Asianet Suvarna News Asianet Suvarna News

ಡಿಕೆಶಿ ನಿವಾಸಕ್ಕೆ ಬಿಎಸ್‌ವೈ: ಊಹಾಪೋಹಗಳಾಚೆಯ ಸತ್ಯ!

ಬುಧವಾರದಂದು ಸಂಸದರಾದ ಬಿ.ವೈ.ರಾಘವೇಂದ್ರ, ಪ್ರಭಾಕರ್‌ ಕೋರೆ, ಶಾಸಕ ಹರತಾಳು ಹಾಲಪ್ಪ ಮತ್ತಿತರರೊಂದಿಗೆ ಯಡಿಯೂರಪ್ಪರವರು ಶಿವಾನಂದ ವೃತ್ತದ ಬಳಿಯ ಸಚಿವ ಶಿವಕುಮಾರ್‌ ಅವರ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ್ದ ವಿಚಾರ ಭಾರೀ ಸಂಚಲನ ಮೂಡಿಸಿತ್ತು. ರಾಜಕೀಯ ವಲಯದಲ್ಲೂ ಇದು ಹಲವಾರು ಊಹಾಪೋಹಗಳನ್ನು ಹುಟ್ಟು ಹಾಕಿತ್ತು. ಆದರೆ ಈ ಊಹಾಪೋಹಗಳ ಆಚೆಗಿನ ಸತ್ಯ ಏನು? ಬಿಎಸ್‌ವೈ ಭೇಟಿ ಮಾಡಿ ಏನು ಮಾತುಕತೆ ನಡೆಸಿದರು? ಈ ಕುರಿತಾದ ವಿವರ ಇಲ್ಲಿದೆ.

this is what bs yeddyurappa discussed with dk shivakumar
Author
Bangalore, First Published Nov 29, 2018, 10:26 AM IST

ಬೆಂಗಳೂರು[ನ.29]: ಮಹತ್ವದ ಬೆಳವಣಿಗೆಯೊಂದರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿನ ವಿವಿಧ ನೀರಾವರಿ ಯೋಜನೆಗಳ ಕುರಿತಂತೆ ಚರ್ಚೆ ನಡೆಸುವ ಸಂಬಂಧ ವಿಧಾನಸಭೆಯ ಪ್ರತಿಪಕ್ಷದ ನಾಯಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರ ನಿವಾಸಕ್ಕೇ ಭೇಟಿ ನೀಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಮಿಂಚಿನ ಸಂಚಲನಕ್ಕೆ ಕಾರಣರಾದರು.

ಈ ಭೇಟಿ ಜಿಲ್ಲೆಯ ನೀರಾವರಿ ವಿಚಾರಕ್ಕೆ ಸೀಮಿತವಾಗಿದ್ದರೂ ಸಹಜವಾಗಿಯೇ ರಾಜಕಾರಣದೊಂದಿಗೆ ಥಳಕು ಹಾಕಿಕೊಂಡಿತು. ನಾನಾ ರೀತಿಯ ವದಂತಿಗಳಿಗೂ ಕಾರಣವಾಯಿತು.

ಬುಧವಾರ ನಗರದ ಶಿವಾನಂದ ವೃತ್ತದ ಬಳಿಯ ಸಚಿವ ಶಿವಕುಮಾರ್‌ ಅವರ ಸರ್ಕಾರಿ ನಿವಾಸಕ್ಕೆ ಸಂಸದರಾದ ಬಿ.ವೈ.ರಾಘವೇಂದ್ರ, ಪ್ರಭಾಕರ್‌ ಕೋರೆ, ಶಾಸಕ ಹರತಾಳು ಹಾಲಪ್ಪ ಮತ್ತಿತರರೊಂದಿಗೆ ಭೇಟಿ ನೀಡಿದ ಯಡಿಯೂರಪ್ಪ, ಶೀಘ್ರವಾಗಿ ನೀರಾವರಿ ಯೋಜನೆಗಳ ಜಾರಿಗೊಳಿಸುವಂತೆ ಕೋರಿ ಮನವಿ ಸಲ್ಲಿಸಿದರು.

ಶಿಕಾರಿಪುರ ತಾಲೂಕಿನ ಉಡುಗಣಿ, ತಾಳಗುಂದ, ಹೊಸೂರು ಹೋಬಳಿಗಳ ಕೆರೆಗಳಿಗೆ ಹಿರೇಕೆರೂರು ತಾಲೂಕಿನ ಪುರದಕೆರೆ ಗ್ರಾಮದ ಬಳಿ ಹರಿಯುತ್ತಿರುವ ತುಂಗಭದ್ರಾ ನದಿಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸಬೇಕು. ಶಿಕಾರಿಪುರ ತಾಲೂಕಿನ ಕಲ್ಲುವಡ್ಡು ಹಳ್ಳಕ್ಕೆ ಹೊಸಕೆರೆ ನಿರ್ಮಾಣ ಮಾಡುವ ಯೋಜನೆ, ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ಕೆರೆಗಳಿಗೆ ಹೊನ್ನಾಳಿ ತಾಲೂಕಿನ ಚೀಲೂರು ಗ್ರಾಮದ ಬಳಿ ಹರಿಯುತ್ತಿರುವ ತುಂಬಾಭದ್ರ ನದಿಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸುವಂತೆ ಮನವಿಯಲ್ಲಿ ಕೋರಿದರು.

ಸೊರಬ ತಾಲೂಕಿನ ಮೂಡು ಏತ ನೀರಾವರಿ, ಮೂಗೂರು ಏತ ನೀರಾವರಿ ಯೋಜನೆ, ದಂಡಾವತಿ ಜಲಾಶಯ ಮತ್ತು ನಾಲೆಗಳ ನಿರ್ಮಾಣ ಹಾಗೂ ಸಮಗ್ರ ಯೋಜನೆ ಜಾರಿಗೊಳಿಸಬೇಕು. ಶಿವಮೊಗ್ಗ ಗ್ರಾಮಾಂತರದ ಹೊಸಳ್ಳಿ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಉಡುಗಣಿ, ತಾಳಗುಂದ, ಹೊಸೂರು ಹೋಬಳಿಗಳ ಕೆರೆಗಳಿಗೆ ಹಿರೇಕೆರೂರು ತಾಲೂಕಿನ ಪುರದಕೆರೆ ಗ್ರಾಮದ ಬಳಿ ಹರಿಯುತ್ತಿರುವ ತುಂಗಭದ್ರಾ ನದಿಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸುವ ಯೋಜನೆ ಸಮೀಕ್ಷೆ ಕಾರ್ಯಕ್ಕೆ 85 ಲಕ್ಷ ರು. ಅನುದಾನ ಮಂಜೂರು ಮಾಡಲಾಗಿದೆ. ಸಮೀಕ್ಷೆ ಕಾರ್ಯವು ಪ್ರಗತಿಯಲ್ಲಿದೆ. ಯೋಜನಾ ವರದಿಯನ್ನು ಅದಷ್ಟುಬೇಗ ತಯಾರಿಸಿ ಕಾಮಗಾರಿ ಕೈಗೆತ್ತಿಕೈಗೊಳ್ಳಲು ಆದೇಶ ಹೊರಡಿಸಬೇಕು. ಕಲ್ಲವಡ್ಡು ಹಳ್ಳಕ್ಕೆ ಹೊಸಕೆರೆ ನಿರ್ಮಾಣ ಮಾಡುವ ಯೋಜನೆಗೆ ಕಸಬಾ ಹೋಬಳಿಯ ಸುಮಾರು 14 ಗ್ರಾಮಗಳ ವ್ಯಾಪ್ತಿಯ 1959 ಹೆಕ್ಟೇರ್‌ ಕೃಷಿ ಭೂಮಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬಹುದು. ಯೋಜನೆಗೆ 20.42 ಕೋಟಿ ರು. ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಆದರೆ, ಈವರೆಗೆ ಕಾಮಗಾರಿ ಅನುಷ್ಠಾನಗೊಳಿಸಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು. ಕುಡಿಯುವ ನೀರಿನ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಚೀಲೂರು ಗ್ರಾಮದ ಬಳಿಯ ತುಂಗಭದ್ರಾ ನದಿಯಿಂದ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಯೋಜನೆಯನ್ನು ಮಂಜೂರು ಮಾಡಬೇಕು. ಇದರಿಂದ ಕೃಷಿಕರಿಗೆ, ಜನರಿಗೆ ಅನುಕೂಲವಾಗುವ ಕಾರಣ ಕ್ರಮ ಕೈಗೊಳ್ಳಬೇಕು ಎಂದು ಶಿವಕುಮಾರ್‌ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಸೊರಬ ತಾಲೂಕಿನ ಮೂಡಿ ಗ್ರಾಮ ಬಳಿಯ ವರದಾ ನದಿಯಿಂದ ಏತ ನೀರಾವರಿ ಮೂಲಕ ನೀರನ್ನು ತುಂಬಿಸಲು ಉದ್ದೇಶಿಸಲಾಗಿದೆ. ಯೋಜನೆ ಅನುಷ್ಠಾನಗೊಳಿಸಲು ಸಮೀಕ್ಷೆ ಕಾರ್ಯ ಮಾಡಲಾಗಿದ್ದು, 369 ಕೋಟಿ ರು.ಗಳ ಅಂದಾಜು ವೆಚ್ಚಕ್ಕೆ ಯೋಜನಾ ವರದಿಯನ್ನು ತಯಾರಿಸಲಾಗಿದ್ದು, ಯೋಜನೆಗೆ ತ್ವರಿತವಾಗಿ ಮಂಜೂರು ಮಾಡಬೇಕು. ಮೂಗೂರು ಏತನೀರಾವರಿ ಯೋಜನೆಯಿಂದ ಆನವಟ್ಟಹೋಬಳಿಯ ಸುಮಾರು ಒಂಭತ್ತು ಸಾವಿರ ಕೃಷಿ ಭೂಮಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬಹುದು. ದಂಡಾವತಿ ಜಲಾಶಯ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ ಯೋಜನೆಯು ಬರುತ್ತಿರುವ ಕಾರಣ ಬದಲಿ ಯೋಜನೆ ಪರಿಗಣಿಸಲಾಗಿರುತ್ತದೆ. ಯೋಜನೆಯ ಯೋಜನಾ ವರದಿಯನ್ನು ತಯಾರಿಸಿ ತುರ್ತಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಆದೇಶಿಸಬೇಕು. ದಂಡಾವತಿ ಜಲಾಶಯ ಮತ್ತು ನಾಲೆಗಳ ನಿರ್ಮಾಣದಿಂದ ಸೊರಬ ತಾಲೂಕಿನ ಸುಮಾರು 8 ಸಾವಿರ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ. ಇದರ ಯೋಜನಾ ವರದಿಯನ್ನು ಮಾರ್ಪಡಿಸಿ ಅತಿ ತುರ್ತಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮ ವಹಿಸಬೇಕಾಗಿದೆ ಎಂದಿದ್ದಾರೆ.

61 ಕೆರೆಗಳಿಗೆ ಹೊಸಹಳ್ಳಿ ಹತ್ತಿರ ಹರಿಯುತ್ತಿರುವ ತುಂಗಾ ನದಿಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ನೀಡಿ ಅನುದಾನ ಒದಗಿಸಬೇಕು. ಇದರಿಂದ ಕುಂಸಿ, ಹಾರನಹಳ್ಳಿ ಹೋಬಳಿ ವ್ಯಾಪ್ತಿಯ 5-6 ಗ್ರಾಮ ಪಂಚಾಯಿತಿಗಳ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಲಭ್ಯವಾಗಲಿದೆ ಎಂದು ಮನವಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

Follow Us:
Download App:
  • android
  • ios