Asianet Suvarna News Asianet Suvarna News

ಪಡಿತರ ಚೀಟಿದಾರರಿಗೆ ಗುಡ್‌ ನ್ಯೂಸ್‌: 90 ವರ್ಷದವರಿಗೆ ನವೆಂಬರ್‌ನಿಂದ ಮನೆಗೇ ರೇಷನ್‌?

ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಪಡಿತರ ಆಹಾರ ಧಾನ್ಯವನ್ನು 90 ವರ್ಷ ಮೇಲ್ಪಟ್ಟಿರುವ ಹಿರಿಯ ನಾಗರಿಕರ ಮನೆ ಬಾಗಿಲಿಗೆ ತಲುಪಿಸಲು ಆಹಾರ ಇಲಾಖೆ ಸಿದ್ಧತೆ ನಡೆಸಿದ್ದು, ನವೆಂಬರ್‌ನಲ್ಲಿ ಅಧಿಕೃತವಾಗಿ ಈ ಯೋಜನೆ ಜಾರಿಗೊಳ್ಳುವ ಸಾಧ್ಯತೆ ಇದೆ. 

The Food Department is preparing to deliver home ration to 90 year olds from November gvd
Author
First Published Oct 27, 2023, 4:00 AM IST

ಬೆಂಗಳೂರು (ಅ.27): ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಪಡಿತರ ಆಹಾರ ಧಾನ್ಯವನ್ನು 90 ವರ್ಷ ಮೇಲ್ಪಟ್ಟಿರುವ ಹಿರಿಯ ನಾಗರಿಕರ ಮನೆ ಬಾಗಿಲಿಗೆ ತಲುಪಿಸಲು ಆಹಾರ ಇಲಾಖೆ ಸಿದ್ಧತೆ ನಡೆಸಿದ್ದು, ನವೆಂಬರ್‌ನಲ್ಲಿ ಅಧಿಕೃತವಾಗಿ ಈ ಯೋಜನೆ ಜಾರಿಗೊಳ್ಳುವ ಸಾಧ್ಯತೆ ಇದೆ. ಅಂತ್ಯೋದಯ ಮತ್ತು ಬಿಪಿಎಲ್‌ ಕಾರ್ಡ್‌ ಹೊಂದಿದ್ದು ಮನೆಯಲ್ಲಿ ಒಬ್ಬಂಟಿ ವೃದ್ಧರಿದ್ದರೆ ಅಥವಾ ವಯಸ್ಸಾದವರು ಪಡಿತರ ಕೇಂದ್ರಗಳಿಗೆ ಹೋಗಲು ಸಮಸ್ಯೆ ಅನುಭವಿಸುತ್ತಿದ್ದರೆ ಅಂತಹವರ ಮನೆ ಬಾಗಿಲಿಗೆ ಪಡಿತರ ವಿತರಣೆ ಮಾಡುವ ಯೋಜನೆ ಇದಾಗಿದೆ. 

ಅದಕ್ಕಾಗಿ ಆಹಾರ ಇಲಾಖೆ ‘ಅನ್ನ ಸುವಿಧ’ ಎಂಬ ಆ್ಯಪ್‌ ಅಭಿವೃದ್ಧಿಪಡಿಸಿದೆ. ರಾಜ್ಯದಲ್ಲಿ ಹೀಗೆ ಸಮಸ್ಯೆ ಅನುಭವಿಸುತ್ತಿರುವ ಸುಮಾರು 7 ಸಾವಿರ ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿದೆ. ಹಾಗೆಯೇ ಪ್ರಾಯೋಗಿಕವಾಗಿ 700 ಫಲಾನುಭವಿಗಳಿಗೆ ಪಡಿತರ ವಿತರಿಸಲಾಗಿದೆ. ಈ ಯೋಜನೆಗೆ ಅನುಮತಿ ಕೋರಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕಿದ ಕೂಡಲೇ ನವೆಂಬರ್‌ನಲ್ಲಿ ಅಧಿಕೃತವಾಗಿ ಯೋಜನೆ ಜಾರಿಗೆ ಬರಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನಿಡಲಿದ್ದಾರೆ. 

ನಾನಂತೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ: ಸಂಸದ ಸಿದ್ದೇಶ್ವರ

ಪ್ರಸ್ತುತ ಪ್ರಾಯೋಗಿಕವಾಗಿ ಕೆಲವೆಡೆ ಮನೆ ಬಾಗಿಲಿಗೆ ಆಹಾರ ಧಾನ್ಯ ವಿತರಿಸಲಾಗಿದೆ. ಸದ್ಯ ಉಚಿತವಾಗಿ ಆಹಾರ ಧಾನ್ಯ ಕೊಡುತ್ತಿದ್ದರೂ ಆ ನಂತರ ಪ್ರತಿ ಮನೆಗೆ 50 ರು. ಡೆಲಿವರಿ ಚಾರ್ಜ್‌ ನಿಗದಿ ಮಾಡುವ ಸಾಧ್ಯತೆ ಇದೆ. ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಮಿಷನ್‌ ಕೊಡುವ ಉದ್ದೇಶದಿಂದ ಶುಲ್ಕ ನಿಗದಿ ಮಾಡುವ ಚಿಂತನೆ ಇದೆ ಎಂದು ಆಹಾರ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಅನ್ನ ಸುವಿಧ ಆ್ಯಪ್‌ನಲ್ಲಿ ಮಾಹಿತಿ: ಯಾವ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ 90 ವರ್ಷ ಮೇಲ್ಪಟ್ಟ ಮತ್ತು ಕಾರ್ಡ್‌ನಲ್ಲಿ ಒಬ್ಬರೇ ಸದಸ್ಯರಿದ್ದು ಅಂಗಡಿಗೆ ಬಂದು ಪಡಿತರ ಪಡೆಯಲು ಸಾಧ್ಯವಿಲ್ಲದವರು ಇದ್ದಾರೆ ಎಂಬ ವಿವರ ‘ಅನ್ನ ಸುವಿಧ’ ಆ್ಯಪ್‌ನಲ್ಲಿ ಲಭ್ಯವಾಗಲಿದೆ. ಅಂತಹವರಿಗೆ ನ್ಯಾಯಬೆಲೆ ಅಂಗಡಿ ಮಾಲಿಕರು ಬಿಪಿಎಲ್‌ ಅಥವಾ ಅಂತ್ಯೋದಯದ ಫಲಾನುಭವಿಯಾದ ಆಸಹಾಯಕರಿಗೆ ಇಲ್ಲವೇ ವೃದ್ಧರಿಗೆ ಪಡಿತರವನ್ನು ಪ್ಯಾಕ್‌ ಮಾಡಿ ಕೊಡಬೇಕು. ಅಲ್ಲದೇ ತಾವು ಪಡಿತರ ಹಂಚಿಕೆ ಮಾಡಿರುವ ಬಗ್ಗೆ ಫೋಟೋ ತೆಗೆದು ಮಾಹಿತಿ ಸಮೇತ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬೇಕು.

ಅನ್ನಸುವಿಧ ಆ್ಯಪ್‌ನಲ್ಲಿ ಫಲಾನುಭವಿ ಕೊಟ್ಟಿರುವ ಮನೆಯ ವಿಳಾಸಕ್ಕೆ ಜಿಪಿಎಸ್‌ ಮೂಲಕ ಮಾರ್ಗ ಸೂಚಿಸಲಾಗುತ್ತದೆ. ಹೀಗಾಗಿ ಸುಲಭವಾಗಿ ಪಡಿತರ ವಿತರಣೆ ಅನುಕೂಲವಾಗಲಿದೆ. ಪಡಿತರ ವಿತರಣೆ ನಂತರ ಫಲಾನುಭವಿಯ ಪಡಿತರ ಚೀಟಿ ಸಂಖ್ಯೆ, ಯಾವಾಗ ಪಡಿತರ ವಿತರಣೆಯಾಗಿದೆ, ಎಷ್ಟು ಗಂಟೆ, ಯಾವಾಗ ಯಾರು ಪರಿಶೀಲಿಸಿದ್ದಾರೆ ಎಂಬಿತ್ಯಾದಿ ಮಾಹಿತಿಯು ಇಲಾಖೆಗೆ ಲಭ್ಯವಾಗಲಿದೆ.

ಮೀಸಲಾತಿಗೆ ವಿಳಂಬ ಮಾಡಿದರೆ ಸುವರ್ಣಸೌಧದಲ್ಲಿ ಲಿಂಗ ಪೂಜೆ: ಮೃತ್ಯುಂಜಯ ಸ್ವಾಮೀಜಿ

ಶೀಘ್ರದಲ್ಲೇ ಆ್ಯಪ್‌ ಬಿಡುಗಡೆ: ಪ್ರಸ್ತುತ ಆಹಾರ ನಿರೀಕ್ಷಕರು ಮತ್ತು ನ್ಯಾಯಬೆಲೆ ಅಂಗಡಿ ಮಾಲಿಕರಿಗೆ ಮಾತ್ರ ಅನ್ನ ಸುವಿಧ ಆ್ಯಪ್‌ ಬಳಕೆಗೆ ಅನುಮತಿ ನೀಡಲಾಗಿದೆ. ಈ ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿದ ನಂತರ ಪ್ಲೇಸ್ಟೋರ್‌ಗೆ ಬಿಡುಗಡೆ ಮಾಡಲು ಆಹಾರ ಇಲಾಖೆ ನಿರ್ಧರಿಸಿದೆ.

Follow Us:
Download App:
  • android
  • ios