ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ದೆಹಲಿಗೆ ತೆರಳಲಿದ್ದು, ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ನೆನೆಗುದಿಗೆ ಬಿದ್ದಿರುವ ಸಂಪುಟ ಕಸರತ್ತಿನ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆಯಿದೆ.

ಬೆಂಗಳೂರು (ಜೂ.23): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ದೆಹಲಿಗೆ ತೆರಳಲಿದ್ದು, ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ನೆನೆಗುದಿಗೆ ಬಿದ್ದಿರುವ ಸಂಪುಟ ಕಸರತ್ತಿನ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆಯಿದೆ. ಶುಕ್ರವಾರ ರಾಷ್ಟ್ರಪತಿ ಚುನಾವಣೆಯ ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಬೊಮ್ಮಾಯಿ ಅವರನ್ನು ದೆಹಲಿಗೆ ಆಹ್ವಾನಿಸಲಾಗಿದೆ. ಇದೇ ವೇಳೆ ಅವಕಾಶ ಸಿಕ್ಕರೆ ಬೊಮ್ಮಾಯಿ ಅವರು ಪಕ್ಷದ ವರಿಷ್ಠರನ್ನು ಕಂಡು ಸಂಪುಟ ಕಸರತ್ತಿನ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಂಪುಟ ಕಸರತ್ತಿನ ಬಗ್ಗೆ ಕಳೆದ ಹಲವು ತಿಂಗಳುಗಳಿಂದ ವದಂತಿ ಕೇಳಿಬರುತ್ತಿದ್ದರೂ ಒಂದಿಲ್ಲೊಂದು ಕಾರಣಗಳಿಂದ ಮುಂದೂಡಿಕೆಯಾಗುತ್ತಲೇ ಇದೆ. ಇದೀಗ ರಾಷ್ಟ್ರಪತಿ ಚುನಾವಣೆ ಎದುರಾಗಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಮೇಲಾಗಿ, ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ ಎದುರಾಗುವ ಸಾಧ್ಯತೆಯಿದೆ. ಹೀಗಿರುವಾಗ ಇಂಥ ಸನ್ನಿವೇಶದಲ್ಲಿ ಸಂಪುಟ ಕಸರತ್ತಿಗೆ ಮುಖ್ಯಮಂತ್ರಿಗಳು ಕೈಹಾಕುವ ಧೈರ್ಯ ತೋರುತ್ತಾರಾ ಎಂಬುದು ಅನುಮಾನವಾಗಿದೆ.

ಅನಾರೋಗ್ಯ ಪೀಡಿತ ಮಗುವಿಗೆ ಎರಡೇ ಗಂಟೆಯಲ್ಲಿ ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡಿದ ಸಿಎಂ ಬೊಮ್ಮಾಯಿ

ಒಂದು ವೇಳೆ ಪಕ್ಷದ ವರಿಷ್ಠರು ಸೂಚಿಸಿದರೆ ಮುಖ್ಯಮಂತ್ರಿಗಳು ಸಂಪುಟ ಕಸರತ್ತಿಗೆ ಮುಂದಾಗಬಹುದು. ಪುನಾರಚನೆ ಬದಲು ಈಗ ಸಂಪುಟದಲ್ಲಿ ಖಾಲಿ ಇರುವ ಐದು ಸ್ಥಾನಗಳ ಪೈಕಿ ನಾಲ್ಕನ್ನು ಭರ್ತಿ ಮಾಡುವ ಮೂಲಕ ಅಸಮಾಧಾನ ಭುಗಿಲೇಳುವುದನ್ನು ನಿಯಂತ್ರಿಸಲು ಪ್ರಯತ್ನಿಸಬಹುದು. ಇದೇ ವೇಳೆ ಬಹುದಿನಗಳಿಂದ ಕೇಳಿಬರುತ್ತಿರುವ ನಿಗಮ ಮಂಡಳಿ ನೇಮಕ ಕುರಿತೂ ಚರ್ಚೆ ನಡೆಯಬಹುದು ಎನ್ನಲಾಗಿದೆ.

ಮೇಕೆದಾಟು ಡಿಪಿಆರ್‌ಗೆ ಅನುಮೋದನೆ: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾವೇರಿ ಜಲ ನಿರ್ವಹಣೆ ಪ್ರಾಧಿಕಾರದ ಮುಂದೆ ರಾಜ್ಯದ ವಾದ ಮಂಡಿಸಿದ್ದು, ಮುಂದಿನ ವಾರ ನಡೆಯುವ ಪ್ರಾಧಿಕಾರದ ಸಭೆಯಲ್ಲಿ ರಾಜ್ಯದ ವಿಸ್ತೃತ ಯೋಜನಾ ವರದಿಗೆ ಅನುಮೋದನೆ ಸಿಗುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ಪ್ರಗತಿ: ಸಿಎಂ ಬೊಮ್ಮಾಯಿ

ನಗರದ ಜಿಎಂಐಟಿ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಸುಪ್ರೀಂಕೋರ್ಟ್‌ನಲ್ಲಿ ಯಾವುದೇ ತಡೆಯಾಜ್ಞೆಯೂ ಇಲ್ಲ. ಈ ವಿಚಾರದಲ್ಲಿ ನೆರೆಯ ತಮಿಳನಾಡಿನ ಎಲ್ಲಾ ಹೇಳಿಕೆಗಳಿಗೆ ನಾವು ಪದೇಪದೇ ಉತ್ತರ ಕೊಡಬೇಕಾದ ಅವಶ್ಯಕತೆ ಇಲ್ಲ ಅಂತ ತಿಳಿಸಿದ್ದಾರೆ. ಜಲ ನಿರ್ವಹಣೆ ಪ್ರಾಧಿಕಾರಕ್ಕೆ ಎಲ್ಲಾ ಅಧಿಕಾರವೂ ಇದೆ. ಮುಂದಿನ ವಾರ ಪ್ರಾಧಿಕಾರ ಸಭೆ ಕರೆಯುವ ಸಾಧ್ಯತೆ ಇದೆ. ಅಂದಿನ ಸಭೆಯಲ್ಲಿ ರಾಜ್ಯದ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.