ನನ್ನನ್ನು ಒಳಗೆ ಕಳಿಸಲು ಬಿಜೆಪಿ ನಾಯಕರಿಂದ ಷಡ್ಯಂತ್ರ, ನಾನು ಜೈಲಿಗೆ ಹೋಗಲು ಸಿದ್ಧ ಎಂದ ಡಿಕೆಶಿ
: ‘ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸಿಬಿಐ ತನಿಖೆ ಅನುಮತಿಯನ್ನು ಹಿಂಪಡೆದಿದ್ದರೂ ಕಿರುಕುಳ ಮುಂದುವರೆದಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ನಾಯಕರಿಂದ ಪಿತೂರಿ ನಡೆಯುತ್ತಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು (ಜ.2) : ‘ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸಿಬಿಐ ತನಿಖೆ ಅನುಮತಿಯನ್ನು ಹಿಂಪಡೆದಿದ್ದರೂ ಕಿರುಕುಳ ಮುಂದುವರೆದಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ನಾಯಕರಿಂದ ಪಿತೂರಿ ನಡೆಯುತ್ತಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೇರಳ ಮೂಲದ ಜೈಹಿಂದ್ ವಾಹಿನಿ ವ್ಯವಸ್ಥಾಪಕ ನಿರ್ದೇಶಕರಿಗೆ ಸಿಬಿಐ ನೋಟಿಸ್ ನೀಡಿ ತಮ್ಮ ಹೂಡಿಕೆ ಬಗ್ಗೆ ಮಾಹಿತಿ ಕೇಳಿರುವ ಬಗ್ಗೆ ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿಯ ಷಡ್ಯಂತ್ರ ಮಾಡಿ ನನ್ನನ್ನು ಜೈಲಿಗೆ ಹಾಕಿಸುವ ಉದ್ದೇಶವಿದ್ದರೆ, ಅದನ್ನು ಮಾಡಲಿ. ನಾನು ಸಿದ್ಧವಿದ್ದೇನೆ ಎಂದೂ ಹೇಳಿದರು.
ಕಾಂಗ್ರೆಸ್‌ನಿಂದ ಸ್ಪರ್ಧೆ ಸುಳ್ಳು; ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡೋಲ್ಲ: ಸೋಮಣ್ಣ ಸ್ಪಷ್ಟನೆ
‘ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದ ನಂತರವೂ ಸಿಬಿಐನವರು ಸಬ್ ರಿಜಿಸ್ಟ್ರಾರ್ ಕಚೇರಿ, ಸರ್ಕಾರಿ ಕಚೇರಿ, ಸಹಕಾರಿ ಸೊಸೈಟಿ, ನಾನು ಅಧ್ಯಕ್ಷನಾಗಿರುವ ಸಂಸ್ಥೆ ಸೇರಿದಂತೆ ಅನೇಕರಿಗೆ ನೋಟಿಸ್ ಕೊಟ್ಟಿದ್ದಾರೆ. ಯಾವ ಲೆಕ್ಕಾಚಾರದ ಮೇಲೆ ಈ ನೋಟಿಸ್ ಕೊಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಅವರ ಉದ್ದೇಶ ಏನು ಎಂಬುದು ಗೊತ್ತಿಲ್ಲ. ಆದರೆ ಮೇಲ್ನೋಟಕ್ಕೆ ಅವರು ನನಗೆ ಹಾಗೂ ಪಕ್ಷಕ್ಕೆ ತೊಂದರೆ ನೀಡಲು ದೊಡ್ಡ ಷಡ್ಯಂತ್ರ ನಡೆಸುತ್ತಿರುವಂತೆ ಕಾಣುತ್ತದೆ’ ಎಂದರು.
ಸಿಬಿಐ ಅಧಿಕಾರಿಗಳಿಗೆ ನಾನು ಎಲ್ಲ ದಾಖಲೆ ನೀಡಿದ್ದೆ. ಅವರು ಶೇ.10ರಷ್ಟು ಕೂಡ ತನಿಖೆ ಮಾಡಿರಲಿಲ್ಲ. ಆದರೆ ನ್ಯಾಯಾಲಯದಲ್ಲಿ ಶೇ.90ರಷ್ಟು ತನಿಖೆ ಮುಗಿದಿದೆ ಎಂದು ಹೇಳಿದ್ದರು. ಯಾವ ಲೆಕ್ಕಾಚಾರದಲ್ಲಿ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಅವರು ಏನಾದರೂ ಮಾಡಲಿ. ನನ್ನನ್ನು ಒಳಗೆ ಹಾಕಿಸುವ ಆಸೆ ಇದ್ದರೆ ಹಾಕಿಸಲಿ. ನಾನು ಸಿದ್ಧನಿದ್ದೇನೆ ಎಂದರು.
ಸಿಬಿಐ ತನಿಖೆಯನ್ನು ರಾಜ್ಯ ಸರ್ಕಾರ ಲೋಕಾಯುಕ್ತಕ್ಕೆ ಹಸ್ತಾಂತರ ಮಾಡಿದೆ. ಸಿಬಿಐಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಹೈಕೋರ್ಟ್ ಒಪ್ಪಿದ್ದರೂ ಸಿಬಿಐ ಯಾಕೆ ನೊಟೀಸ್ ನೀಡುತ್ತಿದೆ ಎಂಬುದು ಗೊತ್ತಿಲ್ಲ. ಅವರ ಬಳಿ ನನ್ನ ಎಲ್ಲಾ ದಾಖಲೆಗಳು ಇವೆ. ಲೋಕಾಯುಕ್ತಕ್ಕೆ ಪ್ರಕರಣ ಹಸ್ತಾಂತರವಾಗಿರುವ ಹಿನ್ನೆಲೆಯಲ್ಲಿ ಈ ಎಲ್ಲ ದಾಖಲೆಗಳನ್ನು ಸಿಬಿಐನವರು ಲೋಕಾಯುಕ್ತಕ್ಕೆ ನೀಡಬೇಕಿದೆ ಎಂಬುದು ನನಗಿರುವ ಕಾನೂನಿನ ಅರಿವು ಎಂದು ಹೇಳಿದರು.
ಕೊನೆಗೆ ನನಗೆ ನೋಟಿಸ್ ನೀಡುತ್ತಾರೆ:
ನನ್ನ ಸಂಸ್ಥೆ, ನನ್ನ ಹೆಂಡತಿ, ಮಕ್ಕಳು, ಕುಟುಂಬದ ಸದಸ್ಯರು, ನನ್ನ ಸ್ನೇಹಿತರು ಸೇರಿದಂತೆ ಹಲವರಿಂದ ಮಾಹಿತಿ ಕೇಳುತ್ತಿದ್ದಾರೆ. ಮೊದಲು ಈ ರೀತಿ ಮಾಡಿ ನಂತರ ಅವರು ನನಗೆ ನೇರವಾಗಿ ನೊಟೀಸ್ ನೀಡುತ್ತಾರೆ. ನನ್ನನ್ನು ಜೈಲಿಗೆ ಕಳಿಸುವ ಬಗ್ಗೆ ಅನೇಕ ಬಿಜೆಪಿ ನಾಯಕರು ಹಿಂದೆ ಹೇಳಿದ್ದರು. ಬಹಳಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಲು ಆಹ್ವಾನ ನೀಡಿದ್ದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಅವರು ಏನಾದರೂ ಮಾಡಿಕೊಳ್ಳಲಿ. ನನಗೆ ಎಲ್ಲಿ ನ್ಯಾಯ ಸಿಗಬೇಕೋ ಅಲ್ಲಿ ಸಿಗುತ್ತದೆ ಎಂದು ತಿಳಿಸಿದರು.
ಅಹ್ಮದ್ ಪಟೇಲ್ ಹೋದರೂ ನನಗೆ ಕಿರುಕುಳ ತಪ್ಪಿಲ್ಲ:
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ರೀತಿ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ಅಹ್ಮದ್ ಪಟೇಲ್ ಅವರ ರಾಜ್ಯಸಭೆ ಚುನಾವಣೆ ಕಾರಣ ನನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಅಹ್ಮದ್ ಪಟೇಲ್ ಅವರೇ ಇಂದು ನಮ್ಮ ಜತೆ ಇಲ್ಲ. ಆದರೂ ನನಗೆ ಕಿರುಕುಳ ಮುಂದುವರೆಸಿದ್ದಾರೆ. ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದು ಗೊತ್ತು. ಕಾನೂನು ಇದೆ, ನನ್ನ ಕೊನೆಯುಸಿರು ಇರುವವರೆಗೂ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.
ಬೆಂಗಳೂರು: ಅಟೋ ರೀಕ್ಷಾ ಕಳ್ಳತನ, ಮಾರಾಟ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಖದೀಮರ ಬಂಧನ
ನನ್ನನ್ನು ಜೈಲಿಗೆ ಕಳಿಸುವ ಬಗ್ಗೆ ಅನೇಕ ಬಿಜೆಪಿ ನಾಯಕರು ಹಿಂದೆ ಹೇಳಿದ್ದರು. ನನ್ನನ್ನು ಒಳಗೆ ಹಾಕಿಸುವ ಆಸೆ ಇದ್ದರೆ ಹಾಕಿಸಲಿ. ನಾನು ಸಿದ್ಧನಿದ್ದೇನೆ.
- ಡಿ.ಕೆ.ಶಿವಕುಮಾರ್, ಡಿಸಿಎಂ