ಅರಸೀಕೆರೆ, ಬೈಲಹೊಂಗಲ ತಾಲೂಕಿನಲ್ಲಿ ಮನೆ ಕುಸಿದು ತಲಾ ಒಬ್ಬರ ದುರ್ಮರಣ, ಕಡೂರಿನಲ್ಲಿ ನೀರಲ್ಲಿ ಕೊಚ್ಚಿಹೋದ ವೃದ್ಧೆ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಸ್ನಾನಘಟ್ಟ ಮುಳುಗಡೆ, ಆಲಮಟ್ಟಿ ಭರ್ತಿಗೆ 2 ಮೀಟರ್‌ ಬಾಕಿ, ನಾಲ್ಕು ಜಿಲ್ಲೆಗಳ ಶಾಲೆಗಳಿಗೆ ಇಂದು ರಜೆ

ಬೆಂಗಳೂರು(ಜು.27): ಕೊಡಗು, ಕರಾವಳಿ, ಮಲೆನಾಡು ಸೇರಿ ರಾಜ್ಯದ 18ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಮಳೆ ಸಂಬಂಧಿ ಅವಘಡಗಳಲ್ಲಿ ಬುಧವಾರ ಮತ್ತೆ ಮೂವರು ಅಸುನೀಗಿದ್ದಾರೆ. ಸೋಮವಾರ ಹಾಗೂ ಮಂಗಳವಾರ ತಲಾ 5 ಮಂದಿ ಅಸುನೀಗಿದ್ದರು. ಈ ಮಧ್ಯೆ, ಕಳೆದೆರಡು ದಿನ ಸುರಿದ ಭಾರೀ ಮಳೆಗೆ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟಏರಿದ್ದು, ನದಿತೀರದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ದ.ಕನ್ನಡ, ಉಡುಪಿ, ಬೀದರ್‌ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಶಾಲೆಗಳಿಗೆ ಗುರುವಾರ ರಜೆ ನೀಡಲಾಗಿದೆ.

ಸತತ ಮಳೆಗೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಡಿಎಂ ಕುರ್ಕೆಯಲ್ಲಿ ಮನೆ ಕುಸಿದು ಗೌರಮ್ಮ (62) ಎಂಬುವರು ಮೃತಪಟ್ಟಿದ್ದಾರೆ. ಇವರ ಪತಿ ನಟರಾಜ್‌ ಎಂಬುವರಿಗೆ ಗಾಯಗಳಾಗಿವೆ. ಮೃತರ ಕುಟುಂಬಕ್ಕೆ ಸರ್ಕಾರದ ವತಿಯಿಂದ 5 ಲಕ್ಷ ರು.ಗಳ ಚೆಕ್‌ನ್ನು ಶಾಸಕ ಕೆ. ಎಂ ಶಿವಲಿಂಗೇಗೌಡ ವಿತರಿಸಿದರು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹೊಸಸಿದ್ದರಹಳ್ಳಿಯಲ್ಲಿ ರೇವಮ್ಮ (63) ಎಂಬುವರು ಹಳ್ಳ ದಾಟುವಾಗ ಬಿದ್ದು, ನೀರಲ್ಲಿ ಕೊಚ್ಚಿಹೋಗಿದ್ದಾರೆ. ಈ ಮಧ್ಯೆ, ನಾಲ್ಕು ದಿನಗಳ ಹಿಂದೆ ಮನೆ ಕುಸಿದು ಗಾಯಗೊಂಡಿದ್ದ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಬುಡರಕಟ್ಟೆಯ ಈರಮ್ಮ ಪತ್ತೆಮ್ಮನವರ (95), ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಅಸುನೀಗಿದ್ದಾರೆ.

ಸಂತ್ರಸ್ತರಿಗೆ ಕೂಡಲೇ ಸ್ಪಂದಿಸಿ, ಪರಿ​ಹಾ​ರ ಕಲ್ಪಿ​ಸಿ: ಸಚಿವ ಮಧು ಬಂಗಾರಪ್ಪ

ಕಬಿನಿ ಭರ್ತಿ:

ಕಬಿನಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಕಪಿಲಾ ನದಿಗೆ 25 ಸಾವಿರಕ್ಕೂ ಹೆಚ್ಚು ಕ್ಯುಸೆಕ್‌ ನೀರನ್ನು ಹೊರಬಿಟ್ಟಿದ್ದು, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಸ್ನಾನಘಟ್ಟಸಂಪೂರ್ಣವಾಗಿ ಮುಳುಗಡೆಯಾಗಿದೆ. ಜೊತೆಗೆ, ಐತಿಹಾಸಿಕ ಹದಿನಾರು ಕಾಲು ಮಂಟಪ ಭಾಗಶಃ ಮುಳುಗಡೆಯಾಗಿದೆ. ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಮಳೆ ಅಬ್ಬರಿಸುತ್ತಿದ್ದು, ಕೃಷ್ಣಾ ನದಿಯಲ್ಲಿ ನೀರಿನ ಮಟ್ಟಏರುತ್ತಿದೆ. ಇದರಿಂದಾಗಿ ಆಲಮಟ್ಟಿಜಲಾಶಯದ ಒಳಹರಿವು 1.75 ಲಕ್ಷ ಕ್ಯುಸೆಕ್‌ ದಾಟಿದ್ದು, ಜಲಾಶಯ ಭರ್ತಿಯಾಗಲು ಕೇವಲ 2 ಮೀಟರ್‌ ಬಾಕಿಯಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದ 20 ಗೇಟ್‌ಗಳು ಹಾಗೂ ಆಲಮಟ್ಟಿವಿದ್ಯುತ್‌ ಉತ್ಪಾದನಾ ಕೇಂದ್ರ ಸೇರಿ 1.25 ಲಕ್ಷ ಕ್ಯುಸೆಕ್‌ ನೀರನ್ನು ನದಿ ತಳಪಾತ್ರಕ್ಕೆ ಹರಿಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ 21 ಸೇತುವೆಗಳು ಜಲಾವೃತಗೊಂಡಿವೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ದತ್ತ ಮಂದಿರ ಜಲಾವೃತಗೊಂಡಿದೆ.

ಮಳೆ ಹಾಗೂ ಪ್ರವಾಹದ ಸಂದರ್ಭದಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಿ: ಸಿದ್ದರಾಮಯ್ಯ

ಶಿವಮೊಗ್ಗದಲ್ಲಿ ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಭದ್ರಾ ಜಲಾಶಯ ಶೇ.50ರಷ್ಟುಭರ್ತಿಯಾಗಿದೆ. ಬೀದರ್‌ ಜಿಲ್ಲೆಯ ಕಾರಂಜಾ ಜಲಾಶಯ ಶೇ.90ರಷ್ಟುಭರ್ತಿಯಾಗಿದೆ. ಯಾದಗಿರಿ ಜಿಲ್ಲೆಯ ಭೀಮಾ ನದಿ ತೀರದ ದೇವಾಲಯಗಳು ಜಲಾವೃತಗೊಂಡಿವೆ. ಕೊಡಗಿನ ಹಾರಂಗಿ ಜಲಾಶಯ ಕೂಡ ಬಹುತೇಕ ಭರ್ತಿಯಾಗಿದ್ದು, ನಾಲ್ಕು ಗೇಟ್‌ಗಳ ಮೂಲಕ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಹೀಗಾಗಿ, ಕೂಡುಮಂಗಳೂರು, ಕೂಡಿಗೆ ಮತ್ತು ಕುಶಾಲನಗರದ ಕೆಲವೆಡೆ ಪ್ರವಾಹದ ಭೀತಿ ಎದುರಾಗಿದೆ.

ಆಗುಂಬೆ ಘಾಟ್‌ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೆ.15ರ ತನಕ ಘಾಟ್‌ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ತಾಲೂಕಿನ ಕ್ಯಾಸಲ್‌ರಾಕ್‌ ಸಮೀಪ ಭೂಕುಸಿತ ಉಂಟಾಗಿದ್ದು, ಹುಬ್ಬಳ್ಳಿ-ಗೋವಾ ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದೆ. ಕರ್ನಾಟಕ-ಗೋವಾ ಗಡಿ ಭಾಗದ ಧೂದ್‌ಸಾಗರ ಬಳಿ ಭೂಕುಸಿತವಾಗಿದ್ದು, ಗೋವಾ-ಹುಬ್ಬಳ್ಳಿ-ಬೆಳಗಾವಿ ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದೆ.