ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಮತ್ತು ಆ ವಿಷಯಕ್ಕೆ ಪೂರ್ಣವಿರಾಮ ಇಡಲಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಭೇಟಿಯ ನಂತರ ಈ ಚರ್ಚೆ ಮುಗಿದಿದ್ದು, ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ ಎಂದರು. 

ಶಿರಸಿ(ಡಿ.2): ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಆ ವಿಷಯಕ್ಕೆ ಪೂರ್ಣವಿರಾಮ ಇಡಲಾಗಿದ್ದು, ಸಿಎಂ ಬದಲಾವಣೆ ಕುರಿತು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ .ದೇಶಪಾಂಡೆ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಉಪಹಾರ ಸೇವನೆ ಜತೆ ಹೊಟ್ಟೆ ತುಂಬಾ ಮಾತುಕತೆ ಮಾಡಿದ್ದಾರೆ. ಸಿಎಂ ಬದಲಾವಣೆ ವಿಷಯಕ್ಕೆ ಪೂರ್ಣವಿರಾಮ ಇಡಲಾಗಿದೆ ಎಂದರು.

ಅಭಿವೃದ್ಧಿ ಆಗುತ್ತಿಲ್ಲ ಎಂಬುದು ಸತ್ಯಕ್ಕೆ ದೂರ:

ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತಿಲ್ಲ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಅಭಿವೃದ್ಧಿಯಾಗುತ್ತಿದ್ದು, ಜನರ ಅಪೇಕ್ಷೆ ಇನ್ನೂ ಹೆಚ್ಚಿರಬಹುದು. ಎಲ್ಲ ಶಾಸಕರಿಗೂ ಅನುದಾನ ನೀಡಲಾಗಿದ್ದು, ಸಿದ್ದರಾಮಯ್ಯ ನಾಯಕತ್ವದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನೀಡುವ ಪ್ರಯತ್ನ ಮಾಡಿದೆ. ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಅಭಿವೃದ್ಧಿ ಯೋಜನೆ ಕುರಿತು ಚರ್ಚೆಗೆ ಪ್ರಾಧಾನ್ಯತೆ ನೀಡಬೇಕಾಗುತ್ತದೆ ಎಂದರು.

ಕೇಂದ್ರದಿಂದ ಇಡಿ ದುರ್ಬಳಕೆ:

ಕೇಂದ್ರ ಸರ್ಕಾರವು ಇ.ಡಿ. ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ನ್ಯಾಶನಲ್ ಹೆರಾಲ್ಡ್ ಕೇಸ್‌ನಲ್ಲಿ ಸೇಡಿನ ರಾಜಕಾರಣಕ್ಕೆ ಎಫ್ಐಆರ್ ದಾಖಲು ಮಾಡಿಸಿದೆ. ಸುಖಾಸುಮ್ಮನೆ ₹2 ಸಾವಿರ ಕೋಟಿ ರೂ. ಭ್ರಷ್ಟಾಚಾರವಾಗಿದೆ ಎಂದು ಕೆಳಮಟ್ಟದ ಆಪಾದನೆ ಮಾಡುತ್ತಿದ್ದಾರೆ.‌ ಇದನ್ನು ನಾನು ಖಂಡಿಸುತ್ತೇನೆ ಎಂದರು.