ಡಾ. ಕಜೆ ಔಷಧಿ 10 ಮಂದಿಗೆ ನೀಡಲು ಸರ್ಕಾರದ ಒಪ್ಪಿಗೆ!
ಕಜೆ ಔಷಧಿ 10 ಮಂದಿಗೆ ನೀಡಲು ಸರ್ಕಾರದ ಒಪ್ಪಿಗೆ| ಕೊರೋನಾ ರೋಗಿಗಳ ಮೇಲೆ ಆಯುರ್ವೇದ ಔಷಧಿ ಪ್ರಯೋಗ| ಸಿಎಂ ಜೊತೆ ಡಾ.ಗಿರಿಧರ ಕಜೆ ಸಭೆ
ಬೆಂಗಳೂರು(ಏ.16): ಕೊರೋನಾ ವೈರಾಣು ಸೋಂಕಿಗೆ ರಾಜ್ಯದ ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ ಅವರು ಕಂಡು ಹಿಡಿದಿರುವ ಆಯುರ್ವೇದ ಔಷಧಿಯನ್ನು ಪ್ರಾಯೋಗಿಕವಾಗಿ ಹತ್ತು ಮಂದಿಯ ಮೇಲೆ ಪರೀಕ್ಷಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಪ್ಪಿಗೆ ನೀಡಿದ್ದಾರೆ.
ಈ ವಿಷಯವನ್ನು ಖುದ್ದು ಗಿರಿಧರ್ ಕಜೆ ಅವರೇ ತಿಳಿಸಿದ್ದಾರೆ. ಒಂದು ವೇಳೆ ಔಷಧಿ ಮೂಲಕ ಚಿಕಿತ್ಸೆ ಯಶಸ್ವಿಯಾದರೆ ವಿಶ್ವದಲ್ಲೇ ಕೊರೋನಾ ವೈರಾಣು ಸೋಂಕಿಗೆ ಔಷಧ ಕಂಡು ಹಿಡಿದ ಶ್ರೇಯ ಕರ್ನಾಟಕಕ್ಕೆ ಲಭ್ಯವಾಗಲಿದೆ.
'6 ದಿನ'ದ ಸೀಕ್ರೆಟ್: ಚೀನಾ ಮಾಡಿದ ದೊಡ್ಡ ಎಡವಟ್ಟು ಬಹಿರಂಗ!
ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕಜೆ, ಆಯುರ್ವೇದ ಔಷಧಿ ನೀಡುವ ಬಗ್ಗೆ ಐಸಿಎಂಆರ್‌ಗೆ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಈ ಬಗ್ಗೆ ಯಡಿಯೂರಪ್ಪ ಅವರು ಸಭೆ ನಡೆಸಿ ಚರ್ಚಿಸಿದರು. ಈ ವೇಳೆ ಹತ್ತು ರೋಗಿಗಳ ಮೇಲೆ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸುವಂತೆ ಹೇಳಿದ್ದಾರೆ. 2-3 ದಿನಗಳಲ್ಲಿ ಸರ್ಕಾರದಿಂದ ಈ ಬಗ್ಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ. ಸರ್ಕಾರದ ಸೂಚನೆ ಮೇರೆಗೆ ಮುಂದಿನ ಎರಡು ದಿನಗಳಲ್ಲಿ ನಾವು ಮುಂದುವರೆಯುತ್ತೇವೆ ಎಂದರು.
ಗಿರಿಧರ ಕಜೆ ಅವರು ಇದಕ್ಕೂ ಮೊದಲು ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹಾಗೂ ಐಸಿಎಂಆರ್‌ಗೆ ಪತ್ರ ಬರೆದು ಕೊರೋನಾ ವೈರಸ್ ಸೋಂಕಿಗೆ ಆಯುರ್ವೇದ ಔಷಧ ಕಂಡು ಹಿಡಿದಿದ್ದೇನೆ. ಇದರಿಂದ ಸೋಂಕಿತರನ್ನು ಗುಣಪಡಿಸಬಹುದು ಎಂದು ಹೇಳಿದ್ದರು.
ನೋಟಿಸ್ ಬಂದಿಲ್ಲ: ಕಜೆ
ಐಸಿಎಂಆರ್ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ನನಗೆ ನೇರವಾಗಿ ಯಾವುದೇ ನೋಟಿಸ್ ಬಂದಿಲ್ಲ ಎಂದು ಡಾ.ಗಿರಿಧರ ಕಜೆ ಸ್ಪಷ್ಟಪಡಿಸಿದರು.
2022ರವರೆಗೂ ಸಾಮಾಜಿಕ ಅಂತರ ಅಗತ್ಯ: ಪಾಲಿಸದಿದ್ರೆ ಸೋಂಕು ತೀವ್ರ!
ಮಾಧ್ಯಮಗಳಲ್ಲಿ ಮಾತನಾಡಿದ್ದೇನೆ ಎಂಬ ಕಾರಣಕ್ಕೆ ನೋಟಿಸ್ ನೀಡಿರಬಹುದು. ನೋಟಿಸ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವುದನ್ನು ನೋಡಿದ್ದೇನೆ. ನಾನು ಎಲ್ಲೂ ಸುಳ್ಳು ಮಾಹಿತಿ ನೀಡಿಲ್ಲ. ಔಷಧ ಕಂಡು ಹಿಡಿದಿದ್ದೇನೆ ಎಂದು ಹೇಳಿದ್ದೇನೆ ಹಾಗೂ ಅದನ್ನು ಸರ್ಕಾರಕ್ಕೆ ಅಧಿಕೃತ ಪತ್ರದ ಮೂಲಕ ತಿಳಿಸಿದ್ದೇನೆಯೇ ಹೊರತು ಯಾರಿಗೂ ಔಷಧ ನೀಡಿಲ್ಲ ಎಂದು ಹೇಳಿದರು.