ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ಬೆಲೆ ₹30,000 ದಾಟಿದೆ. ಕೇವಲ ನಾಲ್ಕು ದಿನಗಳಲ್ಲಿ ₹3,000 ರಷ್ಟು ಏರಿಕೆಯಾಗಿದ್ದು, ರೈತರಿಗೆ ಸಂತಸ ತಂದಿದೆ. ಶ್ರಾವಣ ಮಾಸ ಹತ್ತಿರವಾಗುತ್ತಿರುವುದರಿಂದ ಬೆಲೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

ತಿಪಟೂರು (ಜೂ.27) : ಏಷ್ಯಾದಲ್ಲಿಯೇ ಅತಿದೊಡ್ಡ ಮಾರುಕಟ್ಟೆ ಎಂದು ಹೆಸರುವಾಸಿಯಾಗಿರುವ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿನ ಉಂಡೆ ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ ₹30,000 ದಾಟಿದ್ದು, ತೆಂಗು ಬೆಳೆಗಾರರಿಗೆ ಸಂತಸ ತಂದಿದೆ.

Add Asianetnews Kannada as a Preferred SourcegooglePreferred

ಗುರುವಾರದ ಹರಾಜಿನಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ಗರಿಷ್ಟ ₹29,106ಕ್ಕೆ ಟೆಂಡರ್ ಆಗಿದ್ದು, ಸಂಜೆಯ ವೇಳೆಗೆ ₹30,000 ದಾಟಿದೆ. ಕಳೆದ ಸೋಮವಾರ ನಡೆದ ಹರಾಜಿನಿಂದ ಕೇವಲ ನಾಲ್ಕೇ ದಿನದಲ್ಲಿ ಬೆಲೆ ₹3 ಸಾವಿರದಷ್ಟು ಜಿಗಿದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ಕೇವಲ ₹9 ಸಾವಿರದ ಆಸುಪಾಸಿನಲ್ಲಿತ್ತು.

ತಿಪಟೂರು ಕೊಬ್ಬರಿ ಹೆಚ್ಚಿನ ಸಿಹಿ ಹಾಗೂ ಉತ್ತಮ ಗುಣಮಟ್ಟದ ಎಣ್ಣೆ ಅಂಶಗಳನ್ನೊಳಗೊಂಡಿದೆ. ಮುಂಬರುವ ಶ್ರಾವಣ ಮಾಸದಲ್ಲಿ ಸಾಲು, ಸಾಲು ಹಬ್ಬ, ಶುಭ ಸಮಾರಂಭಗಳು, ಕಾರ್ಯಕ್ರಮಗಳು ಪ್ರಾರಂಭವಾಗುವುದರಿಂದ ಇಲ್ಲಿನ ಕೊಬ್ಬರಿಗೆ ಮತ್ತಷ್ಟು ಬೇಡಿಕೆ ಬರುವ ನಿರೀಕ್ಷೆಯಿದೆ. ಹೀಗಾಗಿ, ಮುಂದಿನ ಕೆಲವೇ ವಾರಗಳಲ್ಲಿ ಕ್ವಿಂಟಾಲ್ ಬೆಲೆ ₹35 ರಿಂದ ₹40 ಸಾವಿರ ತಲುಪುವ ಆಶಾಭಾವ ರೈತರದು.

ಇತ್ತೀಚಿನ ವರ್ಷಗಳಲ್ಲಿ ಕೊಬ್ಬರಿ ಎಣ್ಣೆ ದಿನನಿತ್ಯದ ಅಡುಗೆ, ಖಾದ್ಯ ತಯಾರಿಸಲು ಹೆಚ್ಚೆಚ್ಚು ಬಳಕೆಯಾಗುತ್ತಿದೆ. ತಮಿಳುನಾಡು, ಆಂಧ್ರ, ಕೇರಳ ಮತ್ತಿತರ ತೆಂಗು ಬೆಳೆಯುವ ಪ್ರದೇಶಗಳಲ್ಲಿ ತೆಂಗಿನ ಮರಗಳಿಗೆ ನಾನಾ ರೋಗ ರುಜಿನಗಳು ಅಂಟಿಕೊಂಡಿದ್ದು, ತೆಂಗಿನಕಾಯಿಗಳ ಇಳುವರಿ ಕುಸಿತ ಕಂಡಿದೆ. ಕಳೆದೊಂದು ವರ್ಷದಿಂದ ಎಳನೀರು ಮತ್ತು ತೆಂಗಿನಕಾಯಿಗಳಿಗೆ ಉತ್ತಮ ಬೆಲೆ ಬಂದ ಕಾರಣ, ಹೆಚ್ಚಿನ ರೈತರು ತೆಂಗಿನ ಕಾಯಿ ಮತ್ತು ಎಳನೀರು ಮಾರಾಟ ಮಾಡಲು ಮುಂದಾಗಿದ್ದಾರೆ. ಹೀಗಾಗಿ, ಕೊಬ್ಬರಿ ದಾಸ್ತಾನು ಕಡಿಮೆಯಾಗಿದೆ.