ತುಂಗಭದ್ರಾ ಡ್ಯಾಂ: ಕ್ರಸ್ಟ್ ಗೇಟ್ ಮುರಿದಿದ್ದು ಹೇಗೆ? ದುರಸ್ತಿಗೆ ಎಷ್ಟು ದಿನ ಬೇಕು? ನದಿಗೆ ಹರಿದುಹೋದ ನೀರೆಷ್ಟು?

ಎರಡು ವರ್ಷಗಳ ಬಳಿಕ ಭರ್ತಿಯಾಗಿದ್ದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಶನಿವಾರ ರಾತ್ರಿ ಕೊಚ್ಚಿಹೋಗಿ ಆತಂಕ ಸೃಷ್ಟಿಯಾಗಿದೆ. ಕ್ರಸ್ಟ್‌ಗೇಟ್‌ನ ಸರಪಳಿ ತುಂಡಾಗಿ ಈ ದುರಂತ ಸಂಭವಿಸಿದ್ದು, ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಉಳಿದ 32 ಗೇಟ್‌ಗಳನ್ನೂ ತೆರೆದು ಸುಮಾರು ಒಂದು ಲಕ್ಷ ಕ್ಯುಸೆಕ್‌ವರೆಗೆ ನೀರು ಹೊರಬಿಡಲಾಗುತ್ತಿದೆ.

TB Dam gate washed away  how did the crust gate break rav

- ಸೋಮರಡ್ಡಿ ಅಳವಂಡಿ

 ಕೊಪ್ಪಳ  : ಎರಡು ವರ್ಷಗಳ ಬಳಿಕ ಭರ್ತಿಯಾಗಿದ್ದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಶನಿವಾರ ರಾತ್ರಿ ಕೊಚ್ಚಿಹೋಗಿ ಆತಂಕ ಸೃಷ್ಟಿಯಾಗಿದೆ. ಕ್ರಸ್ಟ್‌ಗೇಟ್‌ನ ಸರಪಳಿ ತುಂಡಾಗಿ ಈ ದುರಂತ ಸಂಭವಿಸಿದ್ದು, ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಉಳಿದ 32 ಗೇಟ್‌ಗಳನ್ನೂ ತೆರೆದು ಸುಮಾರು ಒಂದು ಲಕ್ಷ ಕ್ಯುಸೆಕ್‌ವರೆಗೆ ನೀರು ಹೊರಬಿಡಲಾಗುತ್ತಿದೆ.

ಕಿತ್ತುಹೋಗಿರುವ ಕ್ರಸ್ಟ್‌ಗೇಟ್‌ ರಿಪೇರಿಗೆ ಜಲಾಶಯದ ಅರ್ಧಕ್ಕರ್ಧ ನೀರು (52 ಟಿಎಂಸಿ) ಖಾಲಿ ಮಾಡುವುದು ಅನಿವಾರ್ಯ ಎಂದು ತಜ್ಞರು ಹೇಳಿರುವ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿಯಿಂದಲೇ ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣ ಹೆಚ್ಚಾದರೂ ಅಚ್ಚರಿ ಇಲ್ಲ. ಹೀಗಾಗಿ ಕರ್ನಾಟಕ ಸೇರಿ ಮೂರೂ ರಾಜ್ಯಗಳ ನದಿಪಾತ್ರದ ಜನರಿಗೆ ಕಟ್ಟೆಚ್ಚರದಿಂದಿರುವಂತೆ ಘೋಷಿಸಲಾಗಿದೆ. ಒಂದು ವೇಳೆ ಇಷ್ಟೊಂದು ಪ್ರಮಾಣದ ನೀರು ಹರಿಸಿದ್ದೇ ಆದರೆ ಕೊಪ್ಪಳ, ರಾಯಚೂರು ಜಿಲ್ಲೆಗಳ ನದಿಪಾತ್ರದ ನೂರಾರು ಎಕರೆ ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಮನೆ ಮಾಡಿದೆ.

ತುಂಗಭದ್ರಾ ಡ್ಯಾಂ ಒಡೆದ ವದಂತಿ: ರಾತ್ರಿಯೇ ಗಂಟುಮೂಟೆ ಕಟ್ಟಿದ ಮೀನುಗಾರರು!

ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ಬಳಕೆ ಮಾಡಿ ಕ್ರಸ್ಟ್ ಗೇಟ್ ದುರಸ್ತಿ ಕಸರತ್ತು ಈಗಾಗಲೇ ಆರಂಭವಾಗಿದೆ. ಇದಕ್ಕಾಗಿ ಆಂಧ್ರ, ತೆಲಂಗಾಣ ಹಾಗೂ ಮುಂಬೈಯಿಂದ ತಂತ್ರಜ್ಞರ ತಂಡವನ್ನು ಕರೆಸಿಕೊಳ್ಳಲಾಗಿದ್ದು, ಹಳೇ ಗೇಟ್‌ನ ಜಾಗದಲ್ಲಿ ಹೊಸ ಗೇಟ್‌ ಅಳವಡಿಸಲು ಕನಿಷ್ಠ ನಾಲ್ಕೈದು ದಿನಗಳಾದರೂ ಬೇಕಾಗಬಹುದು ಎಂದು ಹೇಳಲಾಗುತ್ತಿದೆ.

ಒಟ್ಟು 133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಈ ಜಲಾಶಯದಲ್ಲಿ ಹೂಳಿನ ಸಮಸ್ಯೆಯಿಂದಾಗಿ ಸದ್ಯ 105 ಟಿಎಂಸಿ ಅಷ್ಟೇ ನೀರು ಸಂಗ್ರಹಿಸಲು ಸಾಧ್ಯವಿದೆ. ಕಳೆದ ತಿಂಗಳಷ್ಟೇ ಜಲಾಶಯ ಭರ್ತಿಯಾಗಿದ್ದು, ಈ ಡ್ಯಾಂ ನಂಬಿಕೊಂಡಿರುವ ಕರ್ನಾಟಕದ 9.65 ಲಕ್ಷ ಸೇರಿ ಆಂಧ್ರ, ತೆಲಂಗಾಣ ಹೀಗೆ ಮೂರು ರಾಜ್ಯಗಳ 13 ಲಕ್ಷ ಎಕ್ರೆ ಪ್ರದೇಶದ ರೈತರಲ್ಲಿ ಸಂತಸ ಮನೆಮಾಡಿತ್ತು. ಈ ನಡುವೆ, ಶನಿವಾರ ತಡರಾತ್ರಿ ಸುಮಾರು 11.30ಕ್ಕೆ ಕ್ರಸ್ಟ್ ಗೇಟ್ ಮೇಲೆತ್ತುವ ಸರಪಳಿ ತುಂಡಾಗಿ ಭಾರೀ ಸದ್ದಿನೊಂದಿಗೆ ಗೇಟ್‌ ಕೊಚ್ಚಿ ಹೋಗಿದ್ದು, ಇದರಿಂದ ಒಂದೇ ಕ್ರಸ್ಟ್ ಗೇಟ್‌ನಿಂದ 35 ಸಾವಿರ ಕ್ಯುಸೆಕ್ ನೀರು ಹೊರ ಹೋಗಲು ಆರಂಭಿಸಿದೆ. ಒಂದೇ ಗೇಟ್‌ನಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದ್ದ ಹಿನ್ನೆಲೆಯಲ್ಲಿ ಜಲಾಶಯ ಕಂಪಿಸಲು ಆರಂಭಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶನಿವಾರ ರಾತ್ರಿಯೇ ಉಳಿದ ಗೇಟ್‌ಗಳಿಂದಲೂ ನೀರು ಹೊರಬಿಡಲಾಗುತ್ತಿದೆ. ಹೀಗಾಗಿ ಭಾನುವಾರ ರಾತ್ರಿ ವೇಳೆಗೆ ಒಂದು ಲಕ್ಷಕ್ಕೂ ಅಧಿಕ ಕ್ಯುಸೆಕ್‌ ನೀರು ನದಿಗೆ ಹರಿದು ಹೋಗುತ್ತಿದ್ದು, ಹಂಪಿಯ ಕೆಲ ಸ್ಮಾರಕಗಳು ಜಲಾವೃತವಾಗಿವೆ.

ಗೇಟ್ ಮುರಿದಿದ್ದು ಹೇಗೆ?

ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ ಈವರೆಗೂ ಕ್ರಸ್ಟ್ ಗೇಟ್ ಮುರಿದು, ಈ ರೀತಿಯ ಅವಾಂತರ ಸೃಷ್ಟಿಯಾದ ಉದಾಹರಣೆ ಇಲ್ಲ. ಗೇಟ್ ಕೆಲವೊಂದು ಬಾರಿ ಜಾಮ್ ಆಗಿ, ಒಂದೆರಡು ದಿನ ಕಾಲ ರಿಪೇರಿ ಮಾಡಿದ ಉದಾಹರಣೆ ಇದೆ. ಈ ಬಾರಿ 19ನೇ ಕ್ರಸ್ಟ್ ಗೇಟ್ ಮುರಿದಿದ್ದು ಅಲ್ಲದೆ ಕೊಚ್ಚಿಕೊಂಡು ಹೋಗಿದೆ. ಕ್ರಸ್ಟ್ ಗೇಟ್‌ಗೆ ಹಾಕಿರುವ ಚೈನ್ ಕೊಂಡಿ ಮುರಿದು ಈ ದುರಂತ ಸಂಭವಿಸಿದೆ. ಚೈನ್ ತುಂಡಾಗಿದ್ದರೂ ಗೇಟ್ ನೆಲಕ್ಕೆ ಕುಸಿದು ಬೀಳಬೇಕಾಗಿತ್ತು. ಆದರೆ, ಅದು ಕೊಚ್ಚಿಕೊಂಡು ಹೋಗಿರುವುದರಿಂದ ನೀರಿನಲ್ಲಿ ಹರಿದು ಬಂದ ಯಾವುದೋ ವಸ್ತು ಬಲವಾಗಿ ಗುದ್ದಿದ್ದರಿಂದ ಹೀಗಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಭಾರೀ ಸದ್ದು, ಕಂಪಿಸಿದ ಡ್ಯಾಂ

ನದಿ ಅಕ್ಕಪಕ್ಕದಲ್ಲಿನ ಮೀನಗಾರರು ಏಕಾಏಕಿ ನದಿಯಲ್ಲಿ ನೀರು ಏರಿಕೆಯಾಗಿದ್ದನ್ನು ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಈ ವೇಳೆಗಾಗಲೇ ತುಂಗಭದ್ರಾ ಜಲಾಶಯದ ಮೇಲೆ ದೊಡ್ಡದಾದ ಸದ್ದು ಬಂದಿದ್ದರಿಂದ ರಾತ್ರಿ ಪಾಳಿಯ ಸಿಬ್ಬಂದಿ ನೋಡಿ ಪರಿಶೀಲಿಸಿದ್ದಾರೆ. ತಕ್ಷಣ ಮೇಲಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಕೊಪ್ಪಳ, ವಿಜಯನಗರ ಆಡಳಿತಾಧಿಕಾರಿಗಳು ಹಾಗೂ ತುಂಗಭದ್ರಾ ಕಾಡಾ ಮತ್ತು ತುಂಗಭದ್ರಾ ಬೋರ್ಡ್ ಅಧಿಕಾರಿಗಳು ಧಾವಿಸಿ, ಪರಿಶೀಲಿಸಿದಾಗ ಕ್ರಸ್ಟ್ ಗೇಟ್ ಮುರಿದು ನೀರು ಪೋಲಾಗುತ್ತಿರುವ ವಿಷಯ ಗೊತ್ತಾಗಿದೆ. ಹೀಗೆ, ಒಂದೇ ಕ್ರಸ್ಟ್ ಗೇಟ್‌ನಲ್ಲಿ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿದ್ದರಿಂದ ಜಲಾಶಯ ಕಂಪಿಸಲಾರಂಭಿಸಿದೆ. ಈ ವೇಳೆಗಾಗಲೇ (ಮಧ್ಯರಾತ್ರಿ) ಶಾಸಕ ರಾಘವೇಂದ್ರ ಹಿಟ್ನಾಳ, ಸಚಿವ ಶಿವರಾಜ ತಂಗಡಗಿ ಮತ್ತಿತರರು ಆಗಮಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಆ ಬಳಿಕ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಮತ್ತಷ್ಟು ಗೇಟ್‌ಗಳ ಮೂಲಕ ನೀರನ್ನು ನದಿಗೆ ಬಿಡಲು ನಿರ್ಧರಿಸಲಾಯಿತು.

 52 ಟಿಎಂಸಿ ನೀರು ನದಿಗೆ

ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ಜಲಾಶಯದಲ್ಲಿದ್ದ 105 ಟಿಎಂಸಿ ನೀರು ಪೈಕಿ 52 ಟಿಎಂಸಿ ನೀರನ್ನು ನದಿಗೆ ಬಿಡಬೇಕಾಗಿದೆ. ಏಕಾಏಕಿ ಬಿಟ್ಟರೆ ನದಿಯಲ್ಲಿ ಪ್ರವಾಹ ನಿರ್ಮಾಣವಾಗಿ ಮತ್ತೊಂದು ದುರಂತಕ್ಕೆ ಕಾರಣವಾಗುತ್ತದೆ. ಹೀಗಾಗಿ, ಈಗ ಜಲಾಶಯದಿಂದ ಒಂದು ಲಕ್ಷಕ್ಕೂ ಅಧಿಕ ನೀರು ಬಿಡಲಾಗುತ್ತಿದೆ. ಪ್ರತಿ ನಿತ್ಯ ಹತ್ತು ಟಿಎಂಸಿಗೂ ಅಧಿಕ ನೀರನ್ನು ನದಿಗೆ ಬಿಟ್ಟು, ಜಲಾಶಯದ ನೀರು ಕಡಿಮೆ ಮಾಡುವ ಪ್ರಯತ್ನ ನಡೆದಿದೆ.

ಡ್ಯಾಂ ನ್ಯಾಗ್‌ ನೀರ್‌ ಇಲ್ಲಂದ್ರ ಮುಂದೆ ನಮ್ಮ ಗತಿ ಹೆಂಗ? ತುಂಗಭದ್ರಾ ಕ್ರಸ್ಟ್‌ ಗೇಟ್ ಕಳಚಿದ್ದಕ್ಕೆ ರೈತರು ಕಣ್ಣೀರು!

ದುರಸ್ತಿಗೆಷ್ಟು ದಿನ ಬೇಕು? ಐದಾ ಅಥವಾ ಹತ್ತಾ?

ಸದ್ಯ ಐದು ದಿನಗಳಲ್ಲೇ ಗೇಟ್‌ ದುರಸ್ತಿ ಮಾಡಲಾಗುತ್ತದೆ ಎಂದು ಮಾಹಿತಿ ಇದೆಯಾದರೂ ಹತ್ತು ದಿನಗಳು ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜಲಾಶಯದಿಂದ ನದಿಗೆ ನೀರು ಹರಿಸಿ ಪರಿಸ್ಥಿತಿ ನಿರ್ವಹಣೆಗೆ 6-8 ದಿನ ಬೇಕಾಗುತ್ತದೆ.

Latest Videos
Follow Us:
Download App:
  • android
  • ios