ಧಾರವಾಡ(ಮಾ.23): ಧಾರವಾಡದಲ್ಲಿ ವಿದೇಶದಿಂದ ಬಂದ ವ್ಯಕ್ತಿಯ ಬೇಜವಾಬ್ದಾರಿ ನಡೆಯಿಂದಾಗಿ ಇದೀಗ ಅನೇಕರಿಗೆ ಕೊರೋನಾ ಸೋಂಕಿನ ಭಯ ಶುರುವಾಗಿದೆ. ಜ್ವರ, ಕೆಮ್ಮು ಹಾಗೂ ನೆಗಡಿಯಿಂದಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ಈ ವೇಳೆ ಆತ ತಾನು ವಿದೇಶದಿಂದ ಆಗಮಿಸಿದ ವಿಚಾರ ಮುಚ್ಚಿಟ್ಟಿದ್ದಾನೆ. ಅಲ್ಲದೆ, ಸೋಂಕಿನ ಲಕ್ಷಣಗಳಿದ್ದಾಗ್ಯೂ ಮನೆಯಲ್ಲೇ ಕ್ವಾರಂಟೇನ್‌ ಆಗುವ ಬದಲು ಊರೆಲ್ಲ ಸುತ್ತಾಡಿ ಇತರರ ಜೀವಕ್ಕೂ ಅಪಾಯ ತಂದಿಟ್ಟಿದ್ದಾನೆ.

ಹೊಸಯಲ್ಲಾಪುರದ ಟೆಕ್ಕಿಗೆ ಇದೀಗ ಕೊರೋನಾ ದೃಢಪಟ್ಟಿದ್ದು, ಆತ ಧಾರವಾಡಕ್ಕೆ ಬಂದ ಬಳಿಕ ನಗರದೆಲ್ಲೆಡೆ ಸುತ್ತಾಡಿದ್ದಾನೆ. ಎರಡು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ತನ್ನ ಕೆಮ್ಮು, ಗಂಟಲು ಕೆರೆತ ಹಾಗೂ ಜ್ವರಕ್ಕೆ ಚಿಕಿತ್ಸೆ ಕೇಳಿದ್ದಾನೆ.

ಗೋವಾದಿಂದ ಮಾ.11ರಂದು ಆಸ್ಪ್ರೇಲಿಯಾ ಪತ್‌ರ್‍ನಿಂದ ಪ್ರಯಾಣ ಬೆಳೆಸಿದ್ದ ಈತ ದುಬೈ ತಲುಪಿದ್ದಾನೆ. ಅಲ್ಲಿಂದ ಓಮನ್‌ ಏರ್‌ಲೈನ್ಸ್‌ ಮೂಲಕ ಮಾ.12ರಂದು ಮಧ್ಯಾಹ್ನ 12.35ಕ್ಕೆ ಮಸ್ಕತ್‌ ತಲುಪಿದ್ದು, ಅಲ್ಲಿಂದ ಓಮನ್‌ ಏರ್‌ಲೈನ್ಸ್‌ ಮೂಲಕ ಹೊರಟು ಸಂಜೆ 7ಕ್ಕೆ ಗೋವಾ ವಿಮಾನ ನಿಲ್ದಾಣ ತಲುಪಿದ್ದಾನೆ. ಅಲ್ಲಿ ಬಾಡಿಗೆ ಸ್ಕೂಟರ್‌ ಪಡೆದು ಪಣಜಿ ಬಸ್‌ ನಿಲ್ದಾಣಕ್ಕೆ ಬಂದಿದ್ದಾನೆ. ಅದೇ ರಾತ್ರಿ 8.16ಕ್ಕೆ ಕೆಎ 26 ಎಫ್‌ 962 ಪಣಜಿ-ಗದಗ ಬೆಟಗೇರಿ ಕೆಎಸ್‌ಆರ್‌ಟಿಸಿ ಬಸ್‌ ಮೂಲಕ ಮಾ.12ರ ಮಧ್ಯರಾತ್ರಿ 1ಕ್ಕೆ ಧಾರವಾಡ ಬಸ್‌ ನಿಲ್ದಾಣಕ್ಕೆ ಆಗಮಿಸಿದ್ದಾನೆ. ಬಳಿಕ ಆಟೋ ಮೂಲಕ ಧಾರವಾಡದ ಹೊಸಯಲ್ಲಾಪುರದಲ್ಲಿರುವ ತನ್ನ ಮನೆ ತಲುಪಿದ್ದಾನೆ.

4 ದಿನ ಸುತ್ತಾಟ: ಹೀಗೆ ಆಸ್ಪ್ರೇಲಿಯಾದಿಂದ ಆಗಮಿಸಿದ್ದವ 4 ದಿನಗಳ ಕಾಲ ಧಾರವಾಡದಲ್ಲಿ ಅಲೆದಾಡಿದ್ದು, ನಂತರ ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ ಕಂಡುಬಂದಿದೆ. ಮಾ.17ರಂದು ಸ್ಪಂದನಾ ಆಸ್ಪತ್ರೆಗೆ ಭೇಟಿ ನೀಡಿದ್ದಾನೆ. ಮಾ.18ರಿಂದ 21ರ ವರೆಗೆ ಒಪಿಡಿ ಸಂಖ್ಯೆ 6ರೊಂದಿಗೆ ಖಾಸಗಿ ಆಸ್ಪತ್ರೆಯೊಂದರ ರೂಮ್‌ ನಂ.4ರಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಇದೀಗ ಈ ವ್ಯಕ್ತಿ ಪ್ರಯಾಣಿಸಿರುವ ವಿಮಾನ, ಬಸ್‌ನಲ್ಲಿದ್ದ ಇತರ ಪ್ರಯಾಣಿಕರು, ಆಟೋ ಚಾಲಕ, ಆತ ಚಿಕಿತ್ಸೆ ಪಡೆದ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಹಾಗೂ ಆ ಸಮಯದಲ್ಲಿ ಅಲ್ಲಿದ್ದವರಿಗೂ ಸೋಂಕು ತಗಲಿರುವ ಆತಂಕ ಶುರುವಾಗಿದೆ.