ನರೇಗಾ ದಂಡದ ಲೆಕ್ಕ ಸರ್ಕಾರದ ಬಳಿಯೇ ಇಲ್ಲ: ಅನುಷ್ಠಾನ ವೇಳೆ ಲೋಪವೆಸಗಿದವರಿಗೆ 1000 ರು. ದಂಡ ಹೇರಿಕೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ(ನರೇಗಾ) ಯೋಜನೆಯಡಿ ಕಾಮಗಾರಿ ಅನುಷ್ಠಾನಗೊಳಿಸುವಲ್ಲಿ ಲೋಪ ಎಸಗುವ ಸಿಬ್ಬಂದಿಗೆ ತಲಾ ಸಾವಿರ ರು. ದಂಡ ವಿಧಿಸಲಾಗುತ್ತದೆ. 

The Government Does Not Have The Account of Narega Penalty gvd

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ನ.04): ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ(ನರೇಗಾ) ಯೋಜನೆಯಡಿ ಕಾಮಗಾರಿ ಅನುಷ್ಠಾನಗೊಳಿಸುವಲ್ಲಿ ಲೋಪ ಎಸಗುವ ಸಿಬ್ಬಂದಿಗೆ ತಲಾ ಸಾವಿರ ರು. ದಂಡ ವಿಧಿಸಲಾಗುತ್ತದೆ. ಆದರೆ, ದಂಡ ವಿಧಿಸಿದ ಮಾಹಿತಿಯು ಬಳ್ಳಾರಿ ಮತ್ತು ಗದಗ ಜಿಲ್ಲೆ ಹೊರತುಪಡಿಸಿ ಬೇರೆ ಯಾವ ಜಿಲ್ಲೆಯಿಂದಲೂ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯಕ್ಕೆ ಸಲ್ಲಿಕೆಯೇ ಆಗಿಲ್ಲ! ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸುವ ಕಾಮಗಾರಿಗಳಿಗೆ ಸಾಮಗ್ರಿ ವೆಚ್ಚದ ಎಫ್‌ಟಿಒ(ಫಂಡ್‌ ಟ್ರಾನ್ಸ್‌ಫರ್‌ ಆರ್ಡರ್‌)ಗಳು ತಿರಸ್ಕೃತವಾಗಲು ಕಾರಣರಾದ ಗ್ರಾಮ ಪಂಚಾಯ್ತಿ ಮತ್ತು ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಲಾ ಒಂದು ಸಾವಿರ ರುಪಾಯಿಯಂತೆ ದಂಡ ವಿಧಿಸಲಾಗುತ್ತದೆ. 

ದಂಡ ವಿಧಿಸಿದ ಬಗ್ಗೆ ಸೇವಾ ಪುಸ್ತಕ(ಸರ್ವೀಸ್‌ ರೆಕಾರ್ಡ್‌)ದಲ್ಲೂ ದಾಖಲಿಸಬೇಕು. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯಕ್ಕೆ ಪ್ರತಿ ವಾರ ಕಡ್ಡಾಯವಾಗಿ ವರದಿ ಸಲ್ಲಿಸಬೇಕು. ಹೀಗೆ ದಂಡ ವಿಧಿಸಿದ ಮಾಹಿತಿಯನ್ನು ಸಲ್ಲಿಸಿ ಎಂದು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ(ಸಿಇಒ)ಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು ಪತ್ರ ಬರೆದಿದ್ದರೂ ಬಳ್ಳಾರಿ ಮತ್ತು ಗದಗ ಜಿಲ್ಲೆ ಹೊರತುಪಡಿಸಿ ಬೇರೆ ಯಾವ ಜಿಲ್ಲೆಯವರೂ ‘ಕ್ಯಾರೇ’ ಎಂದಿಲ್ಲ.

ಮುಸ್ಲಿಂ ಮಕಾನ್ ಆಗಿದ್ದ ಮಂಡ್ಯ ಸರ್ಕಾರಿ ಸ್ಮಶಾನ: ಗ್ರಾಮಸ್ಥರ ಹೋರಾಟ

ಯಾವ್ಯಾವ ತಪ್ಪಿಗೆ ದಂಡ?: ಮೊದಲ ಹಂತದ ಜಿಯೋ ಟ್ಯಾಗ್‌ ಫೋಟೋದಲ್ಲಿ ಸಾರ್ವಜನಿಕ ಮಾಹಿತಿ ಫಲಕ ಇಲ್ಲದಿರುವುದು, ಮಾಹಿತಿ ಫಲಕಗಳಲ್ಲಿ ಕಾಮಗಾರಿಗೆ ಸಂಬಂಧಿಸಿದ ಮಾಹಿತಿ ನಮೂದಿಸದಿರುವುದು, ಒಂದೇ ಕಾಮಗಾರಿಯ ಮಾಹಿತಿ ಫಲಕವನ್ನು ಬೇರೆ ಬೇರೆ ಕಾಮಗಾರಿಗೆ ಅಳವಡಿಸಿ ಜಿಯೋ ಟ್ಯಾಗ್‌ ಮಾಡಿರುವುದು. ಕಾಮಗಾರಿ ಆರಂಭಕ್ಕಿಂತ ಮುನ್ನ ಮೊದಲ ಹಂತದ ಜಿಯೋ ಟ್ಯಾಗ್‌ ಫೋಟೋ, ಕಾಮಗಾರಿ ಪ್ರಗತಿಯಲ್ಲಿದ್ದಾಗ ಎರಡನೇ ಹಂತದ ಫೋಟೋ, ಆಸ್ತಿ ಸೃಜನೆಯಾದ ಬಳಿಕ ಮೂರನೇ ಹಂತದ ಜಿಯೋ ಟ್ಯಾಗ್‌ ಫೋಟೋ ತೆಗೆಯಬೇಕು. 

ಆದರೆ, ಒಂದೇ ಫೋಟೋವನ್ನು ಕಾಮಗಾರಿಯ ಮೂರೂ ಹಂತದಲ್ಲಿ ಅಪ್‌ಲೋಡ್‌ ಮಾಡಿರುವುದು. ಬಹಳಷ್ಟು ಕಾಮಗಾರಿಗಳ ಮೂರನೇ ಹಂತದ ಜಿಯೋ ಟ್ಯಾಗ್‌ ಫೋಟೋದಲ್ಲಿ ಸೃಜನೆಯಾದ ಆಸ್ತಿ ಕಂಡುಬರದಿರುವುದು. ಕಾಮಗಾರಿಗಳ ಅಂದಾಜು ಪತ್ರಿಕೆಯಲ್ಲಿ ನಮೂದಿಸಲಾದ ಚಟುವಟಿಕೆಗಳಿಗೆ ಬದಲಾಗಿ ಎಂಐಎಸ್‌ನಲ್ಲಿ ಬೇರೆ ಚಟುವಟಿಕೆಗಳಿಗೆ ಹಣ ಪಾವತಿಸಿರುವುದು, ಅಂದಾಜು ವೆಚ್ಚಕ್ಕಿಂತ ಹೆಚ್ಚಿನ ಮೊತ್ತ ಪಾವತಿಸಿರುವುದು, ಅಂದಾಜು ಪಟ್ಟಿಯಲ್ಲಿ ನಿರ್ಧಿಷ್ಟ ಚಟುವಟಿಕೆಗೆ ಮೀಸಲಿರಿಸಿದ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ಪಾವತಿಸಿರುವುದು, ಅನುಮೋದಿತ ಅಂದಾಜು ಪಟ್ಟಿಯಲ್ಲಿ ನಮೂದಿಸದೇ ಇರುವ ಚಟುವಟಿಕೆಗಳಿಗೆ ಹಣ ಪಾವತಿಸಿರುವುದಕ್ಕೆ ದಂಡ ವಿಧಿಸಲಾಗುವುದು.

ರೈತರಿಗೆ ಕೊಟ್ಟ ಎಲ್ಲ ನೋಟಿಸ್ ವಾಪಸ್: ಸಚಿವ ಜಮೀರ್ ಅಹಮ್ಮದ್

ಮಾಹಿತಿ ನೀಡಲು ಮೀನಮೇಷ: ನರೇಗಾ ಕಾಮಗಾರಿಗಳಿಗೆ ದಂಡ ವಿಧಿಸಿದ ಬಗ್ಗೆ ಜಿಲ್ಲಾ ಪಂಚಾಯ್ತಿಗಳಿಂದ ಸೂಕ್ತ ವರದಿ ಬಾರದಿರುವುದರಿಂದ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು ಏಪ್ರಿಲ್‌ನಲ್ಲಿ ಪುನಃ ‘ನೆನಪೋಲೆ’ ಕಳುಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ದಂಡದ ಮಾಹಿತಿ ನೀಡುವಂತೆ ‘ಕನ್ನಡಪ್ರಭ’ವು ಆಯುಕ್ತಾಲಯವನ್ನು ಕೋರಿ ಮೂರೂವರೆ ತಿಂಗಳಾದರೂ ಮಾಹಿತಿ ನೀಡದೇ ಮೀನಮೇಷ ಎಣಿಸಲಾಗುತ್ತಿದೆ. ಜಿಲ್ಲೆಗಳಿಂದ ಮಾಹಿತಿ ಬರಲು ವಿಳಂಬವಾಗುತ್ತಿದೆ ಎಂದು ಇಂತಹ ಹೈಟೆಕ್‌ ಯುಗದಲ್ಲೂ ಆಯುಕ್ತಾಲಯದ ಸಿಬ್ಬಂದಿ ಸಬೂಬು ಹೇಳುತ್ತಿದ್ದಾರೆ.

Latest Videos
Follow Us:
Download App:
  • android
  • ios