*   ಹುಬ್ಬಳ್ಳಿಯಲ್ಲಿ 60ಕ್ಕೂ ಹೆಚ್ಚು ಮರ ಧರಾಶಾಹಿ*  ಬಲವಾಗಿ ಬೀಸಿದ ಗಾಳಿಗೆ ಮರ ಬಿದ್ದು ಆಟೋ ಜಖಂ*  ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ

ಬೆಂಗಳೂರು(ಮೇ.05): ರಾಜ್ಯದ 11 ಜಿಲ್ಲೆಗಳಲ್ಲಿ ಬುಧವಾರ ಆಕಾಲಿಕ ಮಳೆ(Rain) ಆರ್ಭಟಿಸಿದ್ದು ಮಳೆ ಸಂಬಂಧಿ ಕಾರಣಗಳಿಗೆ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಮೃತಪಟ್ಟಿದ್ದಾರೆ(Death). ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರವಾಡ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದ್ದರೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲೂ ಉತ್ತಮ ಮಳೆ ಸುರಿದಿದೆ. ಚಿತ್ರದುರ್ಗದಲ್ಲಿ ಸಿಡಿಲಿಗೆ ತಾಯಿ, ಮಗ, ಹುಬ್ಬಳ್ಳಿಯಲ್ಲಿ ಆಟೋ ಮೇಲೆ ಮರ ಬಿದ್ದು ವ್ಯಕ್ತಿ ಮೃತಪಟ್ಟಿದ್ದಾರೆ.

ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು ಹಾರಂಗಿಯಲ್ಲಿ ಆಲಿಕಲ್ಲು ಮಳೆ ಸುರಿದಿದೆ. ರಾಯಚೂರು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಭಾರೀ ಮಳೆಯಾಗಿದ್ದು ಮೊಳಕಾಲ್ಮುರು ತಾಲೂಕಿನಲ್ಲಿ ಕುರಿ ಮೇಯಿಸಲು ಹೋಗಿದ್ದ ತಾಯಿ, ಮಗ ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೇಗಳಹಟ್ಟಿ ಗ್ರಾಮದ ಮಾರಕ್ಕ(45), ವೆಂಕಟೇಳ(17) ಮೃತರು.

ಕರ್ನಾಟಕದ 11 ಜಿಲ್ಲೆಗಳಲ್ಲಿ ಭಾರೀ ಮಳೆ: ಸಿಡಿಲು ಬಡಿದು ಐವರು ಸಾವು

ಇನ್ನು ಹುಬ್ಬಳ್ಳಿ-ಧಾರವಾಡ(Hubballi-Dharwad) ಮಹಾನಗರದಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದ್ದು ನಗರದ ದೇಸಾಯಿ ಸರ್ಕಲ್‌ ಬಳಿ ನಿಂತಿದ್ದ ಆಟೋ ಮೇಲೆ ಮರವೊಂದು ಉರುಳಿ ಅದರೊಳಗಿದ್ದ ರುಬೇನ ಫೆರೆರಾ(33)ಎಂಬವರು ಮೃತಪಟ್ಟಿದ್ದಾರೆ. ಇದೇವೇಳೆ ದೇಶಪಾಂಡೆ ನಗರದಲ್ಲಿ ಮರ ಬಿದ್ದು ಮತ್ತೊಂದು ಆಟೊ ಸಂಪೂರ್ಣ ಜಖಂಗೊಂಡಿದ್ದು, ಪತಿ, ಪತ್ನಿ ಮತ್ತು ಪುತ್ರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಉರುಳುವ ಸಂಭಾವ್ಯ ಅರಿತು ಆಟೋದಿಂದ ಹೊರಬಂದಿದ್ದರಿಂದ ಅನಾಹುತ ತಪ್ಪಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಹಾನಗರದಲ್ಲಿ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು 60ಕ್ಕೂ ಹೆಚ್ಚು ಗಿಡ ಮರ, ಹತ್ತಾರು ವಿದ್ಯುತ್‌ ಕಂಬ ನೆಲಕ್ಕುರುಳಿವೆ. ಹತ್ತಾರು ಕಾರು, ಬೈಕ್‌, ಆಟೋಗಳು ಮರದಡಿಗೆ ಸಿಲುಕಿ ಜಖಂಗೊಂಡಿವೆ.

ಚಿಕ್ಕಮಗಳೂರು ನಗರದಲ್ಲಿ ಬಲವಾಗಿ ಬೀಸಿದ ಗಾಳಿಗೆ ಮರ ಬಿದ್ದು ಆಟೋ ಜಖಂಗೊಂಡಿದೆ. ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಬೃಹದಾಕಾರದ ಮರ ಉರುಳಿ ಕಾರು ಒಂದು ಸಂಪೂರ್ಣ ಜಖಂಗೊಂಡಿದ್ದರೆ, ಬಂಚಹಳ್ಳಿ ಹುಂಡಿಯಲ್ಲಿ ಬೃಹತ್‌ ಮರವೊಂದು ಬಿದ್ದು ಮನೆಗೆ ಹಾನಿಯಾಗಿದೆ.