ಹಾಲಕ್ಕಿ ಹಾಡುಗಳ ಕೋಗಿಲೆ, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮು ಗೌಡ ನಿಧನ
ಸುಕ್ರಜ್ಜಿ ಅವರಿಗೆ ಸುಮಾರು 5000 ಕ್ಕೂ ಹೆಚ್ಚು ಹಾಲಕ್ಕಿ ಹಾಡು ಕಂಠಪಾಠ ಇತ್ತು ಹಾಲಕ್ಕಿ ಹಾಡುಗಳ ಕೋಗಿಲೆ ಎಂದು ಪ್ರಸಿದ್ಧರಾಗಗಿದ್ದರು, 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಸುಕ್ರಿ ಬೊಮ್ಮು ಗೌಡ ಅವರನ್ನು ಗೌರವಿಸಲಾಗಿತ್ತು.

ಕಾರವಾರ: ಪದ್ಮಶ್ರೀ ಪುರಸ್ಕೃತೆ 88 ವರ್ಷದ ಸುಕ್ರಿ ಬೊಮ್ಮು ಗೌಡ ಇಂದು ಬೆಳಗಿನ ಜಾವ ಸುಮಾರು 3.30ಕ್ಕೆ ನಿಧನರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಡಗೇರಿ ಗ್ರಾಮದಲ್ಲಿ ವಿಧಿವಶರಾಗಿದ್ದಾರೆ. ಸುಕ್ರಜ್ಜಿ ಅಂತಾನೇ ಸುಕ್ರಿ ಬೊಮ್ಮಗೌಡ ಜನಪ್ರಿಯರಾಗಿದ್ದರು. ಸುಕ್ರಜ್ಜಿ ಅವರಿಗೆ ಸುಮಾರು 5000 ಕ್ಕೂ ಹೆಚ್ಚು ಹಾಲಕ್ಕಿ ಹಾಡು ಕಂಠಪಾಠ ಇತ್ತು ಹಾಲಕ್ಕಿ ಹಾಡುಗಳ ಕೋಗಿಲೆ ಎಂದು ಪ್ರಸಿದ್ಧರಾಗಗಿದ್ದರು, 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಸುಕ್ರಿ ಬೊಮ್ಮು ಗೌಡ ಅವರನ್ನು ಗೌರವಿಸಲಾಗಿತ್ತು. ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಸುಕ್ರಿ ಬೊಮ್ಮುಗೌಡ ಒತ್ತಾಯ ಮಾಡಿದ್ದರು. ಪರಿಶಿಷ್ಟ ಪಂಗಡಕ್ಕೆ ಸೇರಿಸಲು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಹಾಗೂ ಜಿಲ್ಲೆಯ ಅಭಿವೃದ್ಧಿ ಸಂಬಂಧಿಸಿದ ವಿವಿಧ ಹೋರಾಟಗಳಲ್ಲಿ ಸುಕ್ರಜ್ಜಿ ಭಾಗಿಯಾಗಿದ್ದರು.
ಇತ್ತೀಚೆಗಷ್ಟೇ ಮಂಗಳೂರಿನ ಆಸ್ಪತ್ರೆಯಲ್ಲಿ ಸುಕ್ರಜ್ಜಿ ಆರೋಗ್ಯ ಪರಿಶೀಲನೆ ಮಾಡಿಸಿಕೊಂಡಿದ್ದರು. ಚೆಕ್ ಅಪ್ ವೇಳೆಯೂ ಗಂಭೀರವಾದ ಯಾವುದೇ ಸಮಸ್ಯೆಗಳಿಲ್ಲ ಅಂತಾ ವೈದ್ಯರು ಹೇಳಿದ್ದರು. ನಿನ್ನೆ (ಬುಧವಾರ) ಸ್ಥಳೀಯ ಮಕ್ಕಳಿಗೆ ಜಾನಪದ ಹಾಡುಗಳನ್ನು ಹೇಳಿಕೊಟ್ಟಿದ್ದರು. ಆದರೆ, ರಾತ್ರಿ ಬೆಳಗಾಗುವಷ್ಟರಲ್ಲಿ ಮಲಗಿದಲ್ಲಿಯೇ ಸಕ್ರಜ್ಜಿ ನಿಧನರಾಗಿದ್ದಾರೆ.
ಸುಕ್ರಜ್ಜಿ ಅವರಿಗೆ ಬುಡಕಟ್ಟು ಸಮುದಾಯದ ಸಂಸ್ಕೃತಿಯ ರಕ್ಷಣೆಗೆ 1988ರಲ್ಲಿ ರಾಜ್ಯ ಸರಕಾರದಿಂದ ಪ್ರಶಸ್ತಿ ದೊರಕಿತ್ತು. 1999ರಲ್ಲಿ ಜಾನಪದ ಶ್ರೀ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾನಿಲಯದಿಂದ 2006ರಲ್ಲಿ ನಾಡೋಜಾ ಪ್ರಶಸ್ತಿ, 2009ರಲ್ಲಿ ಸಂದೇಶ ಕಲಾ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, 2017ರಲ್ಲಿ ಕೇಂದ್ರ ಸರಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು.
ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಜನಾಂಗದಲ್ಲಿ ಜನಿಸಿದ ಅವರು 16ನೇ ವಯಸ್ಸಿನಲ್ಲಿ ವಿವಾಹವಾಗಿದ್ದರು. ಸುಕ್ರಿ ಬೊಮ್ಮಗೌಡರಿಗೆ ಬಾಲ್ಯದಲ್ಲಿಯೇ ಅವರ ತಾಯಿ ಹಾಡಲು ಕಲಿಸಿದ್ದರು. ಪತಿಯ ಮರಣದ ನಂತರ, ಹಾಲಕ್ಕಿ ಒಕ್ಕಲಿಗ ಬುಡಕಟ್ಟಿನ ಸಾಂಪ್ರದಾಯಿಕ ಸಂಗೀತವನ್ನು ಪ್ರದರ್ಶಿಸಲು ಪ್ರಾರಂಭಿಸಿದ್ದರು. "ಹಾಲಕ್ಕಿಯ ನೈಟಿಂಗೇಲ್" ಎಂದು ಗುರುತಿಸಲ್ಪಟ್ಟಿದ್ದ ಸುಕ್ರಿ ಬೊಮ್ಮ ಗೌಡ ಅವರ ಹಾಡುಗಳನ್ನು ಆಲ್ ಇಂಡಿಯಾ ರೇಡಿಯೋ, ಕರ್ನಾಟಕ ಜಾನಪದ ಅಕಾಡೆಮಿ ಸಂಗ್ರಹ ಮಾಡಿದೆ. ಅನಕ್ಷರಸ್ಥೆ ಆಗಿದ್ರೂ, ಸಾಕ್ಷರತೆಗಾಗಿ ಹೆಚ್ಚಿನ ಕೆಲಸ ಮಾಡಿದ್ದರು. ಮದ್ಯ ನಿಷೇಧಕ್ಕಾಗಿ ಹೋರಾಟ ಸಹ ಮಾಡಿದ್ದರು.