ಅಪಘಾತಕ್ಕೆ ಪರಿಹಾರ ಕೊಡೋದು ವಿಮಾ ಕಂಪನಿಯದ್ದೇ ಹೊಣೆ: ಹೈಕೋರ್ಟ್
ರಸ್ತೆ ಅಪಘಾತದಲ್ಲಿ ವಾಹನ ಚಾಲಕ ಮೃತಪಟ್ಟಾಗ ಘಟನೆ ವೇಳೆ ಆತ ಚಾಲನಾ ಪರವಾನಗಿ ಹೊಂದಿರುವುದು ಸಾಬೀತಾಗದ ಸಂದರ್ಭದಲ್ಲಿ ‘ಪಾವತಿ ಮತ್ತು ವಸೂಲಾತಿ’ ನೀತಿಯ ಅನುಸಾರ ವಿಮಾ ಕಂಪನಿ ಸಂತ್ರಸ್ತರಿಗೆ ಪರಿಹಾರ ಪಾವತಿಸಿ ನಂತರ ವಾಹನ ಮಾಲೀಕರಿಂದ ವಸೂಲಿ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರು (ಜ.30): ರಸ್ತೆ ಅಪಘಾತದಲ್ಲಿ ವಾಹನ ಚಾಲಕ ಮೃತಪಟ್ಟಾಗ ಘಟನೆ ವೇಳೆ ಆತ ಚಾಲನಾ ಪರವಾನಗಿ ಹೊಂದಿರುವುದು ಸಾಬೀತಾಗದ ಸಂದರ್ಭದಲ್ಲಿ ‘ಪಾವತಿ ಮತ್ತು ವಸೂಲಾತಿ’ ನೀತಿಯ ಅನುಸಾರ ವಿಮಾ ಕಂಪನಿ ಸಂತ್ರಸ್ತರಿಗೆ ಪರಿಹಾರ ಪಾವತಿಸಿ ನಂತರ ವಾಹನ ಮಾಲೀಕರಿಂದ ವಸೂಲಿ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟ ಲಾರಿ ಚಾಲಕನಿಗೆ ಪರಿಹಾರ ಪಾವತಿಯ ಹೊಣೆಯನ್ನು ತನಗೆ ಹೊರಿಸಿದ ಚಿತ್ರದುರ್ಗದ ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕರ ಪರಿಹಾರ ಆಯುಕ್ತರ ಆದೇಶ ಪ್ರಶ್ನಿಸಿ ವಿಮಾ ಕಂಪನಿಯೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರ ಪೀಠ ಈ ಆದೇಶ ನೀಡಿದೆ.
ಐತಿಹಾಸಿಕ ಜುಮ್ಮಾ ಮಸೀದಿಯಲ್ಲಿ ಅನಧಿಕೃತ ಮದರಸಾ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಮೃತರ ಚಾಲನಾ ಪರವಾನಗಿ ಅಪಘಾತ ಸಂಭವಿಸಿದ ಸ್ಥಳದಲ್ಲಿ ಪತ್ತೆಯಾಗಿಲ್ಲ ಮತ್ತು ಚಾಲಕ ಅಧಿಕೃತ ಚಾಲನಾ ಪರವಾನಗಿ ಹೊಂದಿರುವ ಬಗ್ಗೆ ಯಾವುದೇ ಸಾಕ್ಷ್ಯ ಒದಗಿಸಿಲ್ಲ. ಚಾಲನಾ ಪರವಾನಗಿ ಇಲ್ಲದೆಯೇ ಲಾರಿ ಚಲಾಯಿಸಲು ಚಾಲಕನಿಗೆ ಅನುಮತಿಸಿರುವುದು ಮಾಲೀಕನ ತಪ್ಪಾಗಿದೆ. ಹಾಗಾಗಿ, ಪ್ರಕರಣದ ಸಂತ್ರಸ್ತರಿಗೆ ಪರಿಹಾರ ಪಾವತಿಸುವ ಹೊಣೆ ಲಾರಿ ಮಾಲೀಕನ ಮೇಲಿರುತ್ತದೆ ಎಂದು ವಿಮಾ ಕಂಪನಿಯ ಪರ ವಕೀಲರು ವಾದ ಮಂಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಸ್ತುತ ಪ್ರಕರಣದಲ್ಲಿ ಲಾರಿ ಮಾಲೀಕ ಮತ್ತು ಮೃತ ಚಾಲಕನ ನಡುವೆ ಉದ್ಯೋಗದಾತ -ಉದ್ಯೋಗಿ ಸಂಬಂಧವಿರುವುದು ದೃಢಪಟ್ಟಿದೆ. ಮೃತ ಚಾಲನಾ ಪರವಾನಗಿ ಹೊಂದಿದ್ದ ಎಂಬುದಾಗಿ ಆತನ ಕುಟುಂಬದ ಸದಸ್ಯರು ಹೇಳುತ್ತಾರೆ. ಆದರೆ, ಅದಕ್ಕೆ ಯಾವುದೇ ಪುರಾವೆ ಒದಗಿಸಿಲ್ಲ. ಮೃತರು ಚಾಲನಾ ಪರವಾನಗಿ ಹೊಂದಿರುವುದು ಸಾಬೀತಾಗದ ವೇಳೆ ಪಾವತಿ ಮತ್ತು ವಸೂಲಾತಿ ನೀತಿಯನ್ನು ಅನ್ವಯಿಸಬಹುದು. ಅದರಂತೆ ಪರಿಹಾರ ಮೊತ್ತವನ್ನು ಮೊದಲು ಲಾರಿಗೆ ವಿಮೆ ಸೌಲಭ್ಯ ಕಲ್ಪಿಸಿದ್ದ ಕಂಪನಿ ಪಾವತಿಸಬೇಕು. ನಂತರ ಆ ಮೊತ್ತವನ್ನು ಲಾರಿ ಮಾಲೀಕನಿಂದ ವಸೂಲಿ ಮಾಡಬೇಕು ಎಂದು ಆದೇಶಿಸಿದೆ.
ರಸ್ತೆ ಒತ್ತುವರಿ ಮಾಡಿ ದೇವಾಲಯ, ಮಸೀದಿ, ಚರ್ಚ್ ನಿರ್ಮಿಸಿದರೆ ಜನರು ಏನು ಮಾಡಬೇಕು?: ಬಿಬಿಎಂಪಿಗೆ ಹೈಕೋರ್ಟ್ ತರಾಟೆ
ಪ್ರಕರಣದ ವಿವರ:
ಎಸ್.ಎಂ.ನೂರುದ್ದೀನ್ ಒಡೆತನದ ಲಾರಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಫೌಸ್, 2008ರಲ್ಲಿ ಚಿತ್ರದುರ್ಗದ ಅಡಕಮಾರನಹಳ್ಳಿ ಬಳಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮೃತನ ಕುಟುಂಬದವರಿಗೆ ವಾರ್ಷಿಕ ಶೇ.12ರಷ್ಟು ಬಡ್ಡಿದರಲ್ಲಿ 4,23,580 ರು. ಪರಿಹಾರ ಪಾವತಿಸುವಂತೆ ವಿಮಾ ಕಂಪನಿಗೆ ನಿರ್ದೇಶಿಸಿದ್ದರು. ಅದನ್ನು ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.