ಇಂದಿನಿಂದ ಎರಡನೇ ಕಾಶಿಯಾತ್ರೆ ಪ್ರವಾಸ ಆರಂಭ ಭಾರತ್‌ ಗೌರವ್‌ ರೈಲಿನಲ್ಲಿ 600 ಯಾತ್ರಾರ್ಥಿಗಳ ಪ್ರಯಾಣ ಮೂರನೇ ಯಾತ್ರೆಗೆ ಬೇಡಿಕೆ ಬಗ್ಗೆ ಇಂದು ಸರ್ಕಾರದ ನಿರ್ಧಾರ

ಬೆಂಗಳೂರು (ನ.23) : ರಾಜ್ಯ ಧಾರ್ಮಿಕ ದತ್ತಿ ಇಲಾಖೆ ‘ಭಾರತ್‌ ಗೌರವ್‌’ ರೈಲಿನಲ್ಲಿ ಆಯೋಜಿಸಿರುವ ಕಾಶಿಯಾತ್ರೆಯ ಎರಡನೇ ಪ್ರವಾಸ ನ.23 (ಬುಧವಾರ) ಬೆಂಗಳೂರಿನಿಂದ ಆರಂಭವಾಗಲಿದೆ.

ಮಧ್ಯಾಹ್ನ 1.45ಕ್ಕೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಪ್ಲಾಟ್‌ಫಾರಂ ನಂ.8 ರಿಂದ ರೈಲು ಹೊರಡಲಿದೆ. ರಾಜ್ಯದ ನಾನಾ ಭಾಗಗಳ 600 ಮಂದಿ ಯಾತ್ರಾರ್ಥಿಗಳು ತೆರಳುತ್ತಿದ್ದು, ಕಾಶಿ, ಅಯೋಧ್ಯೆ ಹಾಗೂ ಪ್ರಯಾಗ್‌ರಾಜ್‌ನ ಹಿಂದು ಧಾರ್ಮಿಕ ಸ್ಥಳಗಳ ಪುಣ್ಯದರ್ಶನ ಪಡೆದು ನ.30ಕ್ಕೆ ರಾಜ್ಯಕ್ಕೆ ಹಿಂದಿರುಗಲಿದ್ದಾರೆ. 20 ಸಾವಿರ ರು. ವೆಚ್ಚದ ಈ ಯಾತ್ರೆಗೆ ರಾಜ್ಯ ಸರ್ಕಾರ ಯಾತ್ರಾರ್ಥಿಗಳಿಗೆ ಐದು ಸಾವಿರ ರು. ಸಹಾಯಧನ ನೀಡುತ್ತಿದ್ದು, 15 ಸಾವಿರ ರು. ಯಾತ್ರಾರ್ಥಿಗಳು ಪಾವತಿಸಿದ್ದಾರೆ. ಪ್ರಯಾಣಿಕರಿಗೆ ಸ್ಲೀಪರ್‌ 3ಎಸಿ ಆಸನ ನೀಡಲಾಗುತ್ತದೆ. ಊಟ, ವಸತಿ, ಸ್ಥಳಗಳ ಭೇಟಿ ಎಲ್ಲವನ್ನು ಐಆರ್‌ಸಿಟಿಸಿ ನಿರ್ವಹಿಸಲಿದೆ.

ರಾಜ್ಯದಿಂದ ಕಾಶಿಯಾತ್ರೆ ಪ್ರವಾಸಕ್ಕೆ ಹೊರಡಲಿದೆ ವಿಶೇಷ ರೈಲು

3ನೇ ಯಾತ್ರೆಗೆ ಬೇಡಿಕೆ:

ಕಾಶಿಯಾತ್ರೆಗೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಇದ್ದು, ಮೂರನೇ ಪ್ರವಾಸ ಆಯೋಜಿಸಲು ಧಾರ್ಮಿಕ ದತ್ತಿ ಇಲಾಖೆಗೆ ಸಾಕಷ್ಟುಬೇಡಿಕೆ ಬಂದಿವೆ. ಆದರೆ, ಡಿಸೆಂಬರ್‌ನಲ್ಲಿ ಉತ್ತರ ಭಾರತದಲ್ಲಿ ಹೆಚ್ಚು ಚಳಿ ಇರಲಿದ್ದು, ಯಾತ್ರಾರ್ಥಿಗಳಿಗೆ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಐಆರ್‌ಟಿಟಿಸಿ ಅಧಿಕಾರಿಗಳು ಎರಡು ತಿಂಗಳ ನಂತರ ಕಾಶಿಯಾತ್ರೆಯ ಮೂರನೇ ಪ್ರವಾಸ ಆಯೋಜನೆಗೆ ಸಲಹೆ ನೀಡಿದ್ದಾರೆ. ಈ ಕುರಿತು ಬುಧವಾರ ವಿಧಾನಸೌಧದಲ್ಲಿ ಧಾರ್ಮಿಕ ದತ್ತಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರೊಂದಿಗೆ ಐಆರ್‌ಸಿಟಿಸಿ ಸಭೆ ನಡೆಯಲಿದೆ. ಆ ಬಳಿಕ ಮೂರನೇ ಯಾತ್ರೆ ದಿನಾಂಕ ನಿಗದಿಯಾಗಲಿದೆ.

ಕರ್ನಾಟಕದ 30 ಸಾವಿರ ಭಕ್ತರಿಗೆ ಉಚಿತ ಕಾಶಿ ಯಾತ್ರೆ: ಸಚಿವೆ ಜೊಲ್ಲೆ