ರಾಜ್ಯದಲ್ಲಿ ಕನ್ನಡ, ರೈತ, ದಲಿತ, ವಿದ್ಯಾರ್ಥಿ ಚಳವಳಿ, ಹೋರಾಟಗಳು ಎಂದರೆ ಆಳುವ ಸರ್ಕಾರಗಳೇ ನಡುಗುತ್ತಿದ್ದ ಕಾಲವಿತ್ತು. ಆದರೆ, ಹೋರಾಟಗಾರರ ಮೇಲೆ ದಾಖಲಾಗುವ ಪ್ರಕರಣಗಳ ಸಂಖ್ಯೆ ಹೆಚ್ಚಿದಂತೆ, ನ್ಯಾಯಾಲಯಗಳಿಗೆ ಅಲೆಯುವುದು ದುಬಾರಿಯಾದಂತೆ ಕೆಲ ದಶಕಗಳಿಂದೀಚೆಗೆ ಹೋರಾಟಗಳ ಪ್ರಮಾಣ, ತೀವ್ರತೆ ಹಾಗೂ ಪಾಲ್ಗೊಳ್ಳುವವರ ಸಂಖ್ಯೆಯೂ ಕುಸಿಯುತ್ತಿದೆ.
ಲಿಂಗರಾಜು ಕೋರ
ಬೆಂಗಳೂರು (ಜ.2) : ರಾಜ್ಯದಲ್ಲಿ ಕನ್ನಡ, ರೈತ, ದಲಿತ, ವಿದ್ಯಾರ್ಥಿ ಚಳವಳಿ, ಹೋರಾಟಗಳು ಎಂದರೆ ಆಳುವ ಸರ್ಕಾರಗಳೇ ನಡುಗುತ್ತಿದ್ದ ಕಾಲವಿತ್ತು. ಆದರೆ, ಹೋರಾಟಗಾರರ ಮೇಲೆ ದಾಖಲಾಗುವ ಪ್ರಕರಣಗಳ ಸಂಖ್ಯೆ ಹೆಚ್ಚಿದಂತೆ, ನ್ಯಾಯಾಲಯಗಳಿಗೆ ಅಲೆಯುವುದು ದುಬಾರಿಯಾದಂತೆ ಕೆಲ ದಶಕಗಳಿಂದೀಚೆಗೆ ಹೋರಾಟಗಳ ಪ್ರಮಾಣ, ತೀವ್ರತೆ ಹಾಗೂ ಪಾಲ್ಗೊಳ್ಳುವವರ ಸಂಖ್ಯೆಯೂ ಕುಸಿಯುತ್ತಿದೆ. ಇದಕ್ಕೆ ಮೂಲ ಕಾರಣ, ಹೋರಾಟಗಾರರಲ್ಲಿ ಸಮನ್ವಯತೆ, ಒಗ್ಗಟ್ಟಿಲ್ಲದೆ ಸಂಘಟನೆಗಳು ಒಡೆದು ಹಲವು ಹೋಳಾಗಿರುವುದು.
ಏಕೀಕರಣೋತ್ತರ ಕರ್ನಾಟಕವನ್ನು ಪ್ರಗತಿ ಪರವಾಗಿ ರೂಪಿಸಲು ಬೌದ್ಧಿಕ ಹಾಗೂ ಭೌತಿಕ ಈ ಎರಡು ನೆಲೆಗಳಲ್ಲೂ ನಡೆಸಿದ ಚಳವಳಿಗಳನ್ನು ಕನ್ನಡ ಚಳವಳಿ ಎಂದು ಗುರುತಿಸಲಾಗುತ್ತದೆ. ಕರ್ನಾಟಕದಲ್ಲಿ 1980ರ ಪ್ರಾರಂಭದಲ್ಲಿ ಹುಟ್ಟಿದ ರೈತ ಚಳವಳಿ ರಾಜ್ಯದ ರೈತರ ಪಾಲಿಗೆ ಹೊಸ ಸೂರ್ಯ ಉದಯಿಸಿದಂತಾಯಿತು. ಬಿ.ಬಸವಲಿಂಗಪ್ಪನವರ ಬೂಸಾ ಗಲಾಟೆಯಿಂದ ಕರ್ನಾಟಕದಲ್ಲಿ ನಿಜವಾದ ದಲಿತ ಚಳವಳಿ ಆರಂಭವಾಯಿತು. ಅದೇ ರೀತಿ ವಿದ್ಯಾರ್ಥಿ ಚಳವಳಿ, ಕಾರ್ಮಿಕರ ಮುಷ್ಕರಗಳು 70-90ರ ದಶಕದಲ್ಲಿ ಮುಗಿಲು ಮುಟ್ಟುವಂತಿದ್ದವು. ಜೊತೆ ಜೊತೆಯಾಗಿ ಸಾಗುತ್ತಿದ್ದ ಚಳವಳಿಗಳಿಗೆ ಸರ್ಕಾರಗಳಲ್ಲಿ ನಡುಕ ಹುಟ್ಟುತ್ತಿದ್ದವು.
ಹೋರಾಟಗಾರರು ಹೇಳುವ ಪ್ರಕಾರ, ಕನ್ನಡ ಭಾಷೆ, ಕನ್ನಡಿಗರ ಸ್ವಂತಿಕೆ, ಸ್ವಾಭಿಮಾನಕ್ಕೆ ಅನ್ಯಾಯವಾದರೆ, ದಬ್ಬಾಳಿಕೆಗಳು ನಡೆದರೆ ಕನ್ನಡಪರ ಸಂಘಟನೆಗಳು ಕರೆ ನೀಡಿದ ಪ್ರತಿಭಟನೆ, ಬಂದ್ ಸೇರಿದಂತೆ ಯಾವುದೇ ಪ್ರಕಾರದ ಹೋರಾಟಕ್ಕೆ ಹಳ್ಳಿಗಾಡಿನಿಂದ ರೈತರು, ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳು, ಕೆಲಸ ಬಿಟ್ಟು ಕಾರ್ಮಿಕರು, ದಲಿತರು, ಜೊತೆಗೆ ಸಾಹಿತಿಗಳು ಎಲ್ಲರೂ ಬೆಂಬಲಿಸಿ ಭಾರೀ ಸಂಖ್ಯೆಯಲ್ಲಿ ಜನ ಬೆಂಬಲ ದೊರೆಯುತ್ತಿತ್ತು.
ನನ್ನನ್ನು ಒಳಗೆ ಕಳಿಸಲು ಬಿಜೆಪಿ ನಾಯಕರಿಂದ ಷಡ್ಯಂತ್ರ, ನಾನು ಜೈಲಿಗೆ ಹೋಗಲು ಸಿದ್ಧ ಎಂದ ಡಿಕೆಶಿ
ಅದೇ ರೀತಿ ರೈತರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಬೀದಿಗಿಳಿದರೆ ಎಲ್ಲ ಸಂಘಟನೆಗಳೂ ಬೆಂಬಲ ನೀಡುತ್ತಿದ್ದವು. ಹೀಗೆ ಯಾರೇ ಹೋರಾಟಕ್ಕೆ ಕರೆಕೊಟ್ಟರೂ ಎಲ್ಲರೂ ಬೆಂಬಲ ನೀಡುವ ಸಹಕಾರ, ಸಮನ್ವಯ ಹಾಗೂ ಒಗ್ಗಟ್ಟಿನ ಮನೋಭಾವ ಗಟ್ಟಿಯಾಗಿತ್ತು. ಈಗ ಎಲ್ಲ ರೀತಿಯ ಸಂಘಟನೆಗಳೂ ಹತ್ತಾರು ಭಾಗಗಳಾಗಿರುವುದರಿಂದ ಒಗ್ಗಟ್ಟು ಕುಂದಿದೆ ಎನ್ನುತ್ತಾರೆ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್.
ಈ ಹೋರಾಟಗಳ ತೀವ್ರತೆ ಹೇಗಿರುತ್ತಿತ್ತು ಎಂದರೆ ಒಂದು ವೇಳೆ ಸರ್ಕಾರ ಹೋರಾಟಗಾರರನ್ನು ಬಂಧಿಸಿದರೂ ರಾಜ್ಯದಲ್ಲಿರುತ್ತಿದ್ದ ಜೈಲುಗಳು ಸಾಲುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಬಡವ, ಶ್ರೀಮಂತರ, ಜಾತಿ, ಧರ್ಮ ಎನ್ನದೆ ಎಲ್ಲ ವರ್ಗದ ಜನರೂ ಹರಿದು ಬರುತ್ತಿದ್ದರು. ಆದರೆ, ಈಗ ಶ್ರೀಮಂತರು ಹೆಚ್ಚಾಗಿ ಹೋರಾಟಗಳಿಗೆ ಬರುತ್ತಿಲ್ಲ. ಹೋರಾಟಕ್ಕೆ ಬರುವವರೆಲ್ಲ ಬಡವರು, ಆಟೋ ಚಾಲಕರು, ಕ್ಯಾಬ್ ಡ್ರೈವರ್‌ಗಳೇ ಹೆಚ್ಚು. ಅಪ್ಪಿ ತಪ್ಪಿ ಅವರ ಮೇಲೇನಾದರೂ ಪ್ರಕರಣಗಳು ದಾಖಲಾದರೆ ಮುಗಿಯಿತು, ಪೊಲೀಸರ ಕಾಟ, ನ್ಯಾಯಾಲಯಗಳಿಗೆ ಅಲೆಯುವುದರಲ್ಲೇ ಅವರ ಜೀವನ ಮುಗಿಯುತ್ತದೆ. ಬಲ್ಲವರೇ ಬಲ್ಲ ಅವರ ನೋವು ಎನ್ನುವಂತಾಗುತ್ತದೆ ಎನ್ನುತ್ತಾರೆ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ.
ಇನ್ನು, ಏಕೀಕರಣದ ಹೋರಾಟ ಕಾಲದಿಂದಲೂ ರಾಜ್ಯದಲ್ಲಿ ಆಡಳಿತ ನಡೆಸಿದ ಸರ್ಕಾರಗಳಿಗೆ ಕನ್ನಡಪರ ಹೋರಾಟಗಾರರು ಸೇರಿದಂತೆ ಎಲ್ಲ ಹೋರಾಟಗಾರರ ಮೇಲೆ ಸಹಾನುಭೂತಿ ತೋರುತ್ತಿದ್ದವು. ಅಧಿಕಾರಕ್ಕೆ ಬಂದ ಬಳಿಕ ಅವರ ವಿರುದ್ಧದ ಎಲ್ಲ ಪ್ರಕರಣಗಳನ್ನು ಹಿಂಪಡೆಯುತ್ತಿದ್ದವು. ನಾಡು, ನುಡಿ, ನೆಲ, ಜಲದ ರಕ್ಷಣೆ, ರೈತರ ಹಿತಾಸಕ್ತಿ ಕಾಪಾಡಲು ಕೇಂದ್ರದ ಮೇಲೆ ಯೋಜನೆಗಳಿಗಾಗಿ ಒತ್ತಡ ಹಾಕುವುದು ಸೇರುವಂತಹ ಕೆಲಸಗಳಿಗೆ ಹೋರಾಟಗಳು, ಸಂಘಟನೆಗಳು ಬಹಳ ಮುಖ್ಯ ಎಂಬುದನ್ನು ಆಳುವವರು ಮನಗಂಡಿದ್ದರು.
ಕಾಂಗ್ರೆಸ್‌ನಿಂದ ಸ್ಪರ್ಧೆ ಸುಳ್ಳು; ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡೋಲ್ಲ: ಸೋಮಣ್ಣ ಸ್ಪಷ್ಟನೆ
ಆದರೆ, ಸ್ವಾರ್ಥ ರಾಜಕಾರಣ, ರಾಜಕಾರಣಿಗಳಲ್ಲಿ ಅಧಿಕಾರದ ಹಂಬಲ ಹೆಚ್ಚಾದಂತೆ ಸಂಘಟನೆಗಳನ್ನು ಒಡೆದು, ಹೋರಾಟಗಾರರನ್ನು ಛಿದ್ರಗೊಳಿಸಿದ್ದಾರೆ. ರಾಜಕೀಯೇತರವಾಗಿದ್ದ ಹೋರಾಟಗಾರರು ಇಂದು ಒಂದಲ್ಲಾ ಒಂದು ಪಕ್ಷದ ಬೆಂಬಲಿಗರಾಗಿದ್ದಾರೆ. ಇದರಿಂದ ಹೋರಾಟಗಳು ಶಕ್ತಿ ಕಳೆದುಕೊಂಡು ಸರ್ಕಾರಗಳಿಗೂ ಭಯವಿಲ್ಲದಂತಾಗಿದೆ. ವರ್ಷದಿಂದ ವರ್ಷಕ್ಕೆ ಸಂಘಟನೆಗಳು, ಹೋರಾಟಗಾರರನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರಗಳು ಮಾಡುತ್ತಲೇ ಬರುತ್ತಿವೆ ಎನ್ನುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರ ಅಭಿಪ್ರಾಯ.
ತಮ್ಮ ರಾಜಕೀಯ ಹಿತಾಸಕ್ತಿಗೆ ಸಂಘಟನೆಗಳು, ಹೋರಾಟಗಾರರನ್ನು ಛಿದ್ರಗೊಳಿಸಿರುವ ರಾಜಕಾರಣಿಗಳು ಬೆಲೆ ತೆರಬೇಕಾದ ಕಾಲವೂ ಬರುತ್ತದೆ. ಅವರ ಈ ಸ್ವಾರ್ಥ ರಾಜಕಾರಣದಿಂದ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾಡಿ ಎಂದು ಕೇಳುವ ಮಟ್ಟಕ್ಕೆ ಹೊರರಾಜ್ಯದವರು ಬಂದಿದ್ದಾರೆ. ಮುಂದೆ ಒಬ್ಬ ಸಿಂಧಿ, ಮಾರ್ವಾಡಿ, ಗುಜರಾತಿಗಳು ಶಾಸಕರಾಗಿ ಆಯ್ಕೆಯಾಗುವ ಸ್ಥಿತಿ ಬಂದಾಗ ಹೋರಾಟಗಾರರ ಬೆಲೆ ತಿಳಿಯುತ್ತದೆ. ಐಎಎಸ್, ಐಪಿಎಸ್ ಅಧಿಕಾರಿಗಳ ತಾಳಕ್ಕೆ ತಕ್ಕಂತೆ ತಲೆಯಾಡಿಸುವುದನ್ನು ಬಿಟ್ಟು ಈಗಲಾದರೂ ನಮ್ಮ ರಾಜಕಾರಣಿಗಳು ಪಕ್ಷಾತೀತವಾಗಿ ಹೋರಾಟಗಾರರ ರಕ್ಷಣೆಗೆ ಬರಬೇಕು.
- ಟಿ.ಎ.ನಾರಾಯಣಗೌಡ, ಕರವೇ ರಾಜ್ಯಾಧ್ಯಕ್ಷ
ಹೋರಾಟಗಳು ಸ್ವಾರ್ಥ, ರಾಜಕೀಯ ಪ್ರೇರಿತವಾದ ಹಾಗೆಲ್ಲಾ ಒಡಕು, ಕೆಡುಕುಗಳು ಹೆಚ್ಚಾಗುತ್ತಾ ಹೋಗಿವೆ. ಯಾವುದೇ ಹೋರಾಟಗಾರರಾಗಲಿ, ಸಂಘಟನೆಗಳ ಮುಖಂಡರಾಗಲಿ ಈಗಲೂ ಸ್ವಾರ್ಥ, ರಾಜಕೀಯ ಎರಡನ್ನು ಬಿಟ್ಟು ನಾಡಿನ ಜನರ, ರೈತರ, ಕಾರ್ಮಿಕರ, ದಲಿತರ ಪರವಾಗಿ ನೈಜ ಹೋರಾಟಗಳ ವೇದಿಕೆಯಲ್ಲಿ ಎಲ್ಲರೂ ಒಂದಾಗುವ, ಒಗ್ಗೂಡುವ ಅವಕಾಶಗಳಿವೆ. ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿರುವ ವ್ಯಕ್ತಿಗಳು ಸಾಮೂಹಿಕ ನಿರ್ಧಾರ, ಅಭಿಪ್ರಾಯಗಳಿಗೆ ಬೆಲೆ ಕೊಟ್ಟಾಗ ಯಶಸ್ಸು ಸಿಗುತ್ತದೆ. ಇಲ್ಲದಿದ್ದರೆ ರಾಜಕೀಯ ಪಕ್ಷಗಳು ಹೋರಾಟಗಾರರನ್ನು, ಸಂಘಟನೆಗಳನ್ನು ಇನ್ನಷ್ಟು ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಲೇ ಇರುತ್ತವೆ.
- ಕುರುಬೂರು ಶಾಂತಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ
