Asianet Suvarna News Asianet Suvarna News

ವಿಧಾನಸೌಧದಲ್ಲಿ ಚಂಬಲ್‌ ಡಕಾಯಿತರಿದ್ದಾರೆ; ಹೆಚ್.ಡಿ.ಕುಮಾರಸ್ವಾಮಿ ಆರೋಪ

ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರದ ಖಜಾನೆ ಖಾಲಿಯಾಗಿಲ್ಲ. ಅಲ್ಲಿ ಭಾಗ್ಯಲಕ್ಷ್ಮೇ ತುಂಬಿ ತುಳುಕುತ್ತಿದ್ದಾಳೆ. ಆದರೆ ಚಂಬಲ್‌ ಡಕಾಯಿತರು ವಿಧಾನಸೌಧದಲ್ಲಿದ್ದಾರೆ. ಈ ನಾಡಿನ ಸಂಪತ್ತು ಲೂಟಿ ಆಗದಂತೆ ತಡೆಯಬೇಕಾದರೆ ಜೆಡಿಎಸ್‌ ಅನ್ನು ಅಧಿಕಾರಕ್ಕೆ ತರಬೇಕು ಎಂದ ಹೆಚ್.ಡಿ.ಕುಮಾರಸ್ವಾಮಿ

There are Chambal Robbers in Vidhana Soudha HD Kumaraswamy rav
Author
First Published Sep 19, 2022, 7:47 AM IST

ಕೋಲಾರ (ಸೆ.19) :ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರದ ಖಜಾನೆ ಖಾಲಿಯಾಗಿಲ್ಲ. ಅಲ್ಲಿ ಭಾಗ್ಯಲಕ್ಷ್ಮೇ ತುಂಬಿ ತುಳುಕುತ್ತಿದ್ದಾಳೆ. ಆದರೆ ಚಂಬಲ್‌ ಡಕಾಯಿತರು ವಿಧಾನಸೌಧದಲ್ಲಿದ್ದಾರೆ. ಈ ನಾಡಿನ ಸಂಪತ್ತು ಲೂಟಿ ಆಗದಂತೆ ತಡೆಯಬೇಕಾದರೆ ಜೆಡಿಎಸ್‌ ಅನ್ನು ಅಧಿಕಾರಕ್ಕೆ ತರಬೇಕಾಗಿರುವುದು ನಿಮ್ಮ ಜವಾಬ್ದಾರಿ ಎಂದು ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಹೇಳಿದರು.

ಬಿಜೆಪಿಯ ದೊಡ್ಡ ಭೂ ಹಗರಣ ಬಯಲಿಗೆಳೆವೆ: ಎಚ್‌ಡಿ ಕುಮಾರಸ್ವಾಮಿ

ಜಿಲ್ಲಾ ಜೆಡಿಎಸ್‌ ಅಲ್ಪಸಂಖ್ಯಾತ ಘಟಕ ನಗರದಲ್ಲಿ ಏರ್ಪಡಿಸಿದ್ದ ಅಲ್ಪಸಂಖ್ಯಾತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು. ಕಾಂಗ್ರೆಸ್‌ ಕಳೆದ 70 ವರ್ಷದಿಂದ ಅಲ್ಪಸಂಖ್ಯಾತರನ್ನು ಕೇವಲ ಓಟ್‌ ಬ್ಯಾಂಕ್‌ ಅಗಿ ಬಳಸಿಕೊಂಡಿತೆ ಹೊರತು ಯಾವುದೇ ಸೌಲಭ್ಯ, ಭದ್ರತೆ ನೀಡುವಲ್ಲಿ ವಿಫಲವಾಗಿದೆ ಎಂದರು.

ಬಿಜೆಪಿಯಿಂದ ಸಾಮರಸ್ಯ ಹಾಳು:

ಬಿಜೆಪಿ ಪಕ್ಷವು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರಿಗೆ, 370 ಸಿ ತಿದ್ದುಪಡಿ ಕಾಯ್ದೆ, ಹಿಜಾಬ್‌, ತಲಾಖ್‌, ಹಲಾಲ್‌ ಕಟ್‌, ಜಟಾಕ ಕಟ್‌, ಹಣ್ಣು ತರಕಾರಿಗಳನ್ನು ಮುಸ್ಲಿಂರ ಬಳಿ ಹಿಂದುಗಳು ಖರೀದಿಸಬಾರದು ಎಂಬುವುದು ಸೇರಿದಂತೆ ವಿವಿಧ ರೀತಿಯಲ್ಲಿ ಕಿರುಕುಳ ನೀಡುವ ಮೂಲಕ ಸಮಾಜದಲ್ಲಿ ಶಾಂತಿ ಸಾಮರಸ್ಯ ಹಾಳು ಮಾಡಿದೆ. ದೇಶದಲ್ಲಿ ಹಿಂದು ಮುಸ್ಲಿಂ ಸಮುದಾಯದವರು ಅಣ್ಣತಮ್ಮಂದಿರಂತಿದ್ದರು. ಆದರೆ ಮತಗಳಿಕೆಗಾಗಿ ಹಿಂದು ಮುಸ್ಲಿಂ ಸಮುದಾಯದಲ್ಲಿ ಭೇದಭಾವ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.

ಸಿದ್ದರಾಮಯ್ಯ ಈ ಹಿಂದೆ ಜೆಡಿಎಸ್‌ನಲ್ಲಿದ್ದವರು. ಮೋದಿ ನನಗೆ 5 ವರ್ಷಗಳ ಮುಖ್ಯ ಮಂತ್ರಿ ಅಧಿಕಾರ ನೀಡುವುದಾಗಿ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚಿಸಿದರೂ ಸಹ ನಾನು ಬಿಜೆಪಿಯ ಜೂತೆ ಕೈ ಜೋಡಿಸದೆ ಕಾಂಗ್ರೆಸ್‌ ಬೆಂಬಲಿಸಿದ್ದೆ. ಕಾಂಗ್ರೆಸ್‌ ಪಕ್ಷದ ನಿಮ್ಮ ಶ್ರೀನಿವಾಸಪುರದ ಶಾಸಕ ರಮೇಶ್‌ ಕುಮಾರ್‌ ಮತ್ತು ಸಿದ್ದರಾಮಯ್ಯ ಕುತಂತ್ರದಿಂದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು 15 ಮಂದಿಯನ್ನು ಬಾಂಬೆಗೆ ಕಳುಹಿಸಿ, ಬಿಜೆಪಿ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟರು ಎಂದರು.

ಬಿಜೆಪಿ ಬೆಳೆಯಲು ಸಿದ್ದು ಕಾರಣ:

ಇದಕ್ಕೂ ಮುನ್ನ ಸೋನಿಯಗಾಂಧಿ ಬಳಿ 5 ಬಾರಿ ಚರ್ಚಿಸಿದರೂ ಸಹ ಸಿದ್ದರಾಮಯ್ಯ ದಿಕ್ಕು ತಪ್ಪಿದರು. ಯಡಿಯೂರಪ್ಪ ಅವರೊಂದಿಗೆ ಕೈ ಜೋಡಿಸಿ ಬಿಜೆಪಿ ಸರ್ಕಾರದ ರಚನೆಗೆ ಅವಕಾಶ ನೀಡಿದರು ಹಾಗೂ ಅವರ ಪಕ್ಷವು ಬೆಳೆಯಲು ಕಾರಣರಾದರು. ಕಾಂಗ್ರೆಸ್‌ ಪಕ್ಷದಲ್ಲಿ ಸಿದ್ದರಾಮಯ್ಯ ಅವರಿಂದಾಗಿ 120 ಸ್ಥಾನ ಹೊಂದಿದ್ದದ್ದು 70ಕ್ಕೆ ಇಳಿಯಿತು, ಬಿಜಿಪಿ ಪಕ್ಷವು 40 ರಿಂದ 104 ಕ್ಕೆ ಏರಿಕೆಯಾಗಲು ಕಾಂಗ್ರೆಸ್‌ ಪಕ್ಷವೇ ಕಾರಣ ಎಂದು ವಿವರಿಸಿದರು.

ಪಿಯು ವರೆಗೆ ಉಚಿತ ಶಿಕ್ಷಣ:

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 5 ವರ್ಷದಲ್ಲಿ ಎಲ್ಲಾ ಬಡವರಿಗೂ ವಸತಿ ಸೌಲಭ್ಯ, ನಿಮ್ಮ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ. ಎಲ್‌.ಕೆ.ಜೆ.ಯಿಂದ ಎರಡನೇ ಪಿ.ಯು.ಸಿವರೆಗೆ ಉಚಿತ ಶಿಕ್ಷಣ, ಬಡ್ಡಿ ರಹಿತ ಸಾಲಸೌಲಭ್ಯ, ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದರು.

ಆರೋಗ್ಯ ಸಚಿವರು ರಾಜೀನಾಮೆ ನೀಡಲಿ: ಬಳ್ಳಾರಿ ವಿಮ್ಸ್‌ನಲ್ಲಿ ಇಬ್ಬರು ಅಮಾಯಕರ ಬಲಿಯಾಗಿದ್ದಾರೆ. ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.ನಗರದಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರಕ್ಕೆ ನೈತಿಕತೆ ಇದ್ದಿದ್ದರೆ ಆರೋಗ್ಯ ಸಚಿವರು ಈಗಾಗಲೆ ರಾಜೀನಾಮೆ ಕೊಡಬೇಕಾಗಿತ್ತು. ವೈದ್ಯಕೀಯ ಇಲಾಖೆಯಲ್ಲಿ ನೇಮಕಾತಿ ಅಕ್ರಮದ ಫಲವೇ ಇಂತಹ ಬೆಳವಣಿಗೆಗೆ ಕಾರಣ ಎಂದರು.

ಕಾಂಗ್ರೆಸ್-ಬಿಜೆಪಿ ನಡವಿನ ಕಾಳಗದಲ್ಲಿ ಕುಮಾರಸ್ವಾಮಿ ಎಂಟ್ರಿ, ಬೊಮ್ಮಾಯಿ ಸರ್ಕಾರಕ್ಕೆ ಶಾಕ್

ಸಮಾವೇಶದಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ ಎನ್‌.ಎಂ.ನಭೀ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ನಜ್ಜಾಂನಸೀಮ್‌, ಮುಂದಿನ ಶಾಸಕ ಸ್ಥಾನದ ಜೆ.ಡಿ.ಎಸ್‌. ಅಕಾಂಕ್ಷಿಗಳಾದ ಸಿ.ಎಂ.ಆರ್‌. ಶ್ರೀನಾಥ್‌, ಮುಳಬಾಗಿಲು ಸಂವೃದ್ಧಿ ಮಂಜುನಾಥ್‌, ಮಾಲೂರಿನ ರಾಮೇಗೌಡ, ಬಂಗಾರಪೇಟೆ ಮಲ್ಲೇಶ್‌ ಬಾಬು, ಮುಖಂಡರಾದ ಕುಕ್ಕಿ ರಾಜೇಶ್ವರಿ, ಮಾಜಿ ಎಂಎಲ್ಸಿ ಶ್ರೀನಿವಾಸಪುರ ಚೌಡರೆಡ್ಡಿ, ಮುಖಂಡರಾದ ಕೆ.ವಿ.ಶಂಕರಪ್ಪ, ವಕ್ಕಲೇರಿ ರಾಮು, ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷ ಜಮೀರ್‌ ಅಹ್ಮದ್‌, ಪ್ರಧಾನ ಕಾರ್ಯದರ್ಶಿ ಮುಸ್ತಾಫ್‌, ನಗರಸಭೆ ಅಧ್ಯಕ್ಷ ಶ್ವೇತಾ ಶಬರೀಷ್‌, ನೂರ್‌ಅಹ್ಮದ್‌, ನರಸಿಂಹಮೂರ್ತಿ, ಶಫಿಯುಲ್ಲಾ. ರಾಕೇಶ್‌ ಗೌಡ, ಸುಧಕಾರ್‌, ವಡಗೂರು ರಾಮು ಇದ್ದರು.

Follow Us:
Download App:
  • android
  • ios