ಗುಡ್ ನ್ಯೂಸ್: ಡಾ| ಕಜೆ ಕೋವಿಡ್ ಔಷಧ ಯಶಸ್ವಿ, ರೋಗಿಗಳು ಪೂರ್ಣ ಗುಣಮುಖ!
ಕಜೆ ಕೋವಿಡ್ ಔಷಧ ಯಶಸ್ವಿ: ರಾಮುಲು| ಬೆಂಗಳೂರು ಆಸ್ಪತ್ರೆಯಲ್ಲಿ 10 ರೋಗಿಗಳು ಪೂರ್ಣ ಗುಣಮುಖ| ಆಯುರ್ವೇದ ಜತೆ ಅಲೋಪಥಿ ಔಷಧವನ್ನೂ ನೀಡಿದ್ದೆವು: ಆಸ್ಪತ್ರೆ
ಬೆಂಗಳೂರು(ಜು.02): ರಾಜ್ಯದಲ್ಲಿ ಹತ್ತು ಮಂದಿ ಕೊರೋನಾ ಸೋಂಕಿತರಿಗೆ ಆಯುರ್ವೇದ ವೈದ್ಯ ಡಾ| ಗಿರಿಧರ ಕಜೆ ಸಂಶೋಧಿಸಿರುವ ಔಷಧ ನೀಡಿರುವುದರಿಂದ ಸಂಪೂರ್ಣ ಗುಣಮುಖರಾಗಿದ್ದು, ಔಷಧಿಯ ಮೊದಲ ಹಂತದ ಚಿಕಿತ್ಸಾ ಪ್ರಯೋಗ ಯಶಸ್ವಿಯಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಾಸ್ಕ್‌ಫೋರ್ಸ್ ಸಭೆಯ ನಿರ್ಧಾರದಂತೆ ಬೆಂಗಳೂರು ವೈದ್ಯಕೀಯ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ವ್ಯಾಪ್ತಿಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಜೆ ಅವರು ನೀಡಿರುವ ಮಾತ್ರೆಗಳಿಂದ ಹತ್ತು ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಹೀಗಾಗಿ ಔಷಧವನ್ನು ಇನ್ನಷ್ಟು ಪ್ರಯೋಗಕ್ಕೆ ಒಳಪಡಿಸಲು ಅದನ್ನು 100 ಮಂದಿಗೆ ನೀಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಡಾ. ಕಜೆ ಔಷಧಿ 10 ಮಂದಿಗೆ ನೀಡಲು ಸರ್ಕಾರದ ಒಪ್ಪಿಗೆ!
ಏನಿದು ಆಯುರ್ವೇದ ಚಿಕಿತ್ಸೆ:
ಡಾ| ಗಿರಿಧರ ಕಜೆ ಅವರು ಭೌಮ್ಯ ಹಾಗೂ ಸಾತ್ವ್ಯ ಎಂಬ ಮಾತ್ರೆ ಸಂಶೋಧಿಸಿದ್ದರು. ಹದಿನಾಲ್ಕು ಔಷಧೀಯ ಸಸ್ಯಗಳಿಂದ ತಯಾರಿಸಲಾದ ಈ ಔಷಧವನ್ನು ಕೊರೋನಾ ಸೋಂಕಿತರ ಮೇಲೆ ಪ್ರಯೋಗ ನಡೆಸಲು ಜೂ.5ರಂದು ಕ್ಲಿನಿಕಲ್ ಟ್ರಯಲ್‌ಗೆ ನೊಂದಾಯಿಸಿ, ಬೆಂಗಳೂರಿನ ಮೆಡಿಕಲ್ ಕಾಲೇಜು ಎಥಿಕ್ಸ್ ಕಮಿಟಿಯು ಅನುಮತಿ ನೀಡಿತ್ತು. ಜೂ.7ರಿಂದ 25ರವರೆಗೆ 10 ಮಂದಿ ರೋಗ ಲಕ್ಷಣಗಳುಳ್ಳ 23 ವರ್ಷದಿಂದ 65 ವರ್ಷ ವಯಸ್ಸಿನ ಸೋಂಕಿತರಿಗೆ ಔಷಧ ನೀಡಲಾಯಿತು. ಎರಡರಿಂದ ಮೂರು ದಿನಗಳಲ್ಲಿ ಜ್ವರ, ಶೀತ, ಕೆಮ್ಮು, ಸುಸ್ತು, ತಲೆನೋವು, ಉಸಿರಾಟದ ತೊಂದರೆ, ಮೊದಲಾದ ಲಕ್ಷಣಗಳು ಸಂಪೂರ್ಣ ಹತೋಟಿಗೆ ಬಂದಿವೆ. 3ರಿಂದ 10 ದಿನದಲ್ಲಿ ಎಲ್ಲರಿಗೂ ಸೋಂಕು ನೆಗೆಟಿವ್ ಬಂದಿದೆ.
ಕಡಿಮೆ ಬೆಲೆಯಲ್ಲಿ ಚಿಕಿತ್ಸೆ:
ಈ ಚಿಕಿತ್ಸೆ ಪಡೆದವರಲ್ಲಿ ಹೃದ್ರೋಗ, ಕ್ಷಯರೋಗ, ರಕ್ತದೊತ್ತಡ, ಮಧುಮೇಹ ಇದ್ದ ರೋಗಿಗಳೂ ಇದ್ದರು ಎಂದು ತಿಳಿದುಬಂದಿದೆ. ಅಲ್ಲದೆ ಇವರ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟಾಗಿಲ್ಲ. ಎಲ್ಲದಕ್ಕಿಂತಲೂ ಮುಖ್ಯವಾಗಿ ಕೇವಲ ಪ್ರತಿ ರೋಗಿಗೆ 90 ರು.ಗಳಿಂದ 180 ರು. ಮಾತ್ರ ಖರ್ಚಾಗಿರುವುದಾಗಿ ತಿಳಿದುಬಂದಿದೆ.
ಅಲೋಪಥಿ ಔಷಧವನ್ನೂ ನೀಡಿದ್ದೆವು: ಡಾ| ಜಯಂತಿ
ಈ ಬಗ್ಗೆ ಕನ್ನಡಪ್ರಭ ಜೊತೆ ಮಾತನಾಡಿದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕಿ ಡಾ.ಸಿ.ಆರ್. ಜಯಂತಿ, ಹತ್ತು ಮಂದಿ ಮೇಲೆ ಪ್ರಾಯೋಗಿಕವಾಗಿ ಆಯುರ್ವೇದ ಔಷಧ ಪ್ರಯೋಗ ಮಾಡಲಾಗಿದೆ. ಆದರೆ ಇವರಿಗೆ ನಮ್ಮ ಆಸ್ಪತ್ರೆಯ ಚಿಕಿತ್ಸೆಯನ್ನು ಮುಂದುವರೆಸಿಕೊಂಡು ಹೆಚ್ಚುವರಿಯಾಗಿ ಈ ಔಷಧಗಳನ್ನು ನೀಡಿದ್ದೆವೇ ಹೊರತು ಸಂಪೂರ್ಣ ಆಯುರ್ವೇದ ಚಿಕಿತ್ಸೆ ನೀಡಿಲ್ಲ. ಹೀಗಾಗಿ ಇದನ್ನು ಕೊರೋನಾ ಚಿಕಿತ್ಸೆ ಎನ್ನುವ ಬದಲು ರೋಗ ನಿರೋಧಕ ಶಕ್ತಿ ಉತ್ತಮಪಡಿಸಲು ನೀಡಿದ ಚಿಕಿತ್ಸೆ ಎನ್ನಬಹುದು ಎಂದರು.
ಕೊರೋನಾ ಸೋಂಕಿತರ ಮೇಲೆ ಈ ಆಯುರ್ವೇದ ಚಿಕಿತ್ಸೆ ಸಂಪೂರ್ಣ ಪರಿಣಾಮ ಬೀರುತ್ತದೆಯೇ ಎಂಬುದನ್ನು ದೃಢಪಡಿಸಿಕೊಳ್ಳಲು ಹತ್ತು ಮಂದಿಯ ಮೇಲೆ ಪರೀಕ್ಷೆ ನಡೆಸಿದರೆ ಸಾಲದು. ಇನ್ನೂ ಹೆಚ್ಚು ಮಂದಿಯ ಮೇಲೆ ಪರೀಕ್ಷೆ ನಡೆಸಿ ಬರುವ ಫಲಿತಾಂಶಗಳ ಮೇಲೆ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬಹುದು ಎಂದು ಹೇಳಿದರು.
ಇನ್ನಷ್ಟು ಪರೀಕ್ಷೆ ಮಾಡಿ, ಔಷಧ ಉಚಿತ ನೀಡುವೆ
10 ಮಂದಿಯ ಜತೆಗೆ ಇನ್ನೂ 50ರಿಂದ 100 ರೋಗಿಗಳಿಗೆ ನೀಡಲಿ. ಅಷ್ಟೇ ಅಲ್ಲ, ಕ್ವಾರಂಟೈನ್‌ನಲ್ಲಿ ಇರುವವರು ಸೇರಿದಂತೆ ರಾಜ್ಯದ ಸುಮಾರು 50 ಸಾವಿರ ಮಂದಿಗೆ ಈ ಔಷಧಿ ನೀಡಲಿ. ಇದು ಅಡ್ಡ ಪರಿಣಾಮಗಳಿಲ್ಲದ ಔಷಧಿ. ಹೀಗಾಗಿ ಯಾವುದೇ ಸಮಸ್ಯೆಯಾಗುವುದಿಲ್ಲ. ಈ ರೀತಿ ಮಾಡಿದರೆ ಸರ್ಕಾರಿ ಆಸ್ಪತ್ರೆಗಳಿಗೆ ರೋಗಿಗಳು ಬರುವುದು ಕಡಿಮೆಯಾಗುತ್ತದೆ. ಆಗ ಹಾಸಿಗೆಗಳ ಕೊರತೆ ಸಮಸ್ಯೆ ನೀಗುತ್ತದೆ. ಈ ಚಿಕಿತ್ಸೆ ಯಶಸ್ವಿ ಎನಿಸಿದರೆ 5 ಸಾವಿರ ಮಂದಿಗೆ ಉಚಿತವಾಗಿ ಔಷಧ ನೀಡಲು ಸಿದ್ಧನಿದ್ದೇನೆ. ಅಷ್ಟೆಅಲ್ಲ, ಔಷಧಗಳ ಫಾರ್ಮುಲಾ ಹಾಗೂ ಸಂಪೂರ್ಣ ಹಕ್ಕು ಸ್ವಾಮ್ಯವನ್ನು ಸರ್ಕಾರಕ್ಕೆ ಉಚಿತವಾಗಿ ನೀಡುತ್ತೇನೆ.
- ಡಾ| ಗಿರಿಧರ ಕಜೆ, ಆಯುರ್ವೇದ ವೈದ್ಯ