ಬೆಂಗಳೂರು[ಜ.25]: ಭೂ ಪರಿವರ್ತನೆಯಾಗದ ಹಾಗೂ ಸಕ್ಷಮ ಯೋಜನಾ ಪ್ರಾಧಿಕಾರದಿಂದ ಮಂಜೂರಾತಿಯಾಗದ ನಿವೇಶನಗಳ ಅಕ್ರಮ ನೋಂದಣಿ ತಡೆಯುವ ದೃಷ್ಟಿಯಿಂದ ಕಂದಾಯ ನಿವೇಶನಗಳ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

ರಾಜ್ಯಾದ್ಯಂತ ಸೈಟ್‌ ನೋಂದಣಿ ಏಕಾ ಏಕಿ ಸ್ಥಗಿತ!

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂದಾಯ ಇಲಾಖೆಯ ಕಾವೇರಿ ತಂತ್ರಾಂಶದಲ್ಲಿ ಭೂ ಪರಿವರ್ತನೆಯಾಗದ, ಯೋಜನಾ ಮಂಜೂರಾತಿ ಇಲ್ಲದ ಕಂದಾಯ ನಿವೇಶನಗಳ ನೋಂದಣಿಗೆ ಅವಕಾಶವಿಲ್ಲ. ಆದರೆ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭೂ ಪರಿವರ್ತನೆ ಮಾಡದೆ, ಸಕ್ಷಮ ಯೋಜನಾ ಪ್ರಾಧಿಕಾರಗಳಿಂದ ಮಂಜೂರಾತಿ ಪಡೆಯದೆ ಅಕ್ರಮವಾಗಿ ಲೇಔಟ್‌ಗಳನ್ನು ನಿರ್ಮಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿಯಮ ಬಾಹಿರವಾಗಿ ನಿವೇಶನಗಳ ನೋಂದಣಿ ಮಾಡಿರುವ ಬಗ್ಗೆ ಸಾಕಷ್ಟುದೂರುಗಳು ಬಂದಿವೆ. ಕೆಲವೆಡೆ 10 ನಿವೇಶನಗಳನ್ನು 20 ನಿವೇಶಗಳನ್ನಾಗಿ ಮಾರಾಟ ಮಾಡುವ, ಯಾರದ್ದೋ ನಿವೇಶನವನ್ನು ಮತ್ಯಾರೋ ಮಾರಾಟ ಮಾಡುವಂತಹ ಪ್ರಯತ್ನಗಳು ನಡೆದಿವೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಕಂದಾಯ ನಿವೇಶನಗಳ ನೋಂದಣಿ ಸ್ಥಗಿತಗೊಳಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

ಈಗಾಗಲೇ ಸಾಕಷ್ಟುಜನರು ಇಂತಹ ಬಡಾವಣೆಗಳಲ್ಲಿ ಕಂದಾಯ ನಿವೇಶನಗಳನ್ನು ಖರೀದಿಸಿದ್ದಾರೆ. ಅಂತಹವರ ಗತಿ ಏನು ಎಂಬ ಪ್ರಶ್ನೆಗೆ, ಇಂತಹ ಅಕ್ರಮ ಲೇಔಟ್‌ ಹಾಗೂ ನಿವೇಶನಗಳನ್ನು ಖರೀದಿಸಿರುವುದರ ಬಗ್ಗೆ ಮುಂದೇನು ಮಾಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

500 ರು. ಲಂಚ ಕೊಡದ್ದಕ್ಕೆ ಮಕ್ಕಳ ವಯಸ್ಸು 100 ವರ್ಷ ಹೆಚ್ಚಿಸಿದ ಅಧಿಕಾರಿ!

ರಾಜ್ಯಾದ್ಯಂತ ಕಂದಾಯ ನಿವೇಶನಗಳ ನೋಂದಣಿಯನ್ನು ಸರ್ಕಾರ ಹಠಾತ್‌ ಸ್ಥಗಿತಗೊಳಿಸಿರುವ ಬಗ್ಗೆ ‘ಕನ್ನಡಪ್ರಭ’ ಶುಕ್ರವಾರ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು