ದೀಪಾವಳಿಗೆ ಹೊರಟವರಿಗೆ ಖಾಸಗಿ ಬಸ್ ‘ಬಿಸಿ ತುಪ್ಪ’: ಟಿಕೆಟ್ ದರದಲ್ಲಿ ಭಾರೀ ಏರಿಕೆ..!
ಎರಡನೇ ಶನಿವಾರ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾಲುಸಾಲು ರಜೆಯಿದ್ದು, ಬೆಂಗಳೂರಿನಿಂದ ವಿವಿಧ ಜಿಲ್ಲೆ, ನಗರಗಳಿಗೆ ತೆರಳುವವರು ಶುಕ್ರವಾರದಿಂದಲೇ ಪ್ರಯಾಣ ಬೆಳೆಸುತ್ತಾರೆ. ವರ್ಷದ ಕೊನೆಯ ಹಬ್ಬವಾದ ಕಾರಣ ಸಾಕಷ್ಟು ಜನರು ಊರಿಗೆ ತೆರಳುವ ಸಾಧ್ಯತೆಗಳಿವೆ. ಅದರಿಂದ ಪ್ರಯಾಣಿಕರು ಭಾರೀ ಸಂಖ್ಯೆಯಲ್ಲಿ ಹೆಚ್ಚಲಿದ್ದು, ಅದರಿಂದ ಲಾಭ ಪಡೆಯಲು ಮುಂದಾಗಿರುವ ಖಾಸಗಿ ಬಸ್ ಮಾಲೀಕರು ಪ್ರಯಾಣ ದರವನ್ನು ಎರಡೂವರೆ ಪಟ್ಟು ಹೆಚ್ಚಳ ಮಾಡಿದ್ದಾರೆ.

ಬೆಂಗಳೂರು(ನ.08): ಸಾಲುಸಾಲು ರಜೆ ಹಿನ್ನೆಲೆಯಲ್ಲಿ ಮಿತಿಮೀರಿ ಟಿಕೆಟ್ ದರ ವಸೂಲಿ ಮಾಡದಂತೆ ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆ ನೀಡಿದ ಸೂಚನೆ ನೀಡಿದ್ದರೂ, ಅದನ್ನು ಲೆಕ್ಕಿಸದ ಬಸ್ ಮಾಲೀಕರು ಮುಂದಿನ ಶುಕ್ರವಾರ ರಾತ್ರಿಯಿಂದಲೇ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಕರಿಂದ ಮಾಮೂಲಿ ದರಕ್ಕಿಂತ ಎರಡೂವರೆ ಪಟ್ಟು ಹೆಚ್ಚಿನ ಪ್ರಯಾಣ ದರ ವಸೂಲಿಗೆ ಸಿದ್ಧರಾಗಿದ್ದಾರೆ.
ಪ್ರತಿ ಬಾರಿ ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಿಂದ ಬೇರೆ ಊರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಕಾರಣ ಖಾಸಗಿ ಬಸ್‌ಗಳಲ್ಲಿ ಪ್ರಯಾಣ ದರವನ್ನು ದುಪ್ಪಟ್ಟು ಮಾಡಲಾಗುತ್ತದೆ. ಈ ಕುರಿತು ಸಾರಿಗೆ ಇಲಾಖೆಗೂ ದೂರು ನೀಡಲಾಗುತ್ತಿತ್ತು. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಮಿತಿಮೀರಿ ಟಿಕೆಟ್ ದರ ವಸೂಲಿ ಮಾಡದಂತೆ ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆ ಪದೇಪದೆ ಸೂಚನೆ ನೀಡುತ್ತಲಿದೆ. ಕಳೆದ ಗೌರಿ-ಗಣೇಶ, ದಸರಾ ಹಬ್ಬಗಳ ಸಂದರ್ಭದಲ್ಲಿಯೂ ಆ ರೀತಿಯ ಎಚ್ಚರಿಕೆ ನೀಡಿ ಕೆಲ ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗಿತ್ತು. ಆದರೂ, ಖಾಸಗಿ ಬಸ್ ಮಾಲೀಕರು ಮಾತ್ರ ಪ್ರಯಾಣ ದರ ಬೇಕಾಬಿಟ್ಟಿಯಾಗಿ ಏರಿಕೆ ಮಾಡುವುದರಿಂದ ಹಿಂದೆ ಸರಿದಿಲ್ಲ.
ದಸರಾ ನೆಪದಲ್ಲೇ ಖಾಸಗಿ ಬಸ್‌ಗಳ ದರ್ಬಾರ್: ಟಿಕೆಟ್ ದರ 3 ಪಟ್ಟು ಹೆಚ್ಚಳ, ಕಂಗಾಲಾದ ಪ್ರಯಾಣಿಕರು..!
ಎರಡನೇ ಶನಿವಾರ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾಲುಸಾಲು ರಜೆಯಿದ್ದು, ಬೆಂಗಳೂರಿನಿಂದ ವಿವಿಧ ಜಿಲ್ಲೆ, ನಗರಗಳಿಗೆ ತೆರಳುವವರು ಶುಕ್ರವಾರದಿಂದಲೇ ಪ್ರಯಾಣ ಬೆಳೆಸುತ್ತಾರೆ. ವರ್ಷದ ಕೊನೆಯ ಹಬ್ಬವಾದ ಕಾರಣ ಸಾಕಷ್ಟು ಜನರು ಊರಿಗೆ ತೆರಳುವ ಸಾಧ್ಯತೆಗಳಿವೆ. ಅದರಿಂದ ಪ್ರಯಾಣಿಕರು ಭಾರೀ ಸಂಖ್ಯೆಯಲ್ಲಿ ಹೆಚ್ಚಲಿದ್ದು, ಅದರಿಂದ ಲಾಭ ಪಡೆಯಲು ಮುಂದಾಗಿರುವ ಖಾಸಗಿ ಬಸ್ ಮಾಲೀಕರು ಪ್ರಯಾಣ ದರವನ್ನು ಎರಡೂವರೆ ಪಟ್ಟು ಹೆಚ್ಚಳ ಮಾಡಿದ್ದಾರೆ. ಹೀಗಾಗಿ ಆನ್‌ಲೈನ್ ಮೂಲಕ ಈಗಲೇ ಟಿಕೆಟ್ ಕಾಯ್ದಿರಿಸಲು ಮುಂದಾದವರು ಪ್ರಯಾಣ ದರ ನೋಡಿ ಗಾಬರಿಯಾಗಿದ್ದಾರೆ.
ಸಾರಿಗೆ ಇಲಾಖೆ ಮತ್ತೆ ಎಚ್ಚರಿಕೆ
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳಿಂದ ಪ್ರಯಾಣ ದರ ಬೇಕಾಬಿಟ್ಟಿಯಾಗಿ ಏರಿಕೆ ಮಾಡಿರುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ ಬಸ್‌ಗಳು ನಿಗದಿಯಂತೆ ಪ್ರಯಾಣ ದರ ವಸೂಲಿ ಮಾಡಬೇಕು. ಆದರೆ, ಬೇಕಾಬಿಟ್ಟಿಯಾಗಿ ಪ್ರಯಾಣದರ ಏರಿಕೆ ಮಾಡುವುದು ಕಂಡು ಬಂದರೆ ಅವರ ವಿರುದ್ಧ ಪರ್ಮಿಟ್ ರದ್ದು ಸೇರಿದಂತೆ ಇನ್ನಿತರ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಕೆಎಸ್ಸಾರ್ಟಿಸಿ ಪ್ರಯಾಣ ದರವೂ ಹೆಚ್ಚಳ
ಸಾಮಾನ್ಯವಾಗಿ ಕೆಎಸ್ಸಾರ್ಟಿಸಿ ಕೂಡ ಹಬ್ಬದ ಸಂದರ್ಭದಲ್ಲಿ ಬಸ್ ಪ್ರಯಾಣ ದರದಲ್ಲಿ ಕೊಂಚ ಹೆಚ್ಚಳ ಮಾಡುತ್ತದೆ. ನಿಯಮದಲ್ಲಿ ಅದಕ್ಕೆ ಅವಕಾಶವಿದ್ದು, ಅದರಂತೆ ಶೇ.5ರಿಂದ 10ರಷ್ಟು ಪ್ರಯಾಣ ದರದಲ್ಲಿ ಏರಿಕೆ ಮಾಡುತ್ತದೆ. ದೀಪಾವಳಿ ಹಬ್ಬದ ಸಂದರ್ಭದಲ್ಲೂ ಆ ರೀತಿ ಪ್ರಯಾಣ ದರ ಹೆಚ್ಚಳ ಮಾಡಲಾಗುತ್ತಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ವಸೂಲಿಗಿಳಿದ ಬಸ್‌ಗಳ ಮೇಲೆ ಅಧಿಕಾರಿಗಳ ರೇಡ್..60ಕ್ಕೂ ಹೆಚ್ಚು ಕೇಸ್ ದಾಖಲು
ದರ ಹೆಚ್ಚಳದ ವಿವರ
ಮಾರ್ಗ ಮಾಮೂಲಿ ಟಿಕೆಟ್ ದರ ಶುಕ್ರವಾರದ ಟಿಕೆಟ್ ದರ
ಶಿವಮೊಗ್ಗ ₹450ರಿಂದ ₹550 ₹1,500ರಿಂದ ₹1800
ಹುಬ್ಬಳ್ಳಿ ₹700ರಿಂದ ₹900 ₹1,700ರಿಂದ ₹2,200
ಮಂಗಳೂರು ₹850ರಿಂದ ₹900 ₹1,500ರಿಂದ ₹2,300
ಉಡುಪಿ ₹750ರಿಂದ ₹950 ₹1,300ರಿಂದ ₹2 ಸಾವಿರ
ಬೆಳಗಾವಿ ₹800ರಿಂದ ₹1 ಸಾವಿರ ₹1,800ರಿಂದ ₹2,20
ದಾವಣಗೆರೆ ₹500ರಿಂದ ₹700 ₹1 ಸಾವಿರದಿಂದ ₹1,700
ಹಬ್ಬಕ್ಕೆ ಬಿಎಂಟಿಸಿ ಬಸ್ ಬಳಕೆ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗುವ ಸಾಧ್ಯತೆ ಇರುವ ಕಾರಣದಿಂದ ಕೆಎಸ್ಸಾರ್ಟಿಸಿಯಿಂದ 2 ಸಾವಿರ ಬಸ್ ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ಅದರ ಜತೆಗೆ ಅಗತ್ಯವಿದ್ದರೆ ಬಿಎಂಟಿಸಿಯಿಂದಲೂ ಬಸ್‌ಗಳನ್ನು ಪಡೆದು ಕಾರ್ಯಾಚರಣೆಗಿಳಿಸಲು ನಿರ್ಧರಿಸಿರುವುದಾಗಿ ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.