Asianet Suvarna News Asianet Suvarna News

ಕನ್ನಡಪರ, ರೈತಪರ ಹೋರಾಟ ಹತ್ತಿಕ್ಕಲು ಮನಸೋ ಇಚ್ಛೆ ಕೇಸ್‌। ತಿಂಗಳಾದ ಮೇಲೆ ಬರುತ್ತೆ ನಾಲ್ಕಾರು ಸೆಕ್ಷನ್‌ಗಳಡಿ ನೋಟಿಸ್‌!

ಪ್ರತಿಭಟನೆ, ಧರಣಿ, ಸತ್ಯಾಗ್ರಹ, ಮುಷ್ಕರ, ಮೆರವಣಿಗೆ, ಮುತ್ತಿಗೆ ಹೀಗೆ ಯಾವುದೇ ಮಾದರಿ ಹೋರಾಟವನ್ನು ಶಾಂತಿಯುತವಾಗಿ ನಡೆಸಿದಾಗಲೂ ರೈತರು, ಕನ್ನಡಪರ ಹೋರಾಟಗಾರರ ವಿರುದ್ಧ ಒಂದಲ್ಲ ಎರಡಲ್ಲ ನಾಲ್ಕಾರು ಸೆಕ್ಷನ್‌ಗಳಡಿ ಪ್ರಕರಣಗಳು ದಾಖಲಾಗಿರುತ್ತವೆ..!

The Karnataka government is using case weapon on farmers and pro kannada fighters at bengaluru rav
Author
First Published Jan 1, 2024, 6:41 AM IST

ಭಾಗ-3

ಲಿಂಗರಾಜು ಕೋರಾ

ಬೆಂಗಳೂರು (ಜ.1): ಪ್ರತಿಭಟನೆ, ಧರಣಿ, ಸತ್ಯಾಗ್ರಹ, ಮುಷ್ಕರ, ಮೆರವಣಿಗೆ, ಮುತ್ತಿಗೆ ಹೀಗೆ ಯಾವುದೇ ಮಾದರಿ ಹೋರಾಟವನ್ನು ಶಾಂತಿಯುತವಾಗಿ ನಡೆಸಿದಾಗಲೂ ರೈತರು, ಕನ್ನಡಪರ ಹೋರಾಟಗಾರರ ವಿರುದ್ಧ ಒಂದಲ್ಲ ಎರಡಲ್ಲ ನಾಲ್ಕಾರು ಸೆಕ್ಷನ್‌ಗಳಡಿ ಪ್ರಕರಣಗಳು ದಾಖಲಾಗಿರುತ್ತವೆ..!

ಇದು ನಾಡಿನ ಬಹುತೇಕ ಕನ್ನಡಪರ, ರೈತಪರ ಸಂಘಟನೆಗಳ ಮುಖಂಡರು ಹೇಳುವ ಬಹಿರಂಗ ಸತ್ಯ. ಇದರ ಹಿಂದಿರುವ ಮರ್ಮ ಕಾನೂನಿನ ಮೂಲಕ ಹೋರಾಟಗಳನ್ನು ಹತ್ತಿಕ್ಕುವುದು ಎಂಬುದು ಹೋರಾಟಗಾರರ ಸ್ಪಷ್ಟ ಆರೋಪ.

ಇನ್ನೂ ಆಶ್ಚರ್ಯದ ಸಂಗತಿ ಎಂದರೆ ಹೋರಾಟದ ದಿನ ಯಾವುದೇ ಕೇಸು ದಾಖಲಿಸದೆ ಕೇವಲ ವಶಕ್ಕೆ ಪಡೆದು ಕೆಲ ಗಂಟೆಗಳ ಬಳಿಕ ಬಿಡುಗಡೆ ಮಾಡಿ ಕಳುಹಿಸುವ ಪೊಲೀಸರು ಯಾವ್ಯಾವ ಸೆಕ್ಷನ್‌ಗಳಡಿ ಕೇಸು ದಾಖಲಿಸಿದ್ದಾರೆಂಬುದು ತಿಳಿಯುವುದು 15 ದಿನ ಇಲ್ಲವೇ ತಿಂಗಳ ಬಳಿಕವೋ ನ್ಯಾಯಾಲಯಗಳಿಂದ ನೋಟೀಸು ಬಂದಾಗಲೇ. ಯಾವುದೇ ಸಮಸ್ಯೆಗಳು ಆಗದಿದ್ದರೂ ಕರ್ತವ್ಯಕ್ಕೆ ಅಡ್ಡಿ, ವಾಹನ ಸಂಚಾರಕ್ಕೆ ಅಡ್ಡಿ ಸೇರಿದಂತೆ ಐದಾರು ಸೆಕ್ಷನ್‌ಗಳಲ್ಲಿ ಪ್ರಕರಣ ದಾಖಲಿಸಿರುತ್ತಾರೆ ಎನ್ನುತ್ತಾರೆ ಮುಖಂಡರುಗಳು.

ರಾಜ್ಯದಲ್ಲಿ 'ಬೀರ್‌'ಬಲ್ಲರ ಸಂಖ್ಯೆ ಹೆಚ್ಚಳ; ವರ್ಷದಲ್ಲೇ ದ್ವಿಗುಣವಾದ ಬೀಯರ್ ಮಾರಾಟ!

ಪೊಲೀಸರು ಈ ರೀತಿ ಕ್ರಮ ಕೈಗೊಳ್ಳಲು ಆಳುವ ಪಕ್ಷಗಳೇ ಕಾರಣ. ಕಳೆದ ಒಂದೆರಡು ದಶಕದಿಂದ ರಾಜ್ಯದಲ್ಲಿ ಅಧಿಕಾರ ನಡೆಸಿದ ಯಾವ ಸರ್ಕಾರಗಳಿಗೂ ಪ್ರತಿಭಟನೆ, ಹೋರಾಟಗಳನ್ನು ಸಹಿಸಿಕೊಳ್ಳುವ ಗುಣವಿಲ್ಲ. ಪ್ರತಿಪಕ್ಷದಲ್ಲಿದ್ದಾಗ ಇದೇ ಹೋರಾಟಗಾರರನ್ನು ಬಳಸಿಕೊಳ್ಳುವ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದ ಕೂಡಲೇ ಅವರನ್ನು ಹಣಿಯಲು ಸರ್ವ ರೀತಿಯಲ್ಲೂ ಪ್ರಯತ್ತಿಸುತ್ತವೆ ಎನ್ನುತ್ತಾರೆ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಕನ್ನಡ ಚಳವಳಿ ಹೋರಾಟಗಾರ ವಾಟಾಳ್‌ ನಾಗರಾಜು, ರೈತ ಮುಖಂಡರಾದ ಕುರುಬೂರು ಶಾಂತಕುಮಾರ್‌, ಕೋಡಿಹಳ್ಳಿ ಚಂದ್ರಶೇಖರ್‌ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ ಶೆಟ್ಟಿ ಬಣ) ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಸೇರಿದಂತೆ ಇನ್ನೂ ಹಲವು ನಾಯಕರು.

ನಮ್ಮಿಂದ ತಪ್ಪಾದರೆ ಪ್ರಕರಣಗಳನ್ನು ದಾಖಲಿಸುವುದಕ್ಕೆ ನಾವು ತಕರಾರು ಮಾಡುವುದಿಲ್ಲ. ಆದರೆ, ಪೊಲೀಸರು ತಮ್ಮ ಮೇಲಿನ ಒತ್ತಡಕ್ಕೆ ಹೋರಾಟಗಾರರನ್ನು ಬಲಿಕೊಡುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲೇ ನಮ್ಮ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ಮಾಡಿದರೂ ಸ್ಥಳದಲ್ಲೇ ಇಲ್ಲದ ರಾಜ್ಯಾಧ್ಯಕ್ಷರನ್ನೇ ಪೋಲೀಸರು ಎ1 ಮಾಡುತ್ತಾರೆ. ಹೋರಾಟಗಾರರು ಗುಲಾಮರಾಗಿರಬೇಕು. ಕೇಸುಗಳ ಭಯ ಇರಲಿ. ಹೋರಾಟಗಳಿಂದ ದೂರವಾಗಲಿ ಎನ್ನುವುದೇ ಇತ್ತೀಚಿನ ಎಲ್ಲ ಸರ್ಕಾರಗಳು, ರಾಜಕಾರಣಿಗಳ ಉದ್ದೇಶ ಎನ್ನುತ್ತಾರೆ ನಾರಾಯಣಗೌಡ.

ಕೇಸು ಖುಲಾಸೆಯಾದರೆ ಮೇಲ್ಮನವಿ:

ಒಂದು ವೇಳೆ ಕೆಳ ಹಂತದ ನ್ಯಾಯಾಲಯಗಳಲ್ಲಿ ನಮ್ಮ ವಿರುದ್ಧದ ಪ್ರಕರಣಗಳು ಖುಲಾಸೆಯಾದರೆ ಸರ್ಕಾರ ಮೇಲ್ಮನವಿ ಸಲ್ಲಿಸಿದ ಉದಾಹರಣೆಗಳು ಕೂಡ ಇವೆ. ಹಾಸನದ ಹೋರಾಟಕ್ಕೆ ಸಂಬಂಧಿಸಿದ ಪ್ರಕರಣ ಸ್ಥಳೀಯ ನ್ಯಾಯಾಲಯ ಖುಲಾಸೆ ಮಾಡಿತು. ನಂತರ ಸರ್ಕಾರಿ ವಕೀಲರು ಖುಲಾಸೆ ಪ್ರಶ್ನಿಸಿ ಸಲ್ಲಿ ಸಿರುವ ಮೇಲ್ಮನವಿ ಇಂದಿಗೂ ನಡೆಯುತ್ತಿದೆ. ಸರ್ಕಾರ ಹೋರಾಟಗಾರರನ್ನು ನ್ಯಾಯಾಲಯಗಳಿಗೆ ಓಡಾಡಿಸಿ ಮಾನಸಿಕ ಹಾಗೂ ಆರ್ಥಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ ಎನ್ನುತ್ತಾರೆ ವಾಟಾಳ್‌ ನಾಗರಾಜ್‌.

ಬಿಸಿಲಿಗೆ ಹೆಸರುವಾಸಿಯಾಗಿದ್ದ ಈ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಚಳಿ!

ರಾಜಕೀಯ ಪಕ್ಷದವರ ಪ್ರತಿಭಟನೆಗಳಲ್ಲಿ ಪೊಲೀಸರು ಯಾವ ಕೇಸನ್ನೂ ದಾಖಲಿಸುವುದಿಲ್ಲ. ಕನ್ನಡಪರ ಹೋರಾಟಗಾರರು, ರೈತರ ಮೇಲೆ ಮಾತ್ರ ಯಾಕೆ ಕೇಸು ಹಾಕುತ್ತಾರೆ? ಕರ್ನಾಟಕದಲ್ಲಿ ಕನ್ನಡ, ಕನ್ನಡಿಗರ ಪರವಾದ ನೀತಿ ನಿಯಮಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರಗಳು ವಿಫಲವಾದಾಗ ಹೋರಾಟಗಾರರು ಬೀದಿಗಿಳಿಯುತ್ತಾರೆ. ಕೂಡಲೇ ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು.

- ಮುಖ್ಯಮಂತ್ರಿ ಚಂದ್ರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ

ರಾಜ್ಯದಲ್ಲಿ ಸಂಘ ಸಂಸ್ಥೆಗಳು, ವಾಣಿಜ್ಯ ಮಣಿಗೆಗಳು, ಕೈಗಾರಿಕೆಗಳು ಹೇಗೆ ಬೇಕಾದರೆ ಹಾಗೆ ನಡೆದುಕೊಳ್ಳಲು ಬರುವುದಿಲ್ಲ. ಎಲ್ಲದಕ್ಕೂ ಒಂದು ನೀತಿ ಸಂಹಿತೆ ಇರುತ್ತದೆ. ಅದರಂತೆ ನಡೆಯಬೇಕು. ಸರ್ಕಾರ ತಾನೇ ಸಮಿತಿ ರಚಿಸಿ ಪಡೆದಿರುವ ಸರೋಜಿನಿ ಮಹಿಷಿಯ ಪರಿಷ್ಕೃತ ವರದಿಯನ್ನು ಜಾರಿಗೆ ತಂದರೆ ಎಲ್ಲದಕ್ಕೂ ಪರಿಹಾರ ದೊರೆಯಲಿದೆ. ಸಂಘಟನೆಗಳು ಹೋರಾಟಗಾರರು ಎದುರಿಸುತ್ತಿರುವ ಸಮಸ್ಯೆ, ಸವಾಲು ಪರಿಹಾರವಾಗಲಿವೆ.

- ಎಸ್‌.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ

ಶ್ರೀಮಂತರ ಮಕ್ಕಳ್ಯಾರೂ ಕನ್ನಡಪರ, ರೈತಪರ ಹೋರಾಟಕ್ಕೆ ಬರೋದಿಲ್ಲ. ಬಡವರು, ಲಾಟೋ, ಕ್ಯಾಬ್‌ ಚಾಲಕರು, ವಿದ್ಯಾರ್ಥಿ ಯುವ ಸಮೂಹದಲ್ಲೇ ನಾಡು, ನುಡಿ ಬಗೆಗಿನ ಅಭಿಮಾನದ ಕಿಚ್ಚು ಹೆಚ್ಚು. ಯಾವ ಹೋರಾಟಗಾರರೂ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡುವುದಿಲ್ಲ. ಅಂತಹವರ ಮೇಲೆ ಸರ್ಕಾರಗಳು ಮನಬಂದಂತೆ ಪ್ರಕರಣ ದಾಖಲಿಸುತ್ತಿರುವುದರಿಂದ ಭಯ, ಆತಂಕ ಹೆಚ್ಚಾಗಿ ಹೋರಾಟಗಳ ಶಕ್ತಿ ಕಡಿಮೆಯಾಗುತ್ತಿದೆ. ಈ ಬಗ್ಗೆ ಸಂಘಟನೆಗಳು ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಿದೆ.

- ಪ್ರವೀಣ್‌ ಶೆಟ್ಟಿ, ಕರವೇ ಅಧ್ಯಕ್ಷ

Follow Us:
Download App:
  • android
  • ios