ತಾಲೂಕಿನ ಚಿಗಳ್ಳಿ ಗ್ರಾಮದ ದೀಪನಾಥೇಶ್ವರ ದೇವಾಲಯದಲ್ಲಿ ಸುಮಾರು 4 ದಶಕಗಳಿಂದ ಎಣ್ಣೆ ಇಲ್ಲದೆ ಉರಿಯುತ್ತಿದ್ದ ಮೂರು ದೀಪಗಳು ಬುಧವಾರ ಆರಿಹೋಗಿದ್ದು, ಭಕ್ತರಲ್ಲಿ ಆತಂಕ ಉಂಟಾಗಿದೆ. 

ಮುಂಡಗೋಡ (ಫೆ.07): ತಾಲೂಕಿನ ಚಿಗಳ್ಳಿ ಗ್ರಾಮದ ದೀಪನಾಥೇಶ್ವರ ದೇವಾಲಯದಲ್ಲಿ ಸುಮಾರು 4 ದಶಕಗಳಿಂದ ಎಣ್ಣೆ ಇಲ್ಲದೆ ಉರಿಯುತ್ತಿದ್ದ ಮೂರು ದೀಪಗಳು ಬುಧವಾರ ಆರಿಹೋಗಿದ್ದು, ಭಕ್ತರಲ್ಲಿ ಆತಂಕ ಉಂಟಾಗಿದೆ. ಸುಮಾರು 45 ವರ್ಷಗಳಿಂದ ಮೂರು ದೀಪಗಳು ಯಾವುದೇ ಎಣ್ಣೆ ಹಾಗೂ ಬತ್ತಿ ಇಲ್ಲದೆ ಉರಿಯುತ್ತ ಬಂದಿದ್ದವು. ಈ ದೀಪಗಳು ದೇಶ-ವಿದೇಶಗಳಲ್ಲಿ ಹೆಸರು ಗಳಿಸಿದ್ದು, ಪ್ರತಿದಿನವೂ ಸಾಕಷ್ಟು ಪ್ರವಾಸಿಗರು ದೀಪಗಳ ವೀಕ್ಷಣೆಗೆ ಆಗಮಿಸುತ್ತಿದ್ದರು.

೧೯೭೯ರಲ್ಲಿ ಚಿಗಳ್ಳಿ ಗ್ರಾಮದ ಶಾರದಮ್ಮ ದೈವಜ್ಞ ಎಂಬವರು ಸೀಮೆಎಣ್ಣೆ ಹಾಕಿ ಒಂದು ಲಾಟೀನ್ ದೀಪ ಹಚ್ಚಿದ್ದರು. ಅದು ನಿರಂತರವಾಗಿ ಉರಿಯತೊಡಗಿತು. ಅದನ್ನು ಕಂಡು ಆಶ್ಚರ್ಯಗೊಂಡಿದ್ದ ಶಾರದಮ್ಮ ೧೯೮೦ರಲ್ಲಿ ಮತ್ತೊಂದು ದೀಪ ಹಚ್ಚಿದರು. ಅದು ಕೂಡ ನಿರಂತರ ಬೆಳಗತೊಡಗಿತು. ಹದಿನೈದು ದಿನ ಬಿಟ್ಟು ಅವರು ಹಚ್ಚಿದ ಇನ್ನೊಂದು ದೀಪವೂ ಪವಾಡವೆಂಬಂತೆ ನಿರಂತರವಾಗಿ ಬೆಳಗುತ್ತ ಬಂದಿತ್ತು. ದೀಪಗಳನ್ನು ಹಚ್ಚಿದ ಶಾರದಮ್ಮ ಕೆಲವು ವರ್ಷಗಳ ನಂತರ ನಿಧನರಾದರು. ಆ ಬಳಿಕ ಅವರ ಸಂಬಂಧಿಕರು ಈ ದೀಪಗಳನ್ನು ಪೂಜಿಸುತ್ತ ಬಂದಿದ್ದರು. ಇದೀಗ ನೂತನ ದೇವಸ್ಥಾನ ಕೂಡ ನಿರ್ಮಾಣ ಮಾಡಲಾಗಿದೆ.

ಐಪಿಎಸ್‌ ಅಧಿಕಾರಿ ಗದ್ದೆಯಲ್ಲಿ ರಾಶಿ ರಾಶಿ ಮರಳು ಸಂಗ್ರಹ: ಗೃಹ ಸಚಿವರಿಗೆ ವಕೀಲರ ದೂರು

ಆರಿದ ದೀಪಗಳು: ಬುಧವಾರ ಮೂರೂ ದೀಪಗಳು ಆರಿರುವ ಸುದ್ದಿ ಗ್ರಾಮದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಯಾವ ಕಾರಣಕ್ಕಾಗಿ ಈ ದೀಪಗಳು ಆರಿದವು ಎಂಬುದು ತಿಳಿಯದಂತಾಗಿದ್ದು, ವಿಷಯ ತಿಳಿದ ಸ್ಥಳೀಯರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ತಂಡೋಪತಂಡವಾಗಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ದೀಪನಾಥೇಶ್ವರ ದೇವಸ್ಥಾನದ ಪೂಜೆ ಮಾಡುತ್ತಿದ್ದ ವೆಂಕಟೇಶ ರಾಯ್ಕರ ಅವರು ಕಳೆದ ಜ. ೨೩ರಂದು ವಿಧಿವಶರಾಗಿದ್ದಾರೆ. ನಂತರ ಅವರ ಸಂಸ್ಕಾರ ಕಾರ್ಯ ಗೋಕರ್ಣದಲ್ಲಿ ಮಾಡಿಕೊಂಡು ಊರಿಗೆ ಮರಳಿ ವೈಕುಂಠ ಸಮಾರಂಭ ಸಮಾರಾಧನೆ ಮುಗಿಸಿಕೊಂಡು ದೇವಸ್ಥಾನದ ಗರ್ಭಗುಡಿ ಬಾಗಿಲು ತೆರೆದಾಗ ದೀಪಗಳು ಆರಿಹೋಗಿದ್ದು ಕಂಡುಬಂದಿದೆ.

ಈ ದೀಪಗಳು ಸುಮಾರು ೪೫ ವರ್ಷಗಳಿಂದಲೂ ನಿರಂತರವಾಗಿ ಉರಿಯುತ್ತಿದ್ದು, ನಿತ್ಯ ಭಕ್ತರು ದರ್ಶನ ಪಡೆಯುತ್ತಿದ್ದರು. ಕಷ್ಟ-ಕಾರ್ಪಣ್ಯ ದೂರ ಮಾಡುವಂತೆ ಬೇಡಿಕೊಳ್ಳುತ್ತಿದ್ದರು. ಈಗ ದೀಪ ಆರಿಹೋಗಿರುವ ಹಿನ್ನೆಲೆ ಮುಂದೇನು ಮಾಡಬೇಕು ಎಂದು ಗ್ರಾಮಸ್ಥರು ಚರ್ಚಿಸುತ್ತಿದ್ದಾರೆ. ತುರ್ತು ಹೋಮ- ಹವನಾದಿಗಳನ್ನು ನಡೆಸಲು ತೀರ್ಮಾನಿಸಿದ್ದಾರೆ. ಭಕ್ತರು ಯಾವುದೇ ರೀತಿ ಆತಂಕಕ್ಕೊಳಗಾಗಬಾರದು ಎಂದು ದೀಪನಾಥೇಶ್ವರ ದೇವಸ್ಥಾನ ಟ್ರಸ್ಟ್ ಮುಖ್ಯಸ್ಥ ಶೇಷಾದ್ರಿ ಕೆ. ಹಾಗೂ ಕಾರ್ಯದರ್ಶಿ ಚಂದ್ರಮೋಹನ ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಇದೆ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ

ವಿಜೃಂಭಣೆಯ ಅಷ್ಟಬಂಧ ಬ್ರಹ್ಮ ಕಲಶೋತ್ಸವ: ಪಟ್ಟಣದ ಚೌಥನಿಯ ಕಾಳಿಕಾಂಬಾ ದೇವಸ್ಥಾನದಲ್ಲಿ ದೇವಿಯ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಕಾರ್ಯಕ್ರಮ ಆನೆಗುಂದಿಯ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಮತ್ತು ಅರೆಮಾದನಹಳ್ಳಿಯ ವಿಭೂಷಿತ ಶಿವಸುಜ್ಞಾನ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ.ಬ್ರಹ್ಮಕಲಶೋತ್ಸವದ ಅಂಗವಾಗಿ ಗುರುವಾರವೂ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಕಾಳಿಕಾಂಬಾ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ದೇವಸ್ಥಾನದ ಆಡಳಿತ ಮೊಕ್ತೇಸರ ಗಜಾನನ ಆಚಾರ್ಯ, ಪ್ರಮುಖರಾದ ಶಿವರಾಮ ಆಚಾರ್ಯ, ದೇವಿದಾಸ ಆಚಾರ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.