ಡ್ಯಾಂ ನ್ಯಾಗ್‌ ನೀರ್‌ ಇಲ್ಲಂದ್ರ ಮುಂದೆ ನಮ್ಮ ಗತಿ ಹೆಂಗ? ತುಂಗಭದ್ರಾ ಕ್ರಸ್ಟ್‌ ಗೇಟ್ ಕಳಚಿದ್ದಕ್ಕೆ ರೈತರು ಕಣ್ಣೀರು!

ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರು ನದಿಗ್‌ ಹೆಂಗ್‌ ಹೊಂಟೈತಿ ನೋಡ್ರಿ. ಈ ನೀರು ಡ್ಯಾಂನ್ಯಾಗ್‌ ಇದ್ದಿದ್ರ ನಮ್ಮ ಬದುಕು ಬಂಗಾರ ಆಗ್‌ತಿತ್‌. ಸಾಲ ಮಾಡಿ ಭತ್ತ ಬೆಳೆದೀನಿ. ಈಗ ಡ್ಯಾಂ ನ್ಯಾಗ್‌ ನೀರ್‌ ಇಲ್ಲಂದ್ರ ಮುಂದೆ ನಮ್ಮ ಗತಿ ಏನು ಎಂದು ಹೊಸಪೇಟೆಯ ರೈತ ಪ್ರಕಾಶ್‌ ಪ್ರಶ್ನೆ

Tungabhadra dam gate washed away farmers tears at hospet rav

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ (ಆ.12): ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರು ನದಿಗ್‌ ಹೆಂಗ್‌ ಹೊಂಟೈತಿ ನೋಡ್ರಿ. ಈ ನೀರು ಡ್ಯಾಂನ್ಯಾಗ್‌ ಇದ್ದಿದ್ರ ನಮ್ಮ ಬದುಕು ಬಂಗಾರ ಆಗ್‌ತಿತ್‌. ಸಾಲ ಮಾಡಿ ಭತ್ತ ಬೆಳೆದೀನಿ. ಈಗ ಡ್ಯಾಂ ನ್ಯಾಗ್‌ ನೀರ್‌ ಇಲ್ಲಂದ್ರ ಮುಂದೆ ನಮ್ಮ ಗತಿ ಏನು ಎಂದು ಹೊಸಪೇಟೆಯ ರೈತ ಪ್ರಕಾಶ್‌ ಪ್ರಶ್ನೆ ಮಾಡಿದರೆ ಅಲ್ಲಿದ್ದವರ ಬಳಿ ಉತ್ತರವೇ ಇರಲಿಲ್ಲ.

ಜಲಾಶಯದ ಗೇಟ್‌ ನಂ.19 ಕಳಚಿ ಬಿದ್ದು, ಈಗ ಜಲಾಶಯದಿಂದ ಒಂದು ಲಕ್ಷ ಕ್ಯುಸೆಕ್‌ ನೀರು ಅನಿವಾರ್ಯವಾಗಿ ನದಿಗೆ ನೀರು ಬಿಡಲಾಗುತ್ತಿದೆ. ಮೂರು ದಿನಗಳಲ್ಲಿ ಜಲಾಶಯದಿಂದ 52 ಟಿಎಂಸಿ ನೀರು ಹೊರ ಬಿಡಬೇಕಿದೆ. ಈಗ ಜಲಾಶಯದಿಂದ ನೀರು ಖಾಲಿ ಮಾಡುತ್ತಿರುವ ವಿಷಯ ಕೇಳಿ ರೈತರು ಆತಂಕದಲ್ಲಿದ್ದಾರೆ. ಈ ನಡುವೆ ತುಂಗಭದ್ರಾ ಮಂಡಳಿ, ಜಲಸಂಪನ್ಮೂಲ ಇಲಾಖೆ ಬಳಿಯೂ ತಕ್ಷಣವೇ ಪರಿಹರಿಸಲು ಉಪಾಯ ಇಲ್ಲ. ಡ್ಯಾಂನಲ್ಲಿರುವ ಅರ್ಧದಷ್ಟು ನೀರು ಖಾಲಿ ಮಾಡಲೇಬೇಕಾದ ಸ್ಥಿತಿ ಇದೆ.

ಟಿಬಿ ಡ್ಯಾಂನ ಕ್ರಸ್ಟ್‌ಗೇಟ್‌ ಚೈನ್ ಲಿಂಕ್ ಕಟ್‌, ಅಪಾರ ನೀರು ನದಿಗೆ: ಆತಂಕದಲ್ಲಿ ನದಿ ಪಾತ್ರದ ಜನರು

ತಕ್ಷಣದ ಪರಿಹಾರ ಇಲ್ಲ:

ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ ಗೇಟ್‌ಗಳು ಒಂದು ವೇಳೆ ಕಳಚಿ ಬಿದ್ದರೆ ಹೇಗೆಂಬ ಪರ್ಯಾಯ ಉಪಾಯ ಯಾರ ಬಳಿಯೂ ಇಲ್ಲ. ಈಗ ಗೇಟ್‌ ನಂ.19 ಕಳಚಿ ಬಿದ್ದಿದೆ. ಇದಕ್ಕೆ ತಕ್ಷಣದ ಪರಿಹಾರ ಯಾರ ಬಳಿಯೂ ಇರಲಿಲ್ಲ. ಮಂಡಳಿ ಮತ್ತು ಜಲಸಂಪನ್ಮೂಲ ಇಲಾಖೆಯ ಎಂಜನಿಯರ್‌ಗಳ ಬಳಿಯೂ ಈ ಬಗ್ಗೆ ತಕ್ಷಣದ ಉಪಾಯ ಇರಲಿಲ್ಲ. ಡ್ಯಾಂನಿಂದ ಅರ್ಧ ನೀರು ಖಾಲಿ ಮಾಡಿ ಆ ಬಳಿಕವೇ ದುರಸ್ತಿ ಕಾರ್ಯ ಮಾಡುವ ಪರಿಹಾರೋಪಾಯ ಕಂಡುಕೊಳ್ಳಲಾಗಿದೆ. ಇದು ರೈತರು ಸೇರಿದಂತೆ ಜಲಾಶಯ ನೆಚ್ಚಿರುವ ಕೈಗಾರಿಕೆಗಳು, ಕುಡಿಯುವ ನೀರಿಗೆ ಅವಲಂಬಿತವಾಗಿರುವ ನಗರ, ಹಳ್ಳಿ, ಪಟ್ಟಣವಾಸಿಗಳಲ್ಲಿ ಮನೆ ಮಾಡಿದೆ.

ನೀರು ಪೋಲಾಗದಿರಲಿ:

ತುಂಗಭದ್ರಾ ಜಲಾಶಯದ ನೀರು ಪೋಲಾಗಬಾರದು, ಆದಷ್ಟು ಬೇಗ ದುರಸ್ತಿ ಮಾಡಿ ಗೇಟ್‌ ಅಳವಡಿಕೆ ಮಾಡಲಿ ಎಂದು ರೈತರು ಹಾಗೂ ಜನರು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದು ಕಂಡು ಬಂದಿತು. ಅದರಲ್ಲೂ ಹೊಸಪೇಟೆ, ಗಂಗಾವತಿ, ಕೊಪ್ಪಳ, ಬಳ್ಳಾರಿ, ರಾಯಚೂರು ಭಾಗದ ರೈತರು ಈ ಬಾರಿ ಜಲಾಶಯ ಬೇಗನೆ ಭರ್ತಿಯಾದರೂ ಈ ಸ್ಥಿತಿ ಉಂಟಾಗಬಾರದಿತ್ತು. ಗಂಗಾಮಾತೆಯನ್ನು ಶಾಂತಗೊಳಿಸಲು ವಿಶೇಷ ಪೂಜೆ ಸಲ್ಲಿಸೋಣ ಎಂದು ಗಂಗಾ ಮಾತೆಯನ್ನು ಬೇಡಿಕೊಳ್ಳುತ್ತಿದ್ದು, ಕಂಡು ಬಂದಿತು.

ಜಲಾಶಯದಿಂದ ಭಾರೀ ಪ್ರಮಾಣದ ನೀರು ನದಿಗೆ ಹರಿಬಿಟ್ಟ ಹಿನ್ನೆಲೆಯಲ್ಲಿ ಜನರು ಕೂಡ ತಂಡೋಪತಂಡವಾಗಿ ಆಗಮಿಸಿ ಹೊಸಪೇಟೆ-ಮುನಿರಾಬಾದ್‌ ಸೇತುವೆ ಬಳಿ ನಿಂತು ನೀರು ಹರಿಯುತ್ತಿರುವುದನ್ನು ಕಂಡು ಮಮ್ಮಲ ಮರುಗಿದರು. ಜಲಾಶಯದಿಂದ ಈ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದನ್ನು ಕಂಡು ರೈತರಂತೂ ಬೇಸರ ವ್ಯಕ್ತಪಡಿಸಿದರು.

ತುಂಗಭದ್ರಾ ಜಲಾಶಯದಿಂದ 98 ಟಿಎಂಸಿ ನೀರು ನದಿಪಾಲು!

ಜಲಾಶಯದ ಗೇಟ್‌ ಕಳಚಿ ಬಿದ್ದು, ಭಾರೀ ಪ್ರಮಾಣದ ನೀರು ವ್ಯರ್ಥವಾಗಿ ಹರಿಯುತ್ತಿದ್ದರೂ ಮಂಡಳಿ ಹಾಗೂ ನೀರಾವರಿ ಇಲಾಖೆಯ ಎಂಜನಿಯರ್‌ಗಳು, ಅಧಿಕಾರಿಗಳು ಮೂಕ ಪ್ರೇಕ್ಷಕರಂತೆ ಮೂರು ದಿನ ನೋಡುವ ಸ್ಥಿತಿ ನಿರ್ಮಾಣಗೊಂಡಿದೆ. ಇದು ಎಂಜನಿಯರ್‌ಗಳಿಗೂ ಸವಾಲಾಗಿ ಪರಿಣಮಿಸಿದ್ದು, ಇಂತಹ ಸಂದಿಗ್ಧ ಸ್ಥಿತಿಯಿಂದ ಪಾರು ಮಾಡುವ ಪರಿಣತ ಎಂಜಿನಿಯರ್‌ಗಳೇ ಇಲ್ಲವೇ ಎಂಬ ಪ್ರಶ್ನೆ ರೈತರಲ್ಲಿ ಎದುರಾಗಿದೆ

Latest Videos
Follow Us:
Download App:
  • android
  • ios