‘ಹಸಿರಾ’ಗಿದ್ದ 3 ಜಿಲ್ಲೆಗಳಿಗೀಗ ಕೊರೋನಾ ಕೆಸರು!
‘ಹಸಿರಾ’ಗಿದ್ದ 3 ಜಿಲ್ಲೆಗಳಿಗೀಗ ಕೊರೋನಾ ಕೆಸರು| ಹಾಸನ, ಕೋಲಾರ, ಯಾದಗಿರಿಯಲ್ಲಿ ಸೋಂಕು ದೃಢ| ಹಾಸನ, ಕೋಲಾರಗಳಲ್ಲಿ ತಲಾ 5, ಯಾದಗಿರಿಯಲ್ಲಿ 2 ಪ್ರಕರಣ ಪತ್ತೆ
ಬೆಂಗಳೂರು(ಮೇ.13): ರಾಜ್ಯದಲ್ಲಿ ಮೊದಲ ಕೊರೋನಾ ಸೋಂಕು ಕಾಣಿಸಿಕೊಂಡ ಎರಡು ತಿಂಗಳ ಬಳಿಕವೂ ಗ್ರೀನ್ ಝೋನ್‌ನಲ್ಲೇ ಸುರಕ್ಷಿತವಾಗಿದ್ದ ಹಾಸನ, ಕೋಲಾರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಂಗಳವಾರ ಮೊದಲ ಬಾರಿಗೆ ಆಘಾತ ಎದುರಾಗಿದೆ. ಹಾಸನ ಮತ್ತು ಕೋಲಾರ ಜಿಲ್ಲೆಗಳಲ್ಲಿ ತಲಾ ಐವರಿಗೆ, ಯಾದಗಿರಿ ಜಿಲ್ಲೆಯಲ್ಲಿ ಇಬ್ಬರಿಗೆ ಸೋಂಕು ತಗಲಿರುವುದು ದೃಢಪಟ್ಟಿದ್ದು ಇವರಲ್ಲಿ ಹೆಚ್ಚಿನವರು ಹೊರ ರಾಜ್ಯಗಳಿಂದಲೇ ಹಿಂದಿರುಗಿರುವವರು ಎಂಬುದು ಆತಂಕಕ್ಕೆ ಕಾರಣವಾಗಿದೆ.
ಹಾಸನಕ್ಕೆ ‘ಮಹಾ’ ಆಘಾತ:
ಮೇ 10ರಂದು ಬಾಡಿಗೆಯ ಎರಡು ಕಾರಿನಲ್ಲಿ ಮಹಾರಾಷ್ಟ್ರದಿಂದ ಬಂದ ಒಂದೇ ಕುಟುಂಬದ ನಾಲ್ಕು ಮಂದಿ, ಜೊತೆಗೆ ಮತ್ತೊರ್ವನಿಗೂ ಸೋಂಕು ತಗಲಿದೆ. ಸೋಂಕಿತರಾಗಿರುವ 36 ವರ್ಷದ ಪುರುಷ(ಪಿ-900), 27 ವರ್ಷದ ಮಹಿಳೆ(ಪಿ-901), 7 ವರ್ಷದ ಬಾಲಕಿ(ಪಿ-902), 45 ವರ್ಷದ ಪುರುಷ(903) ಮತ್ತು ನಾಲ್ಕು ವರ್ಷದ ಮಗು(ಪಿ-904)ವನ್ನು ಹಾಸನದ ಕೋವಿಡ್ 19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಮುನ್ನೆಚ್ಚರಿಕಾ ಕ್ರಮವಾಗಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲಿನ ಚೆಕ್‌ಫೋಸ್ಟ್‌ಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಮತಿಘಟ್ಟಗ್ರಾಮದ ಸೋಂಕಿತನಿಗೆ ಹಳೇಬೆಳಗೊಳ ಗ್ರಾಮದಲ್ಲಿ ಸಂಪರ್ಕವಿದ್ದ ಕಾರಣ ಆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಿಗೆ ಮಣ್ಣು ಸುರಿದು ಸೀಲ್‌ಡೌನ್ ಮಾಡಲಾಗಿದೆ.
ರಾಜ್ಯದಲ್ಲಿ ನಿನ್ನೆ ದಾಖಲೆಯ 63 ಕೇಸು: ಕೊರೋನಾ ಮುಕ್ತ ಜಿಲ್ಲೆ 5 ಮಾತ್ರ!
ಒಡಿಶಾ, ಚೆನ್ನೈ ಹೊಡೆತ:
ಇದೇವೇಳೆ ಕೋಲಾರದ ಮುಳಬಾಗಿಲಿನಿಂದ ಒಡಿಶಾಗೆ ತರಕಾರಿ ಸಾಗಿಸುವ ಲಾರಿಗಳಲ್ಲಿ ಚಾಲಕರಾಗಿರುವ ಬೆಳಗಾನಹಳ್ಳಿ ಗ್ರಾಮದ 27 ವರ್ಷದ(ಪಿ-909), 21 ವರ್ಷದ(ಪಿ-910) ಮತ್ತು ಚೆನ್ನೈಗೆ ತರಕಾರಿ ಸಾಗಿಸುವ ಬೈರಸಂದ್ರ ಗ್ರಾಮದ 22 ವರ್ಷದ(ಪಿ-908) ಚಾಲಕರಿಗೆ ಕೊರೋನಾ ಸೋಂಕು ತಗಲಿರುವುದು ದೃಢಪಟ್ಟಿದೆ. ಜೊತೆಗೆ ಬೀದರ್‌ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಲಾಕ್‌ಡೌನ್ ವೇಳೆ ಸ್ವಗ್ರಾಮಕ್ಕೆ ಹಿಂದುರುಗಿದ್ದ ವಿ.ಹೊಸಹಳ್ಳಿ ಗ್ರಾಮದ 22 ವರ್ಷದ ವಿದ್ಯಾರ್ಥಿನಿ(ಪಿ-906) ಮತ್ತು ಬೆಂಗಳೂರಿನ ಜೆ.ಪಿ.ನಗರದಿಂದ ಮೇ 7ರಂದು ಗ್ರಾಮಕ್ಕೆ ವಾಪಸಾಗಿದ್ದ 70 ವರ್ಷದ ಮಹಿಳೆ(ಪಿ-907) ಅವರಿಗೆ ಸೋಂಕು ತಗಲಿದೆ. ಐವರಿಗೂ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದ್ದು ಈ ಗ್ರಾಮಗಳ ಸುತ್ತಲೂ ಬಿಗಿ ಪೋಲಿಸ್ ಕಾವಲು ಹಾಕಲಾಗಿದೆ.
ಜಿಲೇಬಿ ವ್ಯಾಪಾರಿಗೆ ಕೊರೋನಾ ಕಹಿ!
ಗುಜರಾತಿನ ಅಹ್ಮದಾಬಾದಿನಿಂದ ಮಾ.9 ರಂದು ಜಿಲ್ಲೆಯ ಸುರಪುರಕ್ಕೆ ವಾಪಸ್ಸಾಗಿದ್ದ ದಂಪತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುಟುಂಬ ಸುರಪುರದಲ್ಲಿ ಜಿಲೇಬಿ, ಭಜಿ ವ್ಯಾಪಾರ ನಡೆಸುತ್ತಿದ್ದು, 38 ವರ್ಷದ ಪತಿ, 33 ವರ್ಷದ ಪತ್ನಿ, 20 ವರ್ಷದ ಪುತ್ರ ಮಾ.21ರಂದು ಗುಜರಾತಿನ ಅಲ್ಲಾ ನಗರಕ್ಕೆ ಛತ್ರಿ(ಕೊಡೆ) ಖರೀದಿಗೆಂದು ಹೋಗಿದ್ದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಲ್ಲಿನ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಅವರು ಮೇ 6 ರಂದು ಲಾರಿಯೊಂದರಲ್ಲಿ ಅಹ್ಮದಾಬಾದ್‌ನಿಂದ ಹೊರಟು 9ರಂದು ಬಾಗಲಕೋಟೆ ಜಿಲ್ಲೆ ಹುನಗುಂದವರೆಗೆ ಆಗಮಿಸಿ ಬಳಿಕ ಬಾಡಿಗೆ ಕಾರಿನಲ್ಲಿ ಸುರಪುರ ತಲುಪಿದ್ದಾರೆ. ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಜಿಲ್ಲೆಯಲ್ಲಿ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಕೊರೋನಾ ನಿವಾರಣೆಗೆ, 4 ಆಯುರ್ವೇದ ಔಷಧಗಳ ಕ್ಲಿನಿಕಲ್ ಪ್ರಯೋಗ!
ಮಾಹಿತಿ ಪಡೆದ ದೇವೇಗೌಡರು
ಹಾಸನಕ್ಕೆ ಕೊರೋನಾ ವಕ್ಕರಿಸಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಫೋನ್ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಜಿಲ್ಲೆಗೆ ಕೊರೋನಾ ಬಂದಿರುವ ಕಾರಣ ಕೂಡಲೇ ಜಿಲ್ಲೆಯ ಶಾಸಕರು ಮತ್ತು ಸಂಸದರ ಸಭೆ ಕರೆದು ಕಠಿಣ ಕ್ರಮ ಕೈಗೊಳ್ಳಿ ಎಂದು ಗೌಡರು ಸೂಚನೆ ನೀಡಿದ್ದಾರೆ. ಜೊತೆಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾಹಿತಿ ಸಂಗ್ರಹಿಸಿ ಸಲಹೆ ನೀಡಿದ್ದಾರೆ.