ಚಾಮರಾಜನಗರದ ಬಸವಾಪುರ ಸರ್ಕಾರಿ ಶಾಲೆಯಲ್ಲಿ 110 ಕ್ಕೂ ಹೆಚ್ಚು ಮಕ್ಕಳು ಕೇವಲ ನಾಲ್ಕು ಕೊಠಡಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕುಸಿಯುತ್ತಿರುವ ಮೇಲ್ಚಾವಣಿ, ಸೋರುವ ಕೊಠಡಿಗಳ ನಡುವೆ ಹೊರಾಂಗಣದಲ್ಲಿ ಪಾಠ ಮಾಡುವ ಪರಿಸ್ಥಿತಿ ಎದುರಾಗಿದೆ. 

ವರದಿ - ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ.

ಚಾಮರಾಜನಗರ (ಜುಲೈ.17) ಅದು ಗಡಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆ.ಸುಮಾರು 100 ಕ್ಕೂ ಹೆಚ್ಚು ಮಕ್ಕಳು ಈ ಶಾಲೆಯಲ್ಲಿ ವ್ಯಾಸಂಗ ಮಾಡ್ತಿದ್ದಾರೆ. ಒಂದರಿಂದ ಎಂಟನೇ ತರಗತಿವರೆಗೂ ಈ ಶಾಲೆಗೆ ನಾಲ್ಕೆ ಕೊಠಡಿ. ಇನ್ನುಳಿದ ಎರಡು ಕೊಠಡಿಗಳ ಮೇಲ್ಚಾವಣಿ ಕೂಡ ಕುಸಿದು ಬೀಳುತ್ತಿದೆ. ಶಾಲೆಯ ಹೊರಾಂಗಣದಲ್ಲಿ ಪಾಠ, ಪ್ರವಚನ ನಡೀತಿದೆ. ಶಾಲೆಗೆ ಎರಡು ಕೊಠಡಿ ನಿರ್ಮಿಸಿಕೊಡಿ ಅಂತಾ ಗ್ರಾಮಸ್ಥರು ಶಿಕ್ಷಣ ಸಚಿವರಿಗೆ ಮನವಿ ಮಾಡ್ತಿದ್ದು, ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..

ಹೌದು ಸರ್ಕಾರಿ ಶಾಲೆ ಅಂದ್ರೆ ಇಂದಿನ ಪೋಷಕರು ಮೂಗು ಮುರಿಯುತ್ತಾರೆ. ಶಾಲೆಗೆ ಸೇರಿಸಲು ಹಿಂದೇಟು ಹಾಕುವ ಪರಿಸ್ಥಿತಿ ಇದೆ. ಅಲ್ಲದೇ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಎಷ್ಟೋ ಶಾಲೆಗಳು ಮಕ್ಕಳ ಕೊರತೆಯಿಂದ ಮುಚ್ಚಿ ಹೋದ ನಿದರ್ಶನ ನಮ್ಮ ಕಣ್ಣ ಮುಂದಿದೆ. ಈ ನಡುವೆ ಚಾಮರಾಜನಗರ ತಾಲೂಕಿನ ಬಸವಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 110 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಒಂದರಿಂದ ಎಂಟನೇ ತರಗತಿವರೆಗೂ ಕೂಡ ವ್ಯಾಸಂಗ ಮಾಡ್ತಿದ್ದಾರೆ. ಇಷ್ಟು ಮಕ್ಕಳಿಗೆ ಕುಳಿತುಕೊಳ್ಳಲೂ ವ್ಯವಸ್ಥೆ ಇರೋದು ಬರೀ ನಾಲ್ಕೆ ಕೊಠಡಿ, ಇನ್ನುಳಿದ ಎರಡು ಕೊಠಡಿ ಸಂಪೂರ್ಣ ಹಾಳಾಗಿದೆ, ಮೇಲ್ಚಾವಣಿ ಕುಸಿದು ಬೀಳುತ್ತಿದೆ. ಇನ್ನೂ ಮಳೆ ಬಂದರಂತೂ ಸಂಪೂರ್ಣ ಸೋರುವ ಪರಿಸ್ಥಿತಿ ಇದೆ. ಇದರಿಂದ ಶಿಕ್ಷಕರು ಮಕ್ಕಳನ್ನು ಶಾಲೆಯ ಹೊರಾಂಗಣದಲ್ಲಿ ಕೂರಿಸಿ ಪಾಠ, ಪ್ರವಚನ ಮಾಡ್ತಿದ್ದಾರೆ.

ಇನ್ನೂ ಗಡಿ ಜಿಲ್ಲೆಯ ಮಕ್ಕಳು ಶೈಕ್ಷಣಿಕವಾಗಿಯು ಕೂಡ ಹಿಂದುಳಿದಿದ್ದಾರೆ. ಈಗಾಗಲೇ ಕಳೆದ ಮೂರು ವರ್ಷದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ. ಆದ್ರೆ ಇದಕ್ಕೆ ತದ್ವಿರುದ್ದ ಎನ್ನುವಂತೆ ಬಸವಾಪುರ ಶಾಲೆಯಲ್ಲಿ 110 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಹೊಸ ಕೊಠಡಿ ನಿರ್ಮಿಸಿ, ಸರ್ಕಾರಿ ಶಾಲೆಗೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ ಅಂತಾ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. ಶೌಚಾಲಯದ ಪಕ್ಕದಲ್ಲಿ ಕುಳಿತು ವಿಧ್ಯಾರ್ಥಿಗಳು ಓದುವ ಪರಿಸ್ಥಿತಿ ಎದುರಾಗಿದೆ. ಇಲ್ಲಿಯವರೆಗೂ ಸ್ಥಳೀಯ ಜನಪ್ರತಿನಿಧಿ, ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದ್ರೂ ಕೂಡ ಯಾವುದೇ ರೀತಿಯ ಪ್ರಯೋಜನವಾಗಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..

ಒಟ್ನಲ್ಲಿ ಸರ್ಕಾರಿ ಶಾಲೆ ಅಂದ್ರೆ ಸದ್ಯ ಮೂಗು ಮುರಿಯುವ ಪರಿಸ್ಥಿತಿ ಇದೆ. ಆದ್ರೆ ಬಸವಾಪುರ ಗ್ರಾಮಸ್ಥರು ಶಾಲೆ ಉಳಿಸಿ, ಕೊಠಡಿ ಕಟ್ಟಿಸಿ ಮೂಲಭೂತ ಸೌಕರ್ಯ ಕಲ್ಪಿಸಿ ಅಂತಾ ಯಾರ ಬಳಿ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಇನ್ನಾದ್ರೂ ಶಿಕ್ಷಣ ಸಚಿವರು,ಶಿಕ್ಷಣ ಇಲಾಖೆಯ ಅಧಿಕಾರಿಗಳು ಇತ್ತ ಕಣ್ಣಾಯಿಸಲಿ ಅನ್ನೋದೆ ಏಷಿಯಾನೆಟ್ ಸುವರ್ಣ ನ್ಯೂಸ್ ನ ಕಳಕಳಿ...