ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ವಿರೋಧಿಸಿ ಕೆ.ಆರ್‌.ಪುರದ ಗಾಯತ್ರಿ ಲೇಔಟ್‌ನ ದಂಪತಿ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಬುಧವಾರ ನಡೆಯಿತು.

ಬೆಂಗಳೂರು (ಅ.13) : ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ವಿರೋಧಿಸಿ ಕೆ.ಆರ್‌.ಪುರದ ಗಾಯತ್ರಿ ಲೇಔಟ್‌ನ ದಂಪತಿ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಬುಧವಾರ ನಡೆಯಿತು. ಕಳೆದ ಮೂರು ದಿನಗಳಿಂದ ಎರಡನೇ ಹಂತದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಬುಧವಾರ ಕೆಆರ್‌ ಪುರದ ಬಸವನಪುರ ಮುಖ್ಯರಸ್ತೆಯ ಗಾಯತ್ರಿ ಲೇಔಟ್‌ನಲ್ಲಿ ರಾಜಕಾಲುವೆ ತೆರವು ಕಾರ್ಯಾಚರಣೆಗೆ ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದರು. ಈ ವೇಳೆ ಅಡ್ಡಿ ವ್ಯಕ್ತಪಡಿಸಿದ ಸೋನಾಸಿಂಗ್‌ ಮತ್ತು ಆಕೆಯ ಪತಿ ಸುನೀಲ್‌ ಸಿಂಗ್‌ ತಮ್ಮ ಮನೆ ತೆರವುಗೊಳಿಸಿದರೆ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು. ಇದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

Bengaluru: ಅ.10ರಿಂದ ರಾಜಕಾಲುವೆ ಒತ್ತುವರಿ ತೆರವು ಕಾರ‍್ಯಕ್ಕೆ ಚುರುಕು: ಪಾಲಿಕೆ

ರಾಜಕಾಲುವೆಯ ಗೋಡೆ ಮೇಲೆ ನಿಂತ ದಂಪತಿಯನ್ನು ಮಹದೇವಪುರ ಮುಖ್ಯ ಎಂಜಿನಿಯರ್‌ ಬಸವರಾಜ ಕಬಾಡೆ ಹಾಗೂ ಕೆಆರ್‌ಪುರ ಎಸಿಪಿ ಶಾಂತಮಲ್ಲಪ್ಪ ಮನವೊಲಿಸುವುದಕ್ಕೆ ಯತ್ನಿಸಿದರು. ಆದರೂ, ಪ್ರಯೋಜನವಾಗಲಿಲ್ಲ. ರಾಜಕಾಲುವೆ ತಡೆಗೋಡೆ ಮೇಲೆ ಪೆಟ್ರೋಲ್‌ ಸುರಿದುಕೊಂಡು ನಿಂತುಕೊಂಡೇ ಬಿಬಿಎಂಪಿ ಜತೆಗೆ ವಾಗ್ವಾದಕ್ಕಿಳಿದ ದಂಪತಿ, 20 ವರ್ಷಗಳಿಂದ ಇಲ್ಲಿಯೇ ವಾಸವಿದ್ದೇವೆ. ಆಗ ರಾಜಕಾಲುವೆ ಒತ್ತುವರಿಯ ಸಮಸ್ಯೆ ಇರಲಿಲ್ಲ. ಈಗ .40 ಲಕ್ಷ ಸಾಲ ಮಾಡಿ ಮನೆ ಕಟ್ಟಿದ್ದೇವೆ. ಹೀಗಿರುವಾಗ ಮನೆ ಒಡೆಯುತ್ತೇವೆ ಎಂದು ಹೇಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲ ಸಮಯದ ನಂತರ ಇಬ್ಬರೂ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು. ಅದರಿಂದ ಎಚ್ಚೆತ್ತುಕೊಂಡು ಬಿಬಿಎಂಪಿ ಅಧಿಕಾರಿಗಳು ಅಗ್ನಿಶಾಮಕ ದಳ, ಪೊಲೀಸರನ್ನು ಸ್ಥಳಕ್ಕೆ ಕರೆಸಿದರು. ಜತೆಗೆ ಜಲಮಂಡಳಿ ನೀರಿನ ಟ್ಯಾಂಕರ್‌ನಲ್ಲಿ ನೀರು ತರಿಸಿ ದಂಪತಿ ಮೇಲೆ ಸುರಿದು ಆತ್ಮಹತ್ಯೆ ತಡೆದರು.

ದಂಪತಿ ಪೊಲೀಸ್‌ ವಶಕ್ಕೆ:

ಆತ್ಮಹತ್ಯೆ ಬೆದರಿಕೆ ಒಡ್ಡಿದ ದಂಪತಿಯನ್ನು ಕೆಆರ್‌ಪುರ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ದಂಪತಿ ಪೊಲೀಸ್‌ ಠಾಣೆಗೆ ತೆರಳುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಿದರು. ಆತ್ಮಹತ್ಯೆಗೆ ಯತ್ನಿಸಿದ ಸೋನಾ ಸಿಂಗ್‌ ಅವರು ಕಳೆದ ಮಂಗಳವಾರ ಬಿಬಿಎಂಪಿ ಒತ್ತುವರಿ ತೆರವು ಮಾಡುವುದಕ್ಕೆ ಮುಂದಾದ ಸಂದರ್ಭದಲ್ಲಿಯೂ ರಾಜಕಾಲುವೆ ಕಾಂಪೌಂಡ್‌ ಮೇಲೆ ನಿಂತು ಕಾರ್ಯಾಚರಣೆಗೆ ಅಡ್ಡಿ ಪಡಿಸಿದ್ದರು. ಮಂಗಳವಾರ ಸಂಜೆ ಆಗಿದ್ದರಿಂದ ಬಿಬಿಎಂಪಿ ಅಧಿಕಾರಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿ ವಾಪಾಸ್‌ ಆಗಿದ್ದರು.

ಒತ್ತುವರಿ ತೆರವು ಮತ್ತೆ ಆರಂಭ, ಲೇಕ್‌ವ್ಯೂ ಅಪಾರ್ಚ್‌ಮೆಂಟಿಂದ ಒತ್ತುವರಿ ಆಗಿದ್ದ ಜಾಗ ತೆರವು

ಮುಂದುವರೆದ ಕಾರ್ಯಾಚರಣೆ

ಬಿಬಿಎಂಪಿ ಅಧಿಕಾರಿಗಳು ಬುಧವಾರ ಮಹದೇವಪುರ ವಿಭಾಗದ ವೈಟ್‌ಫೀಲ್ಡ್‌ ಉಪವಿಭಾಗದಲ್ಲಿನ ಟಿಝಡ್‌ ಅಪಾರ್ಚ್‌ಮೆಂಟ್‌ನಿಂದ ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ ಕಾಂಪೌಂಡ್‌, ಭದ್ರತಾ ಸಿಬ್ಬಂದಿ ಕೊಠಡಿ ತೆರವುಗೊಳಿಸಿದರು. ಹೂಡಿ ಉಪವಿಭಾಗದ ದಿಯಾ ಶಾಲೆ ಕಾಂಪೌಂಡ್‌, 3 ಶೆಡ್‌ಗಳ ಮುಂಭಾಗದ ಗೋಡೆ, ವೈಟ್‌ಫೀಲ್ಡ್‌ ರಿಂಗ್‌ ರಸ್ತೆ ಸಮೀಪದ ರಾಜಣ್ಣ ಗೌಡ್ರು ಹೋಟೆಲ್‌ನ ಗೋಡೆ, 2 ಶೆಡ್‌ ತೆರವುಗೊಳಿಸಲಾಗಿದೆ. ಬಗಿನಿ ಹೋಟೆಲ್‌ನಿಂದಾಗಿದ್ದ ಒತ್ತುವರಿಯನ್ನು ಸ್ವಯಂ ತೆರವು ಮಾಡುತ್ತೇವೆ ಎಂದು ತಿಳಿಸಿದ್ದರಿಂದ ಬಿಬಿಎಂಪಿಯಿಂದ ಕಾರ್ಯಾಚರಣೆ ನಡೆಸಲಿಲ್ಲ. ಕೆಆರ್‌ ಪುರ ವಿಭಾಗದ ಗಾಯತ್ರಿ ಲೇಔಟ್‌ನಲ್ಲಿ 60 ಮೀ. ಉದ್ದದ ರಾಜಕಾಲುವೆಯ ಸ್ಥಳದಲ್ಲಿ ನಿರ್ಮಿಸಿದ್ದ 6 ಆರ್‌ಸಿಸಿ ಕಟ್ಟಡಗಳ ಗೋಡೆ ಹಾಗೂ ಕಾಂಪೌಂಡ್‌ ತೆರವುಗೊಳಿಸಲಾಯಿತು.