ಬೆಂಗಳೂರು, (ಸೆ.09): ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಮತ್ತಿತರೆ ಮೂಲಭೂತ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ರಾಜಧಾನಿ ಬೆಂಗಳೂರು ನಗರಕ್ಕೆ ಪ್ರತ್ಯೇಕ ಕಾಯ್ದೆಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ಸರಕಾರ ಹೆಜ್ಜೆಗಳನ್ನಿಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲ್ಲರಿಗೂ ಗೊತ್ತಿರುವಂತೆ ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಇದು ಇತರೆ ನಗರಗಳಂತೆ ಅಲ್ಲ. ದಿನೇದಿನೆ ರಾಜ್ಯದ ಮೂಲೆಮೂಲೆಗಳಿಂದ, ಇತರೆ ರಾಜ್ಯಗಳಿಂದ ಇಲ್ಲಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಪ್ರತ್ಯೇಕ ಕಾಯ್ದೆ ಅಗತ್ಯವಾಗಿದೆ. ಈಗಾಗಲೇ ಅದಕ್ಕೆ ಸಂಬಂಧಿಸಿದ ಕೆಎಂಸಿ ಕಾಯ್ದೆ ವ್ಯಾಪ್ತಿಯಲ್ಲಿ ನಗರವನ್ನು ನಿರ್ವಹಿಸಲು ಸಾಧ್ಯವಿಲ್ಲ. ಈಗಾಗಲೇ ಮಸೂದೆಯನ್ನು ಮಂಡಿಸಲಾಗಿದ್ದು, ಅದು ಜಂಟಿ ಸದನ ಸಮಿತಿ ಪರಿಶೀಲನೆಯಲ್ಲಿದೆ. ಸದನದ ಒಪ್ಪಿಗೆ ಪಡೆದ ನಂತರ ಅದನ್ನು ಕಾಯ್ದೆಯಾಗಿ ಜಾರಿ ಮಾಡಲಾಗುವುದು ಎಂದರು.

ಬೆಂಗಳೂರಿನ 7 ರಸ್ತೆಗಳಲ್ಲಿ ಶೀಘ್ರ ಸ್ಮಾರ್ಟ್‌ ಪಾರ್ಕಿಂಗ್‌: ಮೇಯರ್‌ ಗೌತಮ್‌ ಕುಮಾರ್‌

ಬೆಂಗಳೂರಿಗೆ ಪಕ್ಕಾ ಪ್ಲ್ಯಾನ್‌ ಬೇಕು:
ಬೆಂಗಳೂರು ದೇಶದಲ್ಲಿಯೇ ಅತಿದೊಡ್ಡ ಉದ್ಯೋಗ ತಾಣವೂ ಆಗುತ್ತಿದೆ. ಹೀಗಾಗಿ ನಗರಕ್ಕೆ ಅತ್ಯುತ್ತಮ ಪ್ಲ್ಯಾನಿಂಗ್‌ ಬೇಕು, ಉತ್ತಮ ಸಹಕಾರ ಬೇಕು ಹಾಗೂ ಯೋಜನೆಗಳನ್ನು ಜಾರಿ ಮಾಡಲು ಅತ್ಯುತ್ತಮವಾದ ವ್ಯವಸ್ಥೆ ಬೇಕು. ಇವೆಲ್ಲ ಹಿನ್ನೆಲೆಯಲ್ಲಿ ನಗರಕ್ಕೆ ಪ್ರತ್ಯೇಕ ಕಾಯ್ದೆ ತರಲು ಸರಕಾರ ಮುಂದಾಗಿದೆ ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.

ಈಗಾಗಲೇ ಈ ಬಗ್ಗೆ ಬೆಂಗಳೂರು ಎಲ್ಲ ಜನ ಪ್ರತಿನಿಧಿಗಳ ಜತೆ ವ್ಯಾಪಕ ಸಮಾಲೋಚನೆ ನಡೆಸಲಾಗಿದೆ. ಹೊಸ ಕಾಯ್ದೆಗೆ ಎಲ್ಲರ ಬೆಂಬಲವೂ ಬೇಕಿದೆ ಎಂದು ಅವರು ಹೇಳಿದರು. ಉಳಿದಂತೆ ಬಿಬಿಎಂಪಿ ಚುನಾವಣೆ ಬಗ್ಗೆ ಸರಕಾರದ ಪಾತ್ರವೇನೂ ಇಲ್ಲ. ಚುನಾವಣೆ ಆಯೋಗ ತನ್ನ ಕೆಲಸವನ್ನು ತಾನು ಮಾಡಿಕೊಂಡು ಹೋಗುತ್ತಿದೆ. ಅದಕ್ಕೆ ಬೇಕಾದ ಸೌಕರ್ಯಗಳನ್ನಷ್ಟೇ ಸರಕಾರ ಮಾಡಿಕೊಡುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ರಾಗಿಣಿ ಬಿಜೆಪಿ ಸದಸ್ಯೆ ಅಲ್ಲ:
ಮಾದಕ ವಸ್ತು ಹಗರಣಕ್ಕೆ ಸಿಲುಕಿ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ಅವರು ಬಿಜೆಪಿ ಸದಸ್ಯೆ ಅಲ್ಲ. ಹೀಗಾಗಿ ಅವರನ್ನು ಪಕ್ಷದಿಂದ ಅಮಾನತು ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಇದು ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಡ್ರಗ್ಸ್‌ನ ಮೂಲ ಯಾವುದು? ಅದು ಎಲ್ಲಿಂದ ಬರುತ್ತಿದೆ? ಯಾರು ಯಾರು ಬಳಕೆ ಮಾಡುತ್ತಿದ್ದಾರೆ? ಎಂಬ ಅಂಶಗಳ ಬಗ್ಗೆ ಪೊಲೀಸರು ಆಳವಾದ ತನಿಖೆ ಮಾಡುತ್ತಿದ್ದಾರೆ. ಆದಷ್ಟು ಬೇಗ ತನಿಖೆಯನ್ನು ಪೂರ್ಣಗೊಳಿಸಿ ಈ ಪೀಡೆಗೆ ಇತಿಶ್ರೀ ಹಾಡಲಾಗುವುದು. ಇಲ್ಲದಿದ್ದರೆ ನಮ್ಮ ಪ್ರತಿಭಾವಂತ ಯುವಜನತೆ ಮಾದಕ ವಸ್ತುಗಳ ದಾಸ್ಯಕ್ಕೆ ಸಿಲಿಕಿ ತಮ್ಮ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆಂದು ಉಪ ಮುಖ್ಯಮಂತ್ರಿ ಹೇಳಿದರು.

ರಾಗಿಣಿ ಅವರು ಬಿಜೆಪಿ ಪರವಾಗಿ ಕೆ.ಆರ್.‌ ಪೇಟೆ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದು ಹೌದು. ಹಾಗಂತ ಅವರು ನಮ್ಮ ಪಕ್ಷದ ಸದಸ್ಯೆಯಂತೂ ಅಲ್ಲ. ಚುನಾವಣೆ ಬಂದಾಗ ನಟ ನಟಿಯರು ವಿವಿಧ ಪಕ್ಷಗಳ ಪರವಾಗಿ ಪ್ರಚಾರ ಮಾಡುವುದು ಸಾಮಾನ್ಯ. ರಾಗಿಣಿ ಪಕ್ಷದ ಪರ ಪ್ರಚಾರ ಮಾಡಿದ್ದಾರೆ ಅಂದ ಮಾತ್ರಕ್ಕೆ ಅವರು ಮಾಡಿದ್ದೆಲ್ಲವನ್ನೂ ಸರಿ ಎನ್ನಲಾಗುತ್ತದೆಯೇ? ಯಾರೇ ಮಾಡಿದರೂ ತಪ್ಪು ತಪ್ಪೇ ಎಂದು ಡಿಸಿಎಂ ಸ್ಪಷ್ಟವಾಗಿ ತಿಳಿಸಿದರು.

ಕಾಲೇಜುಗಳಲ್ಲಿ ಕಟ್ಟೆಚ್ಚರ:
ಉನ್ನತ ಶಿಕ್ಷಣ ಸಂಸ್ಥೆಗಳು ಅದರಲ್ಲೂ ಎಂಜಿನೀಯರಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ವ್ಯಸನ ಇದೆ ಎಂದು ಕೆಲವರು ಹೇಳುತ್ತಿದ್ದಾರೆ. ಈಗಾಗಲೇ ಈ ಬಗ್ಗೆ ಸರಕಾರ ಕಠಿಣ ಮುನ್ನೆಚ್ಚರಿಕೆ ವಹಿಸಿದೆ. ಒಂದು ವೇಳೆ ಎಲ್ಲಾದರೂ ಅಂಥದ್ದು ಕಂಡು ಬಂದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.