ರಕ್ತ ಸಂಬಂಧಿಗಳ ಸಂಬಂಧ ನಿರ್ಬಂಧಕ್ಕೆ ಕಾನೂನಿಲ್ಲ; ಹೈಕೋರ್ಟ್

  • ರಕ್ತ ಸಂಬಂಧಿಗಳ ಸಂಬಂಧ ನಿರ್ಬಂಧಕ್ಕೆ ಕಾನೂನಿಲ್ಲ
  • ಉದ್ಯೋಗದಾತ-ಉದ್ಯೋಗಿ’ ಸಂಬಂಧ ನಿರ್ಬಂಧಿಸಲು ಆಗದು: ಹೈಕೋರ್ಟ್
  • ಅಪಘಾತ ಕೇಸ್‌ನಲ್ಲಿ ವಿಮೆ ನೀಡಲು ಒಪ್ಪದ ವಿಮಾ ಕಂಪನಿ ಅರ್ಜಿ ವಜಾ
  • ಕೊಪ್ಪಳ ವ್ಯಕ್ತಿಗೆ ಕೂಡಲೇ ವಿಮಾ ಮೊತ್ತ ವಿತರಣೆಗೆ ಆದೇಶ
There is no law to restrict the relationship of blood relatives says High Court rav

ಬೆಂಗಳೂರು (ಅ.31) : ‘ಸಹೋದರನ ಒಡೆತನದ ಲಾರಿಯ ಚಾಲಕನಾಗಿದ್ದ ವ್ಯಕ್ತಿ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣದಲ್ಲಿ ಮೃತನ ಕುಟುಂಬದ ಸದಸ್ಯರಿಗೆ ಪರಿಹಾರ ನೀಡಲು ಅವಕಾಶವಿಲ್ಲ’ ಎಂಬ ವಿಮಾ ಕಂಪನಿಯ ವಾದ ಒಪ್ಪದ ಹೈಕೋರ್ಟ್, ‘ರಕ್ತ ಸಂಬಂಧಿಗಳ ನಡುವಿನ ಉದ್ಯೋಗದಾತ-ಉದ್ಯೋಗಿಯ ಸಂಬಂಧವನ್ನು ನಿರ್ಬಂಧಿಸುವ ಕಾನೂನು ಇಲ್ಲ’ ಎಂದು ಸ್ಪಷ್ಟಪಡಿಸಿದೆ. ಅಪಘಾತ ಪ್ರಕರಣವೊಂದರ ಮೃತಪಟ್ಟಲಾರಿ ಚಾಲಕನ ಕುಟುಂಬದವರಿಗೆ ಪರಿಹಾರ ನೀಡುವಂತೆ ಕಾರ್ಮಿಕರ ಪರಿಹಾರ ಆಯುಕ್ತರ ಆದೇಶ ರದ್ದು ಕೋರಿ ವಿಮಾ ಕಂಪನಿಯೊಂದು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

11 ಲಕ್ಷಕ್ಕೆ ಒಪ್ಪದ ವಿಮಾ ಕಂಪನಿ ಈಗ 44 ಲಕ್ಷ ಕೊಡಬೇಕು: ಹೈಕೋರ್ಟ್‌ ಆದೇಶ

ಪ್ರಕರಣದ ವಿವರ:

ಕೊಪ್ಪಳದ ನಿವಾಸಿ ಅಮ್ಜದ್‌ ಖಾನ್‌ ತಮ್ಮ ಸಹೋದರನ ಒಡೆತನದ ಲಾರಿಯಲ್ಲಿ ಚಾಲಕರಾಗಿ ಉದ್ಯೋಗ ಮಾಡುತ್ತಿದ್ದರು. 2008ರ ಜ.30ರಂದು ಕಂಪ್ಲಿಯಿಂದ ತುಮಕೂರಿಗೆ ಅಕ್ಕಿಮೂಟೆಗಳನ್ನು ಸಾಗಣೆ ಮಾಡುತ್ತಿದ್ದರು. ಎರಡನೇ ಚಾಲಕ ಪೌಲ್‌ರಾಜ್‌ ಲಾರಿಯನ್ನು ಚಲಾಯಿಸುತ್ತಿದ್ದರು. ಮರಿಯಮ್ಮನಹಳ್ಳಿ ಬೈಪಾಸ್‌ ಬಳಿ ಎದುರುಗಡೆಯಿಂದ ಬಂದ ಲಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಬ್ರೇಕ್‌ ಹಾಕಿದಾಗ ಕ್ಯಾಬಿನ್‌ನಲ್ಲಿದ್ದ ಅಮ್ಜದ್‌ ಖಾನ್‌ ಕೆಳಗೆ ಬಿದ್ದು ಸಾವನ್ನಪ್ಪಿದ್ದರು.

ಘಟನೆ ಸಂಬಂಧ ಪರಿಹಾರ ಕೋರಿ ಮೃತ ಅಮ್ಜದ್‌ ಖಾನ್‌ ಪತ್ನಿ ಮತ್ತು ಮಕ್ಕಳು ಕೊಪ್ಪಳ ಜಿಲ್ಲೆಯ ಕಾರ್ಮಿಕರ ಪರಿಹಾರ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ್ದ ಆಯುಕ್ತರು, ಮೃತನ ಕುಟುಂಬದವರಿಗೆ ಒಟ್ಟು 4,15,960 ರು. ಪರಿಹಾರ ನೀಡುವಂತೆ ವಿಮಾ ಕಂಪನಿಗೆ 2011ರ ಜು.21ರಂದು ಆದೇಶಿಸಿದ್ದರು. ಆ ಆದೇಶ ರದ್ದು ಕೋರಿ ವಿಮಾ ಕಂಪನಿ ಹೈಕೋರ್ಚ್‌ಗೆ ಮೇಲ್ಮನವಿ ಸಲ್ಲಿಸಿತ್ತು.

‘ಮೃತ ಅಮ್ಜದ್‌ ಖಾನ್‌ ತನ್ನ ಸಹೋದರನ ಲಾರಿಯ ಚಾಲಕನಾಗಿ ಉದ್ಯೋಗ ಮಾಡುತ್ತಿರುವುದರಿಂದ ರಕ್ತ ಸಂಬಂಧಿಗಳ ಉದ್ಯೋಗದಾತ-ಉದ್ಯೋಗಿಯ ಸಂಬಂಧ ಪರಿಗಣಿಸಲ್ಪಡುವುದಿಲ್ಲ. ಇನ್ನು ಲಾರಿಯ ಇಬ್ಬರು ಚಾಲಕರಿಗೆ ವಿಮಾ ಪಾಲಿಸಿ ಮಾಡಿರಲಿಲ್ಲ. ಎರಡನೇ ಚಾಲಕನಿಗೆ ರಿಸ್‌್ಕ ಕವರ್‌ ಇರಲಿಲ್ಲ ಹಾಗೂ ಹೆಚ್ಚುವರಿ ಪ್ರೀಮಿಯಂ ಪಾವತಿಸಿರಲಿಲ್ಲ. ಹಾಗಾಗಿ, ಮೃತನ ಚಾಲಕನಿಗೆ ಪರಿಹಾರ ಪ್ರಕಟಿಸಿದ ಮತ್ತು ಪರಿಹಾರ ಪಾವತಿ ಹೊಣೆಯನ್ನು ತನ್ನ ಮೇಲೆ ಹೊರಿಸಿದ ಕಾರ್ಮಿಕ ಆಯುಕ್ತರ ಆದೇಶ ಕಾನೂನು ಬಾಹಿರವಾಗಿದೆ’ ಎಂದು ವಿಮಾ ಕಂಪನಿ ವಾದಿಸಿತ್ತು.

ಆದೇಶವೇನು?:

‘ಅಮ್ಜದ್‌ ಖಾನ್‌ ತಮ್ಮ ಸಹೋದರನ ಒಡೆತನದ ಲಾರಿಯ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂಬ ಕಾರಣಕ್ಕೆ ಪರಿಹಾರ ನೀಡುವಂತಿಲ್ಲ ಎಂಬ ವಿಮಾ ಕಂಪನಿಯ ವಾದವನ್ನು ಒಪ್ಪಲಾಗದು. ರಕ್ತ ಸಂಬಂಧಿಗಳ ನಡುವೆ ಉದ್ಯೋಗದಾತ-ಉದ್ಯೋಗಿಯ ಸಂಬಂಧಕ್ಕೆ ಕಾನೂನಿನಲ್ಲಿ ಯಾವುದೇ ನಿರ್ಬಂಧವಿಲ್ಲ. ಅಪಘಾತ ನಡೆದ ದಿನದಂದು ಮೃತನು ಅಧಿಕೃತ ಚಾಲನಾ ಪರವಾನಗಿ ಹೊಂದಿದ್ದರು. ಹಾಗಾಗಿ, ಮೃತನು ಅಪಘಾತಕ್ಕೆ ಕಾರಣವಾದ ಲಾರಿಯ ಕಾರ್ಮಿಕನಾಗಿರಲಿಲ್ಲ ಎಂಬುದಾಗಿ ಹೇಳಲಾಗದು’ ಎಂದು ಹೈಕೋರ್ಚ್‌ ಅಭಿಪ್ರಾಯಪಟ್ಟಿದೆ.

ಅಪಘಾತದಲ್ಲಿ ಸಾಕು ಪ್ರಾಣಿ ಸಾವು ಐಪಿಸಿ ಅಪರಾಧವಲ್ಲ: ಹೈಕೋರ್ಟ್‌

‘ಇನ್ನು ಅಪಘಾತ ಸಂಭವಿಸಿದ ದಿನದಂದು ಲಾರಿಯ ವಿಮಾ ಪಾಲಿಸಿ ಜಾರಿಯಲ್ಲಿತ್ತು. ಎರಡನೇ ಚಾಲಕನಿಗೆ (ಹೆಚ್ಚುವರಿ ಚಾಲಕ) ಪ್ರೀಮಿಯಂ ಪಾವತಿಸಿರಲಿಲ್ಲ ಎಂಬುದಾಗಿ ವಿಮಾ ಕಂಪನಿ ವಾದಿಸುತ್ತಿದೆ. ಆದರೆ, ವಾಸ್ತವವಾಗಿ ಎರಡನೇ ಚಾಲಕ ಪರಿಹಾರ ಕೋರಿಲ್ಲ. ಅಮ್ಜದ್‌ ಖಾನ್‌ ಮೃತಪಟ್ಟು 2ು ಗಂಟೆಯೊಳಗೆ ದೂರು ದಾಖಲಾಗಿದೆ. ಇನ್ನು ಪ್ರಕರಣದ ದೋಷಾರೋಪ ಪಟ್ಟಿಯನ್ನು ಪ್ರಶ್ನಿಸಿಲ್ಲ’ ಎಂದು ತಿಳಿಸಿದ ಹೈಕೋರ್ಚ್‌, ವಿಮಾ ಕಂಪನಿಯ ಮೇಲ್ಮನವಿ ವಜಾಗೊಳಿಸಿದೆ. ಅಲ್ಲದೆ, ಠೇವಣಿಯಿಟ್ಟಿರುವ ಪರಿಹಾರ ಮೊತ್ತವನ್ನು ಕೂಡಲೇ ಮೃತನ ಕುಟುಂಬದವರಿಗೆ ವಿತರಣೆ ಮಾಡಬೇಕು ಎಂದು ಆದೇಶಿಸಿದೆ.

Latest Videos
Follow Us:
Download App:
  • android
  • ios