Asianet Suvarna News Asianet Suvarna News

Karnataka Rains: ಕರ್ನಾಟಕದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬೇಸಿಗೆ ಮಳೆ: 3 ಬಲಿ

*   ಬೆಂಗಳೂರಿನಲ್ಲಿ 1000ಕ್ಕೂ ಹೆಚ್ಚು ಮನೆಗಳಿಗೆ ನೀರು
*  ಹಾಸನದಲ್ಲಿ ನಡೆದುಹೋಗುತ್ತಿದ್ದವನ ಮೇಲೆ ಶಾಲೆ ಗೋಡೆ ಕುಸಿದು ಸಾವು
*  ರಾಜ್ಯದ ಹಲವೆಡೆ ಮಾವು, ದ್ರಾಕ್ಷಿ, ಬಾಳೆ, ಹೂವು, ತರಕಾರಿ ಬೆಳೆ ನಾಶ
 

Three Killed in Karnataka Due to Heavy Rain on May 18th grg
Author
Bengaluru, First Published May 19, 2022, 5:59 AM IST

ಬೆಂಗಳೂರು(ಮೇ.19): ಕಳೆದೊಂದು ವಾರದಿಂದ ಸುರಿಯುತ್ತಿರುವ ಮುಂಗಾರುಪೂರ್ವ ಮಳೆ ಬುಧವಾರ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುರಿದಿದ್ದು ರಾಜಧಾನಿ ಬೆಂಗಳೂರು ಸೇರಿ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ಸಂಬಂಧಿ ಕಾರಣಗಳಿಗೆ ಮೂವರು ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ಬೆಂಗಳೂರು ಮತ್ತು ಹಾಸನದಿಂದ ವರದಿಯಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಕೋಲಾರ, ತುಮಕೂರು, ಮೈಸೂರು, ಮಂಡ್ಯ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಕೊಡಗು ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿಯಿಂದೀಚೆಗೆ ಉತ್ತಮ ಮಳೆ ಸುರಿಯುತ್ತಿದ್ದರೆ, ರಾಯಚೂರು, ಬೀದರ್‌, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಬಳ್ಳಾರಿ, ಕೊಪ್ಪಳ, ಹಾವೇರಿ, ಗದಗ, ಧಾರವಾಡ, ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಜಿಟಿಜಿಟಿ ಮಳೆ ಸುರಿದಿದೆ.

ಬೆಂಗ್ಳೂರಲ್ಲಿ 10 ದಿನದ ಬಳಿಕ ವಿರಾಮ ಕೊಟ್ಟ ವರುಣ: ಚಳಿಯ ವಾತಾವರಣ

ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ಮಂಗಳವಾರ ಒಂದೇ ದಿನ ಸುಮಾರು 350 ಮಿಲಿ ಮೀಟರ್‌ ಮಳೆಯಾಗಿರುವುದು ಇದುವರೆಗಿನ ದಾಖಲೆಯಾಗಿದೆ. ಇನ್ನುಳಿದಂತೆ ಮೈಸೂರಿನ ಕೆ.ಆರ್‌.ನಗರದ ಗಂಧನಹಳ್ಳಿಯಲ್ಲಿ 23.1 ಸೆಂ.ಮೀ, ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದ ಮಜರಾಹೊಸಹಳ್ಳಿ 18.75 ಸೆಂ.ಮೀ, ಹಾಸನದ ಚನ್ನರಾಯಪಟ್ಟಣ ತಾಲೂಕಿನ ಡಿ. ಕಾಳೇನಹಳ್ಳಿ 17.75 ಸೆಂ.ಮೀ, ತುಮಕೂರಿನ ಶೆಟ್ಟಿಗೊಂಡನಹಳ್ಳಿ 16.4 ಸೆಂ.ಮೀ, ಬೆಂಗಳೂರು ನಗರದ ಆಲೂರು 15.6 ಸೆಂ.ಮೀ, ಮಂಡ್ಯದ ಹಲಗೂರು 15.4 ಸೆಂ.ಮೀ ಮಳೆಯಾಗಿದೆ.

ಬೆಂಗಳೂರಲ್ಲಿ ಜನಜೀವನ ಅಸ್ತವ್ಯಸ್ತ: ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಸುರಿದ ಗುಡುಗು ಸಹಿತ ಧಾರಾಕಾರ ಮಳೆಗೆ ಜನ ಜೀವನ ಸಂಪೂರ್ಣ ಅಸ್ಥವ್ಯಸ್ಥವಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಸಾವಿರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ತಗ್ಗು ಪ್ರದೇಶದಲ್ಲಿರುವ ಬಡಾವಣೆಗಳು ಅಕ್ಷರಶಃ ದ್ವೀಪಗಳಾಗಿ ಮಾರ್ಪಪಟ್ಟಿವೆ. ನಗರದಲ್ಲಿ 15ಕ್ಕೂ ಹೆಚ್ಚು ಬೈಕುಗಳು ಜಖಂಗೊಂಡಿದ್ದು ಅನೇಕ ಕಡೆ ಮನೆ ಗೋಡೆ, ಕಾಂಪೌಂಡು ಗೋಡೆಗಳು ಕುಸಿದಿವೆ.
ಉಲ್ಲಾಳ ಕೆರೆ ಸಮೀಪದಲ್ಲಿ ಬೆಂಗಳೂರು ಜಲಮಂಡಳಿಯ ಕಾವೇರಿ 5ನೇ ಹಂತದ ಯೋಜನೆಯ ಕೊಳವೆ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು, ಮಂಗಳವಾರ ಕೊಳವೆ ಅಳವಡಿಕೆ ಗುಂಡಿಯಲ್ಲಿ ನೀರು ತುಂಬಿಕೊಂಡು ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ದೇವಭಾರತ್‌, ಉತ್ತರ ಪ್ರದೇಶ ಮೂಲದ ಅಖಿತ್‌ ಕುಮಾರ್‌ ಉಸಿರುಗಟ್ಟಿಮೃತಪಟ್ಟಿದ್ದಾರೆ. ಈ ವೇಳೆ ಮತ್ತೊಬ್ಬ ಕಾರ್ಮಿಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇನ್ನು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ರಂಗೇನಹಳ್ಳಿ ಗ್ರಾಮದಲ್ಲಿ ಶಿಥಿಲಗೊಂಡಿದ್ದ ಸರ್ಕಾರಿ ಶಾಲಾ ಕಟ್ಟಡದ ಗೋಡೆ ಕುಸಿದು ಬಿದ್ದ ಪರಿಣಾಮ ನಡೆದುಕೊಂಡು ಹೋಗುತ್ತಿದ್ದ ಎಂ.ಕೆ.ಹೊಸೂರು ಗ್ರಾಮದ ಶಿವಕುಮಾರ್‌ ಮೃತಪಟ್ಟಿದ್ದಾರೆ. ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ಸೋನೆ ಮಳೆ ವ್ಯಾಪಿಸಿರುವುದರಿಂದ ಬುಧವಾರದಂದು ಎಲ್ಲ ಶಾಲೆಗಳಿಗೂ ರಜೆ ಘೋಷಣೆ ಮಾಡಲಾಗಿತ್ತು.

Karnataka Rains Effect: 100 ರ ಗಡಿಗೆ ತಲುಪಿದ ಟೊಮೆಟೋ ಬೆಲೆ..!

ಪಕ್ಕದ ತುಮಕೂರು ಜಿಲ್ಲೆಯಾದ್ಯಂತ ವರುಣನ ಆರ್ಭಟಕ್ಕೆ ಜನತೆ ತತ್ತರಿಸಿ ಹೋಗಿದ್ದು ಬೇಸಿಗೆ ಬೆಳೆಗಳಾದ ಗದ್ದೆ, ಶೇಂಗಾ, ರಾಗಿ ಮತ್ತಿತರೆ ಬೆಳೆಗಳನ್ನು ಕಟಾವು ಮಾಡುವ ರೈತರು ಪರದಾಡುತ್ತಿದ್ದಾರೆ. ಅಡಿಕೆ, ಬಾಳೆ, ಹೆಸರು, ಅಲಸಂಡೆ ಬೆಳೆಗಳಿಗೆ ತೀವ್ರ ಹಾನಿಯಾಗಿದೆ. ಹೆಚ್ಚಿನ ರಸ್ತೆಗಳೆಲ್ಲಾ ಜಲಾವೃತವಾಗಿ ಕೆಸರಿನಿಂದ ತುಂಬಿಹೋಗಿದ್ದು ಮಧುಗಿರಿ ತಾಲೂಕಿನ ಆಚೇನಹಳ್ಳಿ -ಮರಿತಿಮ್ಮನಹಳ್ಳಿ ಸಂಪರ್ಕ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ಸತತ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಆರ್ಭಟಕ್ಕೆ ಮಾವು, ದ್ರಾಕ್ಷಿಗಳಿಗೆ ಅಪಾರ ಹಾನಿಯಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಆಲಿಕಲ್ಲು ಮಳೆಗೆ ತೋಟಗಳು ಜಲಾವೃತವಾಗಿದ್ದು ತರಕಾರಿ, ಹೂವು ಮತ್ತು ಬಾಳೆ ಇನ್ನಿತರೆ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. ಮಳವಳ್ಳಿಯ ಬಾಲಕಿಯರ ಶಾಲೆ ಜಲಾವೃತಗೊಂಡು ಕೊಠಡಿಗಳಲ್ಲಿ ಎರಡು ಅಡಿಯಷ್ಟುನೀರು ನಿಂತಿ ಹಲವು ಪುಸ್ತಕಗಳು, ದಾಖಲೆಗಳು ನೀರಲ್ಲಿ ನೆನೆದು ಹಾಳಾಗಿವೆ. ಕೆ.ಆರ್‌.ಪೇಟೆ ತಾಲೂಕಿನ ಚೊಟ್ಟನಹಳ್ಳಿ ಬಳಿ ಹಳ್ಳದ ಸೇತುವೆ ಕುಸಿದು 4 ಗ್ರಾಮಗಳ ಸಂಚಾರಕ್ಕೆ ಅಡಚಣೆಯಾಗಿದೆ.
 

Follow Us:
Download App:
  • android
  • ios