ಸಂಭವ ಕಂಡುಬರುತ್ತಿಲ್ಲ.
ಬೆಂಗಳೂರು (ಜು.17) : ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಸತತ ಮೂರು ವಾರಗಳ ಬಳಿಕವೂ ಟೊಮೆಟೋ ದರ ನೂರು ರುಪಾಯಿ ಮೀರಿ ಮುಂದುವರಿದಿದೆ. ಹಿಂದೆ ಹತ್ತು-ಹದಿನೈದು ದಿನಗಳಲ್ಲಿ ಇಳಿಕೆಯಾಗುತ್ತಿದ್ದ ದರ ಈಗಿನ ಲಕ್ಷಣ ನೋಡಿದರೆ ಸದ್ಯಕ್ಕೆ ಇಳಿಕೆಯಾಗುವ ಸಂಭವ ಕಂಡುಬರುತ್ತಿಲ್ಲ.
ಕೆ.ಜಿ. ಟೊಮೆಟೋ ಬೆಲೆ ಮೂರಂಕಿ ದಾಟಿರುವುದು ಇದೇ ಮೊದಲಲ್ಲ. ಕಳೆದ ಹತ್ತು ವರ್ಷದಲ್ಲಿ ಮೂರ್ನಾಲ್ಕು ಬಾರಿ ಶತಕ ಇಲ್ಲವೇ ಶತಕದಂಚಿನ ಬೆಲೆ ಕಂಡಿದೆ. ಆದರೆ, ಇಷ್ಟೊಂದು ದಿನಗಳ ಕಾಲ ಗರಿಷ್ಠ ಬೆಲೆಯಲ್ಲಿ ಮುಂದುವರಿದಿರುವುದು ಇದೇ ಮೊದಲು. ಕಳೆದ ಜೂ.26ರಂದು ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೋ ನೂರು ರುಪಾಯಿ ದಾಖಲಿಸಿತ್ತು. ಅಲ್ಲಿಂದ ಇಲ್ಲಿವರೆಗೂ ದರ ಏರುಗತಿಯಲ್ಲೇ ಇದೆ.
ಕೋಲಾರ: ಟೊಮೆಟೋ ಕಳ್ಳತನ ತಪ್ಪಿಸಲು ಹೊಲದಲ್ಲೇ ಟೆಂಟ್ ಹಾಕಿದ ರೈತರು..!
ನಿಯಂತ್ರಣ ಆಗುತ್ತಿಲ್ಲ:
ಕೋಲಾರ, ವಡ್ಡಹಳ್ಳಿ, ಚಿಂತಾಮಣಿ ಕೃಷಿ ಉತ್ಪನ್ನ ಮಾರುಕಟ್ಟೆಯಿಂದಲೇ ರಾಜ್ಯದ ಬಹುತೇಕ ಭಾಗಕ್ಕೆ ಟೊಮೆಟೋ ಪೂರೈಕೆ ಆಗುತ್ತದೆ. ಕಳೆದ ವರ್ಷದ ಜುಲೈ ಮೊದಲ ಹದಿನೈದು ದಿನಗಳಿಗೆ ಹೋಲಿಸಿದರೆ ಈ ವರ್ಷ ಕೇವಲ ಶೇ.25-30 ಟೊಮೆಟೋ ಮಾತ್ರ ಪೂರೈಕೆ ಆಗುತ್ತಿದೆ. ಹಿಂದೆಲ್ಲ ನೂರರ ಗಡಿ ದಾಟುತ್ತಿದ್ದಂತೆ ಮಹಾರಾಷ್ಟ್ರದ ಮುಂಬೈ, ನಾಸಿಕ್ ಮಾರುಕಟ್ಟೆಯಿಂದ ರಾಜ್ಯಕ್ಕೆ ಟೊಮೆಟೋ ಆಮದಾಗುತ್ತಿತ್ತು. ಇದರಿಂದ ಬೆಲೆ ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ, ಈ ಬಾರಿ ಹಾಗಾಗಿಲ್ಲ.
ಕಡಿಮೆ ಪೂರೈಕೆ:
ರಾಜ್ಯದ ಪ್ರಮುಖ ಟೊಮೆಟೋ ಮಾರುಕಟ್ಟೆಯಾದ ಕೋಲಾರಕ್ಕೆ ಚಾಮರಾಜನಗರ, ಮಂಡ್ಯ, ಮೈಸೂರು, ತುಮಕೂರು, ತಮಿಳುನಾಡಿನ ಹೊಸೂರು, ಆಂಧ್ರದ ಮದನಪಲ್ಲಿ, ಚಿತ್ತೂರು ಕಡೆಯಿಂದ ಟೊಮೆಟೋ ಬರುತ್ತದೆ. ಆದರೆ, ಇದೀಗ ಎಲ್ಲಿಂದಲೂ ಪೂರೈಕೆ ಆಗುತ್ತಿಲ್ಲ. ಕೇವಲ ಕೋಲಾರದ ಟೊಮೆಟೋ ಮಾತ್ರ ಲಭ್ಯವಾಗುತ್ತಿದೆ. ಇಲ್ಲಿ ಹದಿನೈದು ದಿನಗಳಿಂದ 68-72 ಸಾವಿರ ಬಾಕ್ಸ್ (15 ಕೆ.ಜಿ.)- ಅಂದರೆ 9 ಸಾವಿರದಿಂದ 11 ಸಾವಿರ ಕ್ವಿಂಟಲ್ ಪೂರೈಕೆ ಆಗುತ್ತಿದೆ. ಸೀಸನ್‌ನಲ್ಲಿ 50 ಸಾವಿರ ಕ್ವಿಂಟಲ್‌ವರೆಗೂ ಪೂರೈಕೆ ಆಗುತ್ತಿತ್ತು. ಹೀಗಾಗಿ ಬಾಕ್ಸ್‌ಗೆ .2200 ಹಾಗೂ .1700ರ ನಡುವೆ ಬೆಲೆಯಿದೆ.
ಇಳಿಕೆ ನಿರೀಕ್ಷೆ ಕಷ್ಟ:
ಆಗಸ್ಟ್ ಮಧ್ಯಂತರದ ಬಳಿಕ ಸಾಮಾನ್ಯವಾಗಿ ಮಹಾರಾಷ್ಟ್ರದಿಂದ ಟೊಮೆಟೋ ಇತರೆ ರಾಜ್ಯಗಳಿಗೆ ಬರುತ್ತದೆ. ಆದರೆ, ಪ್ರಸ್ತುತ ಸತತ ಮಳೆಯಾಗುತ್ತಿರುವ ಕಾರಣ ಆಗಸ್ಟ್ 15ರ ಬಳಿಕವೂ ಅಲ್ಲಿನ ಟೊಮೆಟೋ ಮಾರುಕಟ್ಟೆಗೆ ಬರುವುದು ಅನುಮಾನ. ಹೀಗಾಗಿ ರಾಜ್ಯದಲ್ಲಿಯೂ ಬೆಲೆ ಇಳಿಕೆ ನಿರೀಕ್ಷಿಸುವುದು ಕಷ್ಟಎಂದು ಎಪಿಎಂಸಿ ಅಧಿಕಾರಿಗಳು ಹೇಳುತ್ತಾರೆ.
ಟೊಮೆಟೋ 60ರಿಂದ 90 ದಿನಗಳ ಬೆಳೆ. ಆದರೆ ಮಳೆ ಕಾರಣದಿಂದ ರೋಗಕ್ಕೆ ತುತ್ತಾಗಿರುವುದು, ಇಳುವರಿ ಕುಸಿತದಿಂದ ಉತ್ತರದ ರಾಜ್ಯಗಳಲ್ಲೇ ಪೂರೈಕೆ ವ್ಯತ್ಯಯದಿಂದ ಟೊಮೆಟೋ ಕೊರತೆ ಸತತವಾಗಿದೆ. ವಿಪರೀತ ಮಳೆ ಕಾರಣದಿಂದ ಸಾಗಾಟವೂ ದುಸ್ತರ ಎನಿಸಿದೆ. ಹೀಗಾಗಿ ಗರಿಷ್ಠ ಬೆಲೆ ಮುಂದುವರಿಯಲು ಕಾರಣವಾಗಿದೆ ಎಂದು ವರ್ತಕರು ತಿಳಿಸಿದರು.
ಬೆಂಗಳೂರಲ್ಲಿ ದುಬಾರಿ ದರ:
ರಾಜಧಾನಿಯಲ್ಲಿ ಪ್ರಸ್ತುತ ಟೊಮೆಟೋ ಕಲಾಸಿಪಾಳ್ಯ, ಕೆ.ಆರ್.ಮಾರುಕಟ್ಟೆ, ಬಿನ್ನಿಮಿಲ್‌ನಲ್ಲಿ ಹೋಲ್‌ಸೇಲ್ ದರ .80ರಿಂದ .100, ಶೇಷಾದ್ರಿಪುರ, ಜಯನಗರ, ಯಶವಂತಪುರ, ನಾಗವಾರ, ಕಾಡುಗೋಡಿ ಚಿಲ್ಲರೆ ಮಾರುಕಟ್ಟೆಯಲ್ಲಿ ಗರಿಷ್ಠ .120ರಿಂದ .140, ಮಾಲ್‌ಗಳಲ್ಲಿ .150 ಇದೆ. ಮುಂದಿನ ಹದಿನೈದು-ಇಪ್ಪತ್ತು ದಿನಗಳ ಕಾಲವೂ ಇದೇ ದರ ಮುಂದುವರಿಯುವ ಆತಂಕ ಗ್ರಾಹಕರಲ್ಲಿದೆ.
ನಗರದ ಪ್ರಮುಖ ತರಕಾರಿ ಮಾರುಕಟ್ಟೆಯಾದ ಜಯಚಾಮರಾಜೇಂದ್ರ ಮಾರುಕಟ್ಟೆಗೆ ಸಾಧಾರಣವಾಗಿ ಪ್ರತಿದಿನ 50 ಟನ್ ಟೊಮೆಟೋ ಬರುತ್ತಿತ್ತು. ಆದರೆ, ಪ್ರಸ್ತುತ ಎರಡು ವಾರದಿಂದ ಕೇವಲ ಸುಮಾರು 20 ಟನ್ ಟೊಮೆಟೋ ಮಾತ್ರ ಬರುತ್ತಿದೆ. ಕಳೆದ ವರ್ಷ ಜುಲೈ ತಿಂಗಳ ಮೊದಲ ಹತ್ತು ದಿನಗಳಲ್ಲಿ 4 ಸಾವಿರ ಕ್ವಿಂಟಲ್ ಬಂದಿದ್ದ ಟೊಮೆಟೋ ಈ ವರ್ಷ ಕೇವಲ 2 ಸಾವಿರ ಕ್ವಿಂಟಲ್‌ಗೆ ಇಳಿದಿದೆ ಎಂದು ಎಪಿಎಂಸಿ ಸಹಾಯಕ ಕಾರ್ಯದರ್ಶಿ ಡಾ.ಆರ್.ರಾಜಣ್ಣ ತಿಳಿಸಿದರು.
ತಿಂಗಳ ನಂತರ ಇಳಿಕೆ ಸಾಧ್ಯತೆ:
ಕಲಾಸಿಪಾಳ್ಯ ಸಗಟು ತರಕಾರಿ ವರ್ತಕರ ಸಂಘದ ಅಧ್ಯಕ್ಷ ಆರ್.ವಿ.ಗೋಪಿ, ‘ಎಂಟತ್ತು ವರ್ಷಗಳ ಹಿಂದೆ ಸತತ ಹದಿನೈದು ದಿನಗಳ ಕಾಲ ಟೊಮೆಟೋ ಕೆ.ಜಿ.ಗೆ ನೂರು ರುಪಾಯಿ ಆಗಿತ್ತು. ಆದರೆ, ಬಳಿಕ ಬೆಲೆ ಇಳಿಕೆಯಾಗಿತ್ತು. ಆದರೆ, ನಾವು ನೋಡಿದಂತೆ ಇದೇ ಮೊದಲ ಬಾರಿಗೆ ಮೂರು ವಾರದ ಬಳಿಕವೂ ಶತಕ ದಾಟಿದ ಬೆಲೆಯಲ್ಲೇ ಇದೆ. ಕೋಲಾರದಲ್ಲಿ ಟೊಮೆಟೋ ಕೊರತೆ, ನಾಸಿಕ್‌ನಿಂದ ಬರದಿರುವ ಕಾರಣ ಇನ್ನೊಂದು ತಿಂಗಳ ಬಳಿಕವೇ ದರ ಇಳಿಯಬಹುದು’ ಎಂದು ಹೇಳಿದರು.
Good News: ಶೀಘ್ರದಲ್ಲೇ ಟೊಮ್ಯಾಟೋ ದರ ಇಳಿಕೆ; ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ
ಸತತ ಹದಿನೈದು ದಿನದ ಬಳಕವೂ ನೂರು ರುಪಾಯಿ ದಾಟಿ ಮುಂದುವರಿದಿರುವುದು ಇದೇ ಮೊದಲು. ಎಂಟು-ಹತ್ತು ವರ್ಷದ ಹಿಂದೆ ಶತಕ ದಾಟಿದ್ದಾಗ ಹದಿನೈದು ದಿನಗಳಲ್ಲಿ ದರ ಇಳಿಕೆಯತ್ತ ಮುಖ ಮಾಡುತ್ತಿತ್ತು.
ಆರ್.ವಿ.ಗೋಪಿ, ಕಲಾಸಿಪಾಳ್ಯ ಸಗಟು ತರಕಾರಿ ವರ್ತಕರ ಸಂಘದ ಅಧ್ಯಕ್ಷ
2016ರಲ್ಲಿ ಟೊಮೆಟೋ ಶತಕದ ಬೆಲೆ ಕಂಡಿದ್ದಾಗ ಹತ್ತು ದಿನಗಳಲ್ಲೇ ಇಳಿಕೆಯತ್ತ ಮುಖ ಮಾಡಿತ್ತು. ಆದರೆ, ಈ ವರ್ಷ ಹದಿನೈದು ದಿನಗಳಾದರೂ ಶತಕದ ಗರಿಷ್ಠ ದರ ಮುಂದುವರಿದಿದೆ.
ಎನ್.ವಿಜಯಲಕ್ಷ್ಮೇ, ಕೋಲಾರ ಎಪಿಎಂಸಿ ಕಾರ್ಯದರ್ಶಿ