ಬೆಂಗಳೂರು(ಜು.01): ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರಲ್ಲಿ ಶೇ.80ರಷ್ಟುಮಂದಿ ವಯಸ್ಸಾದವರೇ ಆಗಿದ್ದಾರೆ. ಹಾಗಾಗಿ ಹೆಚ್ಚು ಕೋರೋನಾ ಅಪಾಯಕ್ಕೆ ತುತ್ತಾಗುವ ವರ್ಗದಲ್ಲಿ ವಯೋವೃದ್ಧರದ್ದೇ ಮೊದಲ ಸ್ಥಾನ. ರಾಜ್ಯದಲ್ಲಿ ಅಂತಹ ಇಳಿವಯಸ್ಸಿನವರ ಸಂಖ್ಯೆ ಬರೋಬ್ಬರಿ 61.50 ಲಕ್ಷ ಇದೆ.

ಈ ಹಿರಿಯ ನಾಗರಿಕರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದ ಅಗತ್ಯವಿದೆ ಎನ್ನುತ್ತಾರೆ ತಜ್ಞರು.

ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಡೆಸುತ್ತಿರುವ ಮನೆ ಮನೆ ಸಮೀಕ್ಷೆ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಈ ವರೆಗಿನ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 61,50,513 ಮಂದಿ 60 ವರ್ಷ ಮೇಲ್ಪಟ್ಟವರ ಪತ್ತೆಯಾಗಿದ್ದಾರೆ. ಇದರಲ್ಲಿ ಅತಿ ಹೆಚ್ಚು 7,48,536 ಮಂದಿ ಬೆಂಗಳೂರಿನಲ್ಲೇ ಇದ್ದಾರೆ.

ಸಮುದಾಯಕ್ಕೆ ಕೊರೋನಾ ಹರಡುವುದನ್ನು ತಡೆಯುವ ಉದ್ದೇಶದಿಂದ ನಡೆಸಲಾಗುತ್ತಿರುವ ಈ ಸಮೀಕ್ಷೆ ಜೂನ್‌ 28ಕ್ಕೆ ಶೇ.98.23ರಷ್ಟುಮನೆಗಳ ಸಮೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಈ ವರೆಗೆ ಕೊರೋನಾ ಸೋಂಕಿಗೆ ಒಳಗಾಗಿರುವ 15,200ಕ್ಕೂ ಹೆಚ್ಚು ಜನರಲ್ಲಿ 60 ವರ್ಷ ಮೇಲ್ಪಟ್ಟವರ ಸಂಖ್ಯೆ 1000ಕ್ಕಿಂತ ಹೆಚ್ಚಿದೆ. ಆದರೆ, ಕೋರೋನಾಗೆ ಬಲಿಯಾಗಿರುವ 246 ಮಂದಿಯಲ್ಲಿ ಸುಮಾರು 170 ಮಂದಿ (ಶೇ.70) ವಯೋವೃದ್ಧರೇ ಆಗಿದ್ದಾರೆ. ಹಾಗಾಗಿ ಮನೆಯಲ್ಲಿರುವ ವಯೋವೃದ್ಧರ ಬಗ್ಗೆ ಅದರಲ್ಲೂ ಬೇರೆ ಬೇರೆ ಕಾಯಿಲೆಗಳಿರುವವರ ಬಗ್ಗೆ ಕುಟುಂಬದವರು ವಿಶೇಷ ಎಚ್ಚರಿಕೆ ವಹಿಸಬೇಕು. ಅವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರದಂತೆ, ಹೊರಗೆ ಹೋಗಿ ಬಂದ ಇತರೆ ಸದಸ್ಯರು ಅವರ ಸಂಪರ್ಕಕ್ಕೆ ಹೋಗದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಒಳ್ಳೆಯದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಆರೋಗ್ಯ ಇಲಾಖೆ ಸೂಚನೆಯಂತೆ ಅಂಗನವಾಡಿ, ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಜನರ ಆರೋಗ್ಯದ ಸ್ಥಿತಿಗತಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೋವಿಡ್‌ ಲಕ್ಷಣಗಳಾದ ಜ್ವರ, ಕೆಮ್ಮು, ಶೀತ, ತೀವ್ರ ಉಸಿರಾಟ ತೊಂದರೆ (ಸಾರಿ), ವಿಷಮ ಶೀತ ಜ್ವರದ (ಐಎಲ್‌ಐ) ಲಕ್ಷಣ ಇರುವವರ ಜೊತೆಗೆ 60 ವರ್ಷದ ಮೇಲ್ಪಟ್ಟವಯೋವೃದ್ಧರ ಸಂಖ್ಯೆಯನ್ನೂ ಲೆಕ್ಕ ಹಾಕಲಾಗುತ್ತಿದೆ. ಸೋಂಕು ಲಕ್ಷಣಗಳು ಕಾಣಿಸಿಕೊಂಡವರನ್ನು ಫೀವರ್‌ ಕ್ಲಿನಿಕ್‌ಗೆ ಕಳುಹಿಸಿ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಸೋಂಕು ದೃಢಪಟ್ಟವರನ್ನು ನೇರ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

1.68 ಕೋಟಿ ಮನೆಗಳ ಸರ್ವೆ ಗುರಿ ಹೊಂದಲಾಗಿದ್ದು, ಜೂ.28ರವರೆಗೆ 1.58 ಕೋಟಿ ಮನೆಗಳ ಸರ್ವೆ ನಡೆಸಲಾಗಿದೆ. ಅದರಂತೆ ರಾಜ್ಯದಲ್ಲಿ ಒಟ್ಟು 64.16 ಲಕ್ಷ ಮಂದಿ ಕರೋನಾದಿಂದ ಅಪಾಯಕ್ಕೆ ತುತ್ತಾಗುವ ವರ್ಗದವರು ಎಂದು ಗುರುತಿಸಲಾಗಿದೆ. ಇದರಲ್ಲಿ 60 ವರ್ಷ ಮೇಲ್ಪಟ್ಟವಯೋವೃದ್ಧರು 61.50 ಲಕ್ಷದಷ್ಟಿದ್ದಾರೆ. 4.89 ಲಕ್ಷ ಗರ್ಭಿಣಿಯರಿದ್ದಾರೆ. 16.14 ಲಕ್ಷ ಜನ ಅಧಿಕ ರಕ್ತದೊತ್ತಡ, ಮಧುಮೇಹದಿಂದ, 1.80 ಲಕ್ಷ ಜನ ಶೀತ, ಜ್ವರ, ಕೆಮ್ಮಿನಿಂದ, 29,705 ಮಂದಿ ವಿಷಮ ಶೀತ ಜ್ವರ (ಐಎಲ್‌ಐ) ಲಕ್ಷಣ ಹೊಂದಿರುವುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.