Hosapete: ಗೋರುಚ, ಭಾಷ್ಯಂ, ವೆಂಕಟಾಚಲಶಾಸ್ತ್ರಿಗೆ ನಾಡೋಜ ಪದವಿ ಪ್ರದಾನ
* ಕನ್ನಡ ವಿಶ್ವವಿದ್ಯಾಲಯದ 30ನೇ ನುಡಿಹಬ್ಬ/ಘಟಿಕೋತ್ಸವ
* ಮಾನವೀಯತೆ ಮೈಗೂಡಿಸಿಕೊಳ್ಳಲು ರಾಜ್ಯಪಾಲ ಗೆಹ್ಲೋಟ್ ಕರೆ
* ಗಮನ ಸೆಳೆದ ಘಟಿಕೋತ್ಸವ ಭಾಷಣ
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ಹೊಸಪೇಟೆ(ಏ.14): ಕನ್ನಡ(Kannada) ನಾಡು-ನುಡಿಗೆ ಅನುಪಮ ಸೇವೆ ಸಲ್ಲಿಸಿರುವ ಗೋ.ರು.ಚನ್ನಬಸಪ್ಪ, ಡಾ.ಭಾಷ್ಯಂಸ್ವಾಮಿ ಮತ್ತು ಪ್ರೊ.ಟಿ.ವಿ. ವೆಂಕಟಾಚಲಶಾಸ್ತ್ರಿ ಅವರಿಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್(Thaawarchand Gehlot) ಅವರು ನಾಡೋಜ(Nadoja) ಪದವಿ ನೀಡಿ ಗೌರವಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ(Hampi Kannada University) ನವರಂಗ ಬಯಲುರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿವಿಯ 30ನೇ ನುಡಿಹಬ್ಬ/ಘಟಿಕೋತ್ಸವದಲ್ಲಿ(Convocation) ಗೌರವ ಸಮರ್ಪಣೆ ಮಾಡಲಾಯಿತು.
ಇದೇ ವೇಳೆ ಚಿತ್ರದುರ್ಗದ ಶಿವಮೂರ್ತಿ ಮುರುಘಾಶರಣರು (ವಚನ ಸಂಸ್ಕೃತಿಯ ಸಮುದಾಯ ತತ್ವ ಮತ್ತು ಸಮಕಾಲೀನ ಸಂದರ್ಭ), ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ(ಮುದ್ರಣ ಮಾಧ್ಯಮ: ಸಮಕಾಲೀನ ವಿದ್ಯಮಾನಗಳು), ಕಲ್ಕುಳಿ ವಿಠಲ್ ಹೆಗ್ಗಡೆ(ಮಳೆನಾಡು ಅಧ್ಯಯನ), ಬಿ.ಎಸ್.ಪುಟ್ಟಸ್ವಾಮಿ(ಹಳೇ ಮೈಸೂರಿನ ಒಕ್ಕಲಿಗರ ಸ್ಥಿತ್ಯಂತರಗಳು) ಅವರಿಗೆ ಡಿ.ಲಿಟ್ ಪದವಿ ಮತ್ತು 100 ಜನರಿಗೆ ಪಿಎಚ್‍ಡಿ ಪದವಿಗಳನ್ನು ಇದೇ ಸಂದರ್ಭದಲ್ಲಿ ರಾಜ್ಯಪಾಲರು ಪ್ರದಾನ ಮಾಡಿದರು.
ಗೋರೂಚ ಸೇರಿದಂತೆ ಮೂವರಿಗೆ ನಾಡೋಜ ಗೌರವ
ಯುವ ಜನತೇ ದೇಶದ ಆಧಾರ ಸ್ಥಂಬ
ಯುವಜನತೆ ದೇಶದ ಆಧಾರಸ್ತಂಭವಾಗಿದ್ದು, ದೇಶದ ಹಿತಕ್ಕಾಗಿ ಮತ್ತು ಜನರ ಹಿತಕ್ಕಾಗಿ ಪದವಿ ಬಳಿಕ ಆಚಾರ,ವಿಚಾರ ಮತ್ತು ಸಂಸ್ಕೃತಿಯಲ್ಲಿ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಯುವಜನತೆಗೆ ಕರೆ ನೀಡಿದರು. ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲರು ವಿದ್ಯಾರ್ಥಿಗಳಿಗೆ ದೇಶದ ಸ್ಥಿತಿಗತಿಯ ಕುರಿತು ಸುದೀರ್ಘ ವಿವರಣೆ ನೀಡಿದ್ರು.. ಭಾರತ ಯುವಕರ ದೇಶ ಈ ದೇಶಕ್ಕೆ ಯುವಜನತೆಯೇ ಆಧಾರವಾಗಿದ್ದಾರೆ. ಶೇ.60ರಷ್ಟು 35 ವರ್ಷದೊಳಗಿನ ಯುವಜನರು ನಮ್ಮ ದೇಶದಲ್ಲಿದ್ದಾರೆ. ಕಠಿಣ ಪರಿಶ್ರಮ ಮೈಗೂಡಿಸಿಕೊಳ್ಳುವುದರ ಜೊತೆಗೆ ಸನ್ಮಾರ್ಗದಲ್ಲಿ ನಡೆಯಬೇಕು. ಏಕಾಗ್ರತೆಯಿಂದ ಕೆಲಸ ಮಾಡಿದಲ್ಲಿ ಫಲ ಸಿಗುತ್ತದೆ ಎಂದು ಅವರು ವಿವರಿಸಿದರು.
ನೂತನ ಶಿಕ್ಷಣ ನೀತಿ
ಇತ್ತೀಚೆಗೆ ಜಾರಿಗೆ ಬಂದ ನೂತನ ಶಿಕ್ಷಣ ನೀತಿಯಲ್ಲಿ(New Education Policy) ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಕಲಿಕೆಗೆ ಒತ್ತು ನೀಡಲಾಗಿದೆ. ಸ್ಥಳೀಯ ಭಾಷೆಯಲ್ಲಿ ಸರಳವಾಗಿ ಓದುವ ಮತ್ತು ವಿಷಯದ ಮೇಲೆ ಹಿಡಿತ ಸಾಧಿಸಬಹುದಾಗಿದೆ ಎಂದು ವಿವರಿಸಿದ ರಾಜ್ಯಪಾಲ ಗೆಹ್ಲೋಟ್ ಅವರು ಪ್ರಾದೇಶಿಕ ಭಾಷೆಗಳಲ್ಲಿ ಸಮರ್ಪಕ ಶಿಕ್ಷಣ ನೀಡುವುದರ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯ ಎಂದು ತಿಳಿಸಿದರು. ತಂತ್ರಜ್ಞಾನ,ವೈಜ್ಞಾನಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಸಾಧಿಸಿರುವ ಜಪಾನ್,ಚೀನಾ,ಜರ್ಮನಿ,ಪ್ರಾನ್ಸ್‍ನಂತ ರಾಷ್ಟ್ರಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಒತ್ತು ನೀಡಿರುವ ಮತ್ತು ಅವರವರ ಭಾಷೆಯಲ್ಲಿಯೇ ಶಿಕ್ಷಣಕ್ಕೆ ಆದ್ಯತೆ ನೀಡಿರುವುದನ್ನು ಪ್ರಸ್ತಾಪಿಸಿದರು.
ಕನ್ನಡಕ್ಕಗಿಯೇ ಇರೋ ರಾಜ್ಯದ ಏಕೈಕ ವಿವಿ
ಕನ್ನಡ ವಿವಿ ಕಳೆದ ಮೂವತ್ತು ವರ್ಷಗಳಿಂದ ಕನ್ನಡ ಮತ್ತು ಕನ್ನಡ ಅಸ್ಮಿತೆ ವಿಷಯದಲ್ಲಿ ಶ್ಲಾಘನೀಯವಾದ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪರಮೇಶ್ವರ್‌ರಿಂದ ಪ್ರಜಾಪ್ರಭುತ್ವ ಉಳಿಯಲಿ: ಬರಗೂರು ರಾಮಚಂದ್ರಪ್ಪ
ವಿಶ್ವಪ್ರಸಿದ್ಧ, ಐತಿಹಾಸಿಕ ನಗರಿ ಹಂಪಿಗೆ ಹಾಗೂ ಕನ್ನಡ ವಿವಿಗೆ ಭೇಟಿ ನೀಡಿರುವುದು ಅತ್ಯಂತ ಸಂತಸವಾಗಿದೆ ಎಂದು ಹೇಳಿದ ರಾಜ್ಯಪಾಲರು ಪದವಿ ಪಡೆದ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.
ಗಮನ ಸೆಳೆದ ಘಟಿಕೋತ್ಸವ ಭಾಷಣ
ಕನ್ನಡ ಭಾಷೆ, ವಿದ್ಯೆ, ಸಂಶೋಧನೆ, ಕನ್ನಡ ನೆಲ-ಜಲದ ರಕ್ಷಣೆ, ಸಂವರ್ಧನೆಗೋಸ್ಕರ ನಿರ್ಮಾಣವಾಗಿರುವ ಕನ್ನಡ ವಿಶ್ವವಿದ್ಯಾಲಯ ತನ್ನ ಪಾತ್ರವನ್ನು ಇಲ್ಲಿಯವರೆಗೆ ಸಮರ್ಪಕವಾಗಿ ನಿರ್ವಹಿಸಿಕೊಂಡು ಬಂದಿದೆ ಎಂದು
ಘಟಿಕೋತ್ಸವ ಭಾಷಣ ಮಾಡಿದ ಡಾ.ತೇಜಸ್ವಿ ಕಟ್ಟಿಮನಿ ವಿವರಿಸಿದ್ರು
ಕನ್ನಡ ಭಾಷಿಕರು ಮತ್ತು ಕನ್ನಡ ಭಾಷೆ ಮತ್ತು ಭಾರತೀಯ ಭಾಷೆಗಳ ಮಧ್ಯೆ ನಡುಗಡ್ಡೆ ನಿರ್ಮಿಸಿಕೊಂಡು ಯಾರೂ ಬದುಕಲು, ಬೆಳೆಯಲು ಸಾಧ್ಯವಿಲ್ಲ. ಎಲ್ಲ ಭಾರತೀಯ ಭಾಷೆಗಳಿಗೂ ಈ ಮಾತು ಸಲ್ಲುತ್ತದೆ. ಕನ್ನಡ ಮತ್ತು ಇತರ ಭಾಷೆಗಳ ಮಧ್ಯೆ ಕೊಡುಕೊಳ್ಳುವಿಕೆ ಏರ್ಪಡಿಸುವುದರಿಂದ ಕನ್ನಡದಲ್ಲಿ ಹೊಸ ಹೊಸ ಜ್ಞಾನಶಾಖೆಗಳ ಪ್ರವೇಶವಾಗಲು ಸಾಧ್ಯವಿದೆ. ಹೊಸ ತಂತ್ರಜ್ಞಾನಗಳನ್ನು ಸ್ವೀಕರಿಸುವ ಮೂಲಕ ಕನ್ನಡ ವಿಶ್ವವಿದ್ಯಾಲಯ ಕನ್ನಡದ ಅಪಾರ ಶಕ್ತಿಯನ್ನು ಇನ್ನಷ್ಟ್ಟು ಗಟ್ಟಿಗೊಳಿಸಬೇಕು. ನಮ್ಮ ಭಾಷಾ ಗ್ರಹಿಕೆಯನ್ನು, ಭಾಷಾ ಸೀಮೆಯನ್ನು ವಿಸ್ತ್ತರಿಸುವ ಮೂಲಕ ನಾವು ಭಾರತೀಯ ಭಾಷೆಗಳಲ್ಲಿರುವ ಪರಸ್ಪರ ಅಪನಂಬಿಕೆಯನ್ನು ಹೋಗಲಾಡಿಸಿ, ಪರಸ್ಪರ ಬೆಳೆಯಲು ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಳ್ಳುವುದು ಸಾಧ್ಯವಿದೆ ಎಂದರು.