ಎಚ್‌.ಡಿ.ಕೋಟೆ :  ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಮತ್ತೆ ನರಹಂತಕ ಹುಲಿಯ ಆರ್ಭಟ ಕೇಳಿಬಂದಿದೆ. ಗೆಣಸು ಸಂಗ್ರಹಿಸಲೆಂದು ಕಾಡಿಗೆ ತೆರಳಿದ್ದ ವ್ಯಕ್ತಿಯೊಬ್ಬನ ಮೇಲೆ ನರಹಂತಕ ಹುಲಿ ದಾಳಿ ನಡೆಸಿ ಕೊಂದ ಘಟನೆ ಡಿ.ಬಿ.ಕುಪ್ಪೆ ವಲಯದಲ್ಲಿ ಗುರುವಾರ ನಡೆದಿದೆ. ಈ ಮೂಲಕ ಈ ಅರಣ್ಯವ್ಯಾಪ್ತಿಯಲ್ಲಿ 38 ದಿನಗಳಲ್ಲಿ ಮೂವರು ನರಹಂತಕ ಹುಲಿ ಬಾಯಿಗೆ ಬಲಿಯಾದಂತಾಗಿದೆ.

ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಡಿ.ಬಿ. ಕುಪ್ಪೆ ವಲಯದ ಬಳ್ಳೆ ರೇಂಜ್‌ನ ಸೇಬನಕೊಲ್ಲಿ ಹಾಡಿ ಮತ್ತು ಗೋಳೂರು ಹಾಡಿ ನಡುವಿನ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತಿಮ್ಮನಹೊಸಹಳ್ಳಿ ಹಾಡಿಯ ಕೆಂಚ(55) ಮೃತ ವ್ಯಕ್ತಿ. ಮನೆಯಿಂದ ಸುಮಾರು 500 ಮೀಟರ್‌ ದೂರದಲ್ಲಿರುವ ಕಾಡಿನಲ್ಲಿ ಆಹಾರಕ್ಕಾಗಿ ಗೆಣಸು ಸಂಗ್ರಹಿಸಲೆಂದು ಹೋಗಿದ್ದ ಕೆಂಚ ಮನೆಗೆ ವಾಪಸಾಗುತ್ತಿದ್ದಾಗ ಈ ದಾಳಿ ನಡೆದಿದೆ.

ಗೆಣಸು ಸಂಗ್ರಹಿಸಲು ತೆರಳಿದ್ದ ಕೆಂಚ ಅವರು ಮೇಕೆ ಮೇಯಿಸಲು ತೆರಳಿದ್ದ ನಾಗರಾಜು ಎಂಬಾತನ ಜೊತೆ ವಾಪಸಾಗುತ್ತಿದ್ದರು. ಈ ವೇಳೆ ಪೂದೆಯಲ್ಲಿ ಅವಿತಿದ್ದ ಹುಲಿ ಏಕಾಏಕಿ ಕೆಂಚನ ಮೇಲೆರಗಿದೆ. ಜತೆಯಲ್ಲೇ ಇದ್ದ ನಾಗರಾಜು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಹುಲಿಗೆ ಹೊಡೆದಿದ್ದಾರೆ. ನಾಗರಾಜು ಹೊಡೆತದ ರಬಸಕ್ಕೆ ರಾಡು ಬಾಗಿದರೂ ಹುಲಿ ಮಾತ್ರ ಜಪ್ಪಯ್ಯ ಅನ್ನದೆ ದಾಳಿ ಮುಂದುವರಿಸಿದೆ. ನಂತರ ಅಕ್ಕಪಕ್ಕದವರು ಸೇರುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದೆ. ವಿಷಯ ತಿಳಿಯುತ್ತಿದ್ದಂತೆಯೇ ಡಿ.ಬಿ. ಕುಪ್ಪೆ ವಲಯಾರಣ್ಯಾಧಿಕಾರಿ ಸುಬ್ರಮಣ್ಯಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

3ನೇ ವ್ಯಕ್ತಿ: ಡಿ.24 ರಂದು ಡಿ.ಬಿ.ಕುಪ್ಪೆ ವ್ಯಾಪ್ತಿಯ ಮಾನೆಮೂಲೆ ಹಾಡಿಯಲ್ಲಿ ಮಧು ಎಂಬಾತನನ್ನು ಹುಲಿಯೊಂದು ಕೊಂದು ದೇಹದ ಅರ್ಧಭಾಗ ತಿಂದಿತ್ತು. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆ ಬಳಿಕ ಜ.28ರಂದು ಇದೇ ಡಿ.ಬಿ.ಕುಪ್ಪೆ ವಲಯದ ಹುಲ್ಲುಮುಕ್ಲು ಗ್ರಾಮದಲ್ಲಿ ಬಹಿರ್ದೆಸೆಗೆ ತೆರಳಿದ ಚಿನ್ನಪ್ಪ (39) ಹುಲಿ ದಾಳಿಗೆ ಬಲಿಯಾಗಿದ್ದರು. ಇದಾದ ಮೂರೇ ದಿನಕ್ಕೆ ನರಹಂತಕ ಹುಲಿ ಮತ್ತೊಬ್ಬ ವ್ಯಕ್ತಿಯನ್ನು ಬಲಿಪಡೆದಿದೆ. ಇದರಿಂದ ಸುತ್ತಮುತ್ತಲ ಪ್ರದೇಶದ ಹಾಡಿಗಳಲ್ಲಿ ಆತಂಕ ಸೃಷ್ಟಿಯಾಗಿದ್ದು, ಮನೆಯಿಂದ ಹೊರಬರಲೂ ಜನ ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ತಕ್ಷಣ ನರಹಂತಕ ಹುಲಿಯನ್ನು ತಕ್ಷಣ ಹಿಡಿಯಬೇಕು ಅಥವಾ ಹತ್ಯೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.